ADVERTISEMENT

ಬೇಡಿಕೆಗಳ ಈಡೇರಿಕೆಗೆ ಕೂಲಿಕಾರರ ಆಗ್ರಹ

ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರಿಂದ ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 13:51 IST
Last Updated 4 ಜೂನ್ 2020, 13:51 IST
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.   

ಚಿಕ್ಕಬಳ್ಳಾಪುರ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ (ಎಐಎಡಬ್ಲ್ಯೂಯು) ಗುರುವಾರ ನೀಡಿದ್ದ ಕರೆ ಬೆಂಬಲಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಕಾರ್ಯಕರ್ತರು ತಾಲ್ಲೂಕು ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ, ‘ಎಲ್ಲಾ ಕೂಲಿಕಾರರ ಕುಟುಂಬಗಳಿಗೆ ತಿಂಗಳಿಗೆ ₹7,500 ರಂತೆ ಕನಿಷ್ಠ ಮೂರು ತಿಂಗಳು ಆರ್ಥಿಕ ನೆರವು ನೀಡಬೇಕು. ವಲಸೆ ಕಾರ್ಮಿಕ ಕುಟುಂಬಗಳಿಗೆ ವಿಶೇಷ ಆರ್ಥಿಕ ನೆರವು ನೀಡಬೇಕು’ ಎಂದು ಆಗ್ರಹಿಸಿದರು.

‘ಅಪಘಾತ, ಹಸಿವಿನಿಂದ ಸತ್ತವರು ಮತ್ತು ಆತ್ಮಹತ್ಯೆ ಮಾಡಿಕೊಂಡ ವಲಸೆ ಕಾರ್ಮಿಕರ ಅವಲಂಬಿತರಿಗೆ ಗರಿಷ್ಠ ಪರಿಹಾರ ನೀಡಬೇಕು. ದಿನವೊಂದಕ್ಕೆ ₹600 ವರ್ಷದಲ್ಲಿ 200 ದಿನಗಳ ಉದ್ಯೋಗ ಖಾತ್ರಿ ಕೆಲಸ ಕೊಡಬೇಕು’ ಎಂದು ಹೇಳಿದರು.

ADVERTISEMENT

‘ಪ್ರತಿ ಕೂಲಿಕಾರ ಕುಟುಂಬಕ್ಕೆ ಮುಂದಿನ ಆರು ತಿಂಗಳು ತಲಾ 10 ಕೆ.ಜಿ ಅಕ್ಕಿ ಮತ್ತು ಇತರೆ ಅಗತ್ಯ ವಸ್ತುಗಳನ್ನು ಉಚಿತವಾಗಿ ನೀಡಬೇಕು. ಎಲ್ಲಾ ನಾಗರಿಕರ, ಮುಖ್ಯವಾಗಿ ಗ್ರಾಮೀಣ ಜನತೆಯ ಆರೋಗ್ಯ ತಪಾಸಣೆಯ ವ್ಯವಸ್ಥೆಯನ್ನು ಜಾರಿಗೆ ತರಬೇಕು’ ಎಂದು ತಿಳಿಸಿದರು.

‘ಕಾರ್ಮಿಕ ಕಾಯ್ದೆಗಳನ್ನು ಕಿತ್ತು ಹಾಕಿದ್ದನ್ನು ಮರಳಿ ಜಾರಿ ಮಾಡಬೇಕು. ಸಾರ್ವಜನಿಕ ವಲಯದ ಘಟಕಗಳ ಬಂಡವಾಳ ಹಿಂಪಡೆತ ನಿಲ್ಲಿಸಬೇಕು. ವಿವಿಧ ರಂಗಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಕೈ ಬಿಡಬೇಕು’ ಎಂದರು.

‘2018 ರ ಮಾದರಿ ಗುತ್ತಿಗೆ ಕೃಷಿ ಕಾಯ್ದೆಯನ್ನು, ಮಾದರಿ ಭೂಗೇಣಿ ಕಾಯ್ದೆಯನ್ನು, ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಕೈ ಬಿಡಬೇಕು, ಸರ್ಕಾರಿ ಭೂಮಿಯನ್ನು ಮತ್ತು ಹೆಚ್ಚುವರಿ ಭೂಮಿಯನ್ನು ಭೂರಹಿತ ಕೃಷಿ ಕೂಲಿಕಾರರಿಗೆ, ದಲಿತರಿಗೆ ವಿತರಣೆ ಮಾಡಬೇಕು’ ಎಂದು ಒತ್ತಾಯಿಸಿದರು.

ಮುಖಂಡರಾದ ಬಿ.ಎನ್.ಮುನಿಕೃಷ್ಣಪ್ಪ, ಕೆ.ಆರ್.ಮಂಜುಳಾ, ರತ್ನಮ್ಮ, ಮುನಿಯಪ್ಪ, ಬಸವರಾಜು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.