ADVERTISEMENT

ಚಿಕ್ಕಬಳ್ಳಾಪುರ | ಕಟ್ಟಡ ಕಲ್ಲು; ಅಕ್ರಮಕ್ಕೆ ಬೀಳುತ್ತಿಲ್ಲ ತಡೆ

ಜಿಲ್ಲೆಯಲ್ಲಿ 136 ಕಟ್ಟಡ ಕಲ್ಲು ಗಣಿ ಗುತ್ತಿಗೆ; ಅಕ್ರಮ ಪತ್ತೆ ಮಾತ್ರ ಆರು!

ಡಿ.ಎಂ.ಕುರ್ಕೆ ಪ್ರಶಾಂತ
Published 16 ಜುಲೈ 2024, 7:44 IST
Last Updated 16 ಜುಲೈ 2024, 7:44 IST
<div class="paragraphs"><p>ಸಾಂದರ್ಭಿಕ ಚಿತ್ರ&nbsp;</p></div>

ಸಾಂದರ್ಭಿಕ ಚಿತ್ರ 

   

ಚಿಕ್ಕಬಳ್ಳಾಪುರ: ರಾಜಧಾನಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲ ಜಿಲ್ಲೆಗಳ ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಚಿಕ್ಕಬಳ್ಳಾಪುರ ಜಿಲ್ಲೆಯಿಂದ ಎಂ.ಸ್ಯಾಂಡ್, ಜಲ್ಲಿ ಕಲ್ಲು, ಕಟ್ಟಡ ನಿರ್ಮಾಣದ ಕಲ್ಲುಗಳು ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಕಚ್ಚಾ ಸಾಮಗ್ರಿಗಳು ಪೂರೈಕೆ ಆಗುತ್ತಿವೆ. 

ಗಣಿಗಾರಿಕೆಯಿಂದ ತೊಂದರೆ ಒಳಗಾದವರು ಜಿಲ್ಲೆಯ ಅಲ್ಲಿಲ್ಲಿ ಆಗಾಗ್ಗೆ ಗಣಿಗಾರಿಕೆಯ ವಿರುದ್ಧ ಪ್ರತಿಭಟನೆಗಳನ್ನು ನಡೆಸುವರು. ಜಿಲ್ಲೆಯಲ್ಲಿ ಗಣಿ ಅಕ್ರಮಗಳು ಸದ್ದು ಸಹ ಕೇಳಿ ಬರುತ್ತದೆ.

ADVERTISEMENT

ಆದರೆ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಕಟ್ಟಡ ಕಲ್ಲು ಗಣಿಗಾರಿಕೆಯ ಅಕ್ರಮಗಳಿಗೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳನ್ನು ನೋಡಿದರೆ  ಅಕ್ರಮಗಳ ತಡೆಗೆ ಕಠಿಣ ಕ್ರಮಗಳಾಗುತ್ತಿಲ್ಲ ಎನ್ನುವ ಅನುಮಾನವನ್ನು ಜನರಲ್ಲಿ ಮೂಡಿಸುತ್ತದೆ.

2023–24ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಕಟ್ಟಡ ಕಲ್ಲು ಅಕ್ರಮಕ್ಕೆ ಸಂಬಂಧಿಸಿದಂತೆ ಆರು ಪ್ರಕರಣಗಳು ಪತ್ತೆ ಹಚ್ಚಲಾಗದ್ದು ಎರಡು ಪ್ರಕರಣಗಳಲ್ಲಿ ಮೊಕದ್ದಮೆ ದಾಖಲಿಸಲಾಗಿತ್ತು. ₹ 10.64 ಲಕ್ಷ ದಂಡ ಸಹ ವಿಧಿಸಲಾಗಿದೆ. ಕಟ್ಟಡ ಕಲ್ಲುಗಳ  ಅಕ್ರಮ ಸಾಗಾಣಿಕೆಗೆ ಸಂಬಂಧಿಸಿದಂತೆ 248 ಪ್ರಕರಣಗಳನ್ನು ದಾಖಲಿಸಲಾಗಿದೆ. ₹ 86.81 ಲಕ್ಷ ದಂಡ ವಿಧಿಸಲಾಗಿದೆ. ಹೀಗೆ ಕಟ್ಟಡ ಕಲ್ಲು ಗಣಿಗಾರಿಕೆ ಮತ್ತು ಸಾಗಾಣಿಕೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 2023–24ರಲ್ಲಿ ಒಟ್ಟು ₹ 97.45 ಲಕ್ಷ ದಂಡವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವಿಧಿಸಿದೆ.

2024–25ವೇ ಸಾಲಿನ ಜೂನ್ ಅಂತ್ಯದವರೆಗೆ ಕಟ್ಟಡ ಕಲ್ಲು ಗಣಿಗಾರಿಕೆಗೆ ಸಂಬಂಧಿಸಿದಂತೆ ಮೂರು ಪ್ರಕರಣ ಪತ್ತೆ ಹಚ್ಚಲಾಗಿದೆ. ಈ ಪೈಕಿ ಒಂದು ಪ್ರಕರಣದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ. ₹ 20 ಸಾವಿರ ದಂಡ ವಿಧಿಸಲಾಗಿದೆ. ಕಟ್ಟಡ ಕಲ್ಲು ಸಾಗಾಣಿಕೆಗೆ ಸಂಬಂಧಿಸಿದಂತೆ 91 ಪ್ರಕರಣಗಳನ್ನು ಪತ್ತೆ ಮಾಡಲಾಗಿದ್ದು ₹ 17.53 ಲಕ್ಷ ದಂಡ ವಿಧಿಸಲಾಗಿದೆ. ಈ ವರ್ಷ ಕಟ್ಟಡ ಕಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಜೂನ್ ಅಂತ್ಯದವರೆಗೆ ₹ 17.73 ಲಕ್ಷ ದಂಡ ವಸೂಲಾಗಿದೆ. ಈ ಮೊತ್ತ ಮತ್ತು ಪ್ರಕರಣ ಮತ್ತಷ್ಟು ಹೆಚ್ಚುವುದು ಖಚಿತ.

ಜಿಲ್ಲೆಯಲ್ಲಿ ದಾಖಲಾಗಿರುವ ಗಣಿ ಸಂಬಂಧಿತ ಪ್ರಕರಣಗಳಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆ ಮತ್ತು ಸಾಗಾಣಿಕೆಯ ಪ್ರಕರಣಗಳೇ ಅಧಿಕವಾಗಿವೆ. 

2023–24ರಲ್ಲಿ ಅಲಂಕಾರಿಕ ಶಿಲೆಗಳ ಗಣಿಗಾರಿಕೆಗೆ ಸಂಬಂಧಿಸಿದಂತೆ ಮೂರು ಪ್ರಕರಣ ದಾಖಲಾಗಿದ್ದು ₹ 1 ಲಕ್ಷ ದಂಡ ವಿಧಿಸಲಾಗಿದೆ. ಅಲಂಕಾರಿಕ ಶಿಲೆಗಳ ಸಾಗಾಣಿಕೆ ವಿಚಾರವಾಗಿ ನೋಡುವುದಾದರೆ ಇದೇ ಸಾಲಿನಲ್ಲಿ 63 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದೆ. ₹ 18.27 ಲಕ್ಷ ದಂಡ ವಿಧಿಸಲಾಗಿದೆ. ಚೈನಾಕ್ಲೈ, ಮುರುಮ್ ಉಪಖನಿಜ ಸಾಗಾಣಿಕೆಗೆ ಸಂಬಂಧಿಸಿದಂತೆ ತಲಾ ಒಂದು ಪ್ರಕರಣ ಪತ್ತೆ ಹಚ್ಚಲಾಗಿದೆ. ಚೈನಾಕ್ಲೈ ಸಾಗಾಣಿಕೆಗೆ ₹ 92,400 ಮತ್ತು ಮುರುಮ್ ಸಾಗಾಣಿಕೆಗೆ ₹ 26,800 ದಂಡ ವಿಧಿಸಲಾಗಿದೆ. ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಿದ್ದಕ್ಕೆ 48 ಪ್ರಕರಣಗಳು ದಾಖಲಾಗಿವೆ. ₹ 12.69 ಲಕ್ಷ ದಂಡ ವಿಧಿಸಲಾಗಿದೆ. 

2024–25ನೇ ಸಾಲಿನ ಜೂನ್ ಅಂತ್ಯದ ವೇಳೆಗೆ ಅಲಂಕಾರಿಕ ಶಿಲೆಗಳ ಸಾಗಾಣಿಕೆಗೆ ಸಂಬಂಧಿಸಿದಂತೆ ಮೂರು ಪ್ರಕರಣ ಪತ್ತೆ ಹಚ್ಚಿದ್ದು ₹ 82,340 ದಂಡ ವಿಧಿಸಲಾಗಿದೆ. ಮರಳು ಸಾಗಾಣಿಕೆಗೆ ಸಂಬಂಧಿಸಿದಂತೆ ಎಂಟು ಪ್ರಕರಣಗಳಲ್ಲಿ ₹ 2.11 ಲಕ್ಷ ದಂಡ ವಿಧಿಸಲಾಗಿದೆ. 

ಬೆಂಗಳೂರಿನ ಕಟ್ಟಡ ನಿರ್ಮಾಣಕ್ಕೆ ಅತಿ ಹೆಚ್ಚು ಕಚ್ಛಾ ಸಾಮಗ್ರಿಗಳು ಚಿಕ್ಕಬಳ್ಳಾಪುರದಿಂದ ಪೂರೈಕೆ ಆಗುತ್ತಿದೆ. ಹೊರ ಜಿಲ್ಲೆ ಮತ್ತು ಹೊರ ರಾಜ್ಯದ ಉದ್ಯಮಿಗಳು ಸಹ ಜಿಲ್ಲೆಯಲ್ಲಿ ಕಟ್ಟಡ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ.  

ನಿತ್ಯವೂ ನೂರಾರು ಲಾರಿಗಳಲ್ಲಿ ಎಂ.ಸ್ಯಾಂಡ್, ಜಲ್ಲಿಕಲ್ಲುಗಳು ಹೊರ ಜಿಲ್ಲೆಗಳಿಗೆ ಪೂರೈಕೆ ಆಗುತ್ತಿವೆ. ನಿಗದಿತ ಮಿತಿಗಿಂತಲೂ ಹೆಚ್ಚಿನ ಸರಕನ್ನು ಟಿಪ್ಪರ್‌ಗಳಿಗೆ ತುಂಬಿಸಿ ಸಾಗಿಸಲಾಗುತ್ತಿದೆ ಎನ್ನುವ ದೂರುಗಳು ಸಹ ಇವೆ. ಇದರಿಂದ ನಮ್ಮ ಗ್ರಾಮಗಳ ರಸ್ತೆಗಳು ಹಾಳಾಗಿವೆ ಎಂದು ಜಡಲ ತಿಮ್ಮನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಜನರು ಪ್ರತಿಭಟನೆ ಸಹ ನಡೆಸಿದ್ದಾರೆ. 

ಹೀಗೆ ಪ್ರತಿಭಟನೆಗಳು ಜೋರಾದ ವೇಳೆ, ಅಕ್ರಮದ ಸದ್ದುಗಳು ಕೇಳಿ ಬಂದಾಗ ಅಥವಾ ರಾಜಕೀಯ ಸೂಚನೆಗಳ ಹಿನ್ನೆಲೆಯಲ್ಲಿ ಅಧಿಕಾರಿಗಳು ಆಗಾಗ್ಗೆ ಎಚ್ಚೆತ್ತು ಗಣಿ ಅಕ್ರಮಗಳ ವಿರುದ್ಧ ಮತ್ತು ಸಾಗಾಣಿಕೆ ವಿರುದ್ಧ ಗುಡುಗುವರು. ಆದರೆ ಆ ಗುಡುಗು ನಿರಂತವಾಗಿ ಮಾತ್ರ ಇರುವುದಿಲ್ಲ. 

ಜಿಲ್ಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಗಣಿಕಾರಿಕೆ ನಡೆಯುತ್ತಿರುವುದು ಮತ್ತು ಟಿಪ್ಪರ್‌ಗಳ ಮೂಲಕ ಕಚ್ಚಾ ಸಾಮಗ್ರಿಗಳ ಸಾಕಾಟ ನಡೆಯುತ್ತಿದೆ. ಆದರೆ ಪ್ರಕರಣಗಳು ದಾಖಲಾಗಿರುವುದನ್ನು ನೋಡಿದರೆ ಅಕ್ರಮ ತಡೆಗೆ ಕಾರ್ಯಾಚರಣೆಗಳು ಕಠಿಣವಾಗಿಲ್ಲ ಎನ್ನುವುದನ್ನು ಸಾರುತ್ತಿವೆ.

ಜಿಲ್ಲೆಯಲ್ಲಿ ಕಲ್ಲುಪುಡಿ ಮಾಡುವ ಘಟಕಗಳು ಮತ್ತು ಕಟ್ಟಡ ಕಲ್ಲುಗುತ್ತಿಗೆ ವಿವರ

ತಾಲ್ಲೂಕು;ಕ್ರಷರ್‌ಗಳು;ಕಟ್ಟಡಕಲ್ಲು
ಬಾಗೇಪಲ್ಲಿ;2;3
ಚಿಕ್ಕಬಳ್ಳಾಪುರ;57;86
ಚಿಂತಾಮಣಿ;3;9
ಗೌರಿಬಿದನೂರು;2;2
ಗುಡಿಬಂಡೆ;15;24
ಶಿಡ್ಲಘಟ್ಟ;0;12
ಒಟ್ಟು;79;136

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.