ADVERTISEMENT

ಧರ್ಮಮಾರ್ಗದಲ್ಲಿ ಚುನಾವಣೆ ಗೆದ್ದು ತೋರಿಸಿ: ಎಂ.ಸಿ. ಸುಧಾಕರ್

ಸಚಿವ ಕೆ.ಸುಧಾಕರ್ ವಿರುದ್ಧ ಮಾಜಿ ಶಾಸಕ ಎಂ.ಸಿ. ಸುಧಾಕರ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 26 ಜುಲೈ 2022, 5:49 IST
Last Updated 26 ಜುಲೈ 2022, 5:49 IST
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಚಿಂತನಾ ಸಮಾವೇಶದಲ್ಲಿ ಮಾಜಿ ಶಾಸಕ ಎಂ.ಸಿ. ಸುಧಾಕರ್ ಮಾತನಾಡಿದರು
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಏರ್ಪಡಿಸಿದ್ದ ಚಿಂತನಾ ಸಮಾವೇಶದಲ್ಲಿ ಮಾಜಿ ಶಾಸಕ ಎಂ.ಸಿ. ಸುಧಾಕರ್ ಮಾತನಾಡಿದರು   

ಚಿಕ್ಕಬಳ್ಳಾಪುರ: ‘ಸಚಿವ ಡಾ.ಕೆ.ಸುಧಾಕರ್‌ ಅವರು ಹಣ ಹಂಚಿ ಗೆಲ್ಲುವ ಚಾಳಿ ಬಿಡಲಿ. ಧರ್ಮಮಾರ್ಗದಲ್ಲಿ ಸಾಧನೆ ಮುಂದಿಟ್ಟು ಅಧಿಕಾರ ದುರ್ಬಳಕೆ ಮಾಡಿಕೊಳ್ಳದೆ ಚುನಾವಣೆ ಗೆದ್ದು ತೋರಿಸಲಿ’ ಎಂದು ಚಿಂತಾಮಣಿಯ ಮಾಜಿ ಶಾಸಕ ಎಂ.ಸಿ.ಸುಧಾಕರ್ ಸವಾಲೆಸೆದರು.

ನಗರದಲ್ಲಿ ಜಿಲ್ಲಾ ಕಾಂಗ್ರೆಸ್ ಏರ್ಪಡಿಸಿದ್ದ ಚಿಂತನಾ ಸಮಾವೇಶದಲ್ಲಿ ಮಾತನಾಡಿದರು.

‘ನನ್ನ ಬಳಿ ಹಣ ಇಲ್ಲ ಅವರ ಬಳಿ ಹಣ ಇದೆ. ಬೆಂಗಳೂರಿನ ಏಜೆಂಟರ ಮೂಲಕ ಹಣ ತರಿಸುವ ವಾಮಮಾರ್ಗ ಬಿಟ್ಟು ಹಣವಿಲ್ಲದೆ ನನ್ನ ಎದುರು ಚುನಾವಣೆಯಲ್ಲಿ ಗೆಲ್ಲಲಿ. ನಿಮ್ಮ ಬಾಮೈದ ಅಲ್ಲ ನೀವೇ ಬನ್ನಿ. ಸಾಧನೆ ಮುಂದಿಟ್ಟು ಚುನಾವಣೆ ಗೆಲ್ಲೋಣ’ ಎಂದು ಸವಾಲು
ಹಾಕಿದರು.

ADVERTISEMENT

ಬೆಂಗಳೂರಿನ ಹೆಸರುಘಟ್ಟದಲ್ಲಿ 26 ಎಕರೆ ಜಮೀನು ನಿಮಗೆ ಹೇಗೆ ಬಂತು. ಅದಕ್ಕೆ ಕಾಂಪೌಂಡ್ ನಿರ್ಮಿಸಲು ಎಷ್ಟು ಹಣ ಖರ್ಚು ಮಾಡಿದ್ದೀರಿ ಎಂದು ಗುಡುಗಿದರು.

‘ಕಲ್ಲುಕ್ವಾರಿ, ಜಲ್ಲಿಕ್ರಶರ್, ಮೆಟ್ರೋ ಗುತ್ತಿಗೆ, ಎಲ್ಲಿ ಎಷ್ಟು ಹಣ ಸಂಪಾದಿಸಿದ್ದೀರಿ, ಅಧಿಕಾರಿಗಳಿಂದ ಹಣವಸೂಲಿ ಮಾಡುವುದು, ವಿವಿಧ ಟ್ರಸ್ಟ್ ಮೂಲಕ ನಡೆಯುವ ವ್ಯವಹಾರ ನಮಗೂ ಗೊತ್ತಿದೆ’ ಎಂದು ತಿರುಗೇಟು ನೀಡಿದರು.

ತತ್ವ, ಸಿದ್ದಾಂತ ಮುಖ್ಯ: ‘ನೀವು ನಮ್ಮ ಮನೆಬಾಗಿಲು ಎಷ್ಟು ಬಾರಿ ತುಳಿದಿದ್ದೀರಿ, ಯಡಿಯೂರಪ್ಪ ಅವರಿಂದ ಪೋನ್ ಮಾಡಿಸಿರಲಿಲ್ಲವೆ? ಅಶ್ವತ್ಥ್ ನಾರಾಯಣ ಅವರನ್ನು ನನ್ನ ಮನವೊಲಿಸಲು ಕಳಿಸಿರಲಿಲ್ಲವೇ? ನಾನು ಎಂದಾದರೂ ನಿಮ್ಮ ಮನೆಬಾಗಿಲಿಗೆ ಬಂದಿದ್ದೆನಾ? ನಾನು ಕಾಂಗ್ರೆಸ್‌ಗೆ ಇತ್ತೀಚೆಗೆ ಬಂದಿದ್ದೇನೆ. ನಾನು ಪ್ರಾಮಾಣಿಕವಾಗಿ ಎಂಬಿಬಿಎಸ್ ಮಾಡಿದ್ದೇನೆ. ಹತ್ತು ವರ್ಷ ವೈದ್ಯನಾಗಿ ಸೇವೆ ಸಲ್ಲಿಸಿದ್ದೇನೆ. ನೀವು ಎಷ್ಟು ವರ್ಷ ಎಂಬಿಬಿಎಸ್ ಮಾಡಿದ್ದೀರಿ? ನನಗೆ ತತ್ವ ಸಿದ್ದಾಂತ ಮುಖ್ಯ ಎಂದು ಕಿಡಿಕಾರಿದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಎನ್. ಕೇಶವರೆಡ್ಡಿ, ರಾಜ್ಯ ಕಾಂಗ್ರೆಸ್ ಮುಖಂಡ ಉಗ್ರಪ್ಪ, ಬಾಗೇಪಲ್ಲಿ ಶಾಸಕ ಸುಬ್ಬಾರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.