ADVERTISEMENT

ಗುಡಿಬಂಡೆ | ನಾಪತ್ತೆಯಾದ 9 ಹಕ್ಕುಪತ್ರ! ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 19 ಜುಲೈ 2025, 4:00 IST
Last Updated 19 ಜುಲೈ 2025, 4:00 IST
ಗುಡಿಬಂಡೆ ಪಟ್ಟಣ ಪಂಚಾಯಿತಿ ಕಚೇರಿ
ಗುಡಿಬಂಡೆ ಪಟ್ಟಣ ಪಂಚಾಯಿತಿ ಕಚೇರಿ   

ಗುಡಿಬಂಡೆ: ಪಟ್ಟಣ ಪಂಚಾಯಿತಿಯಿಂದ ಬಡವರಿಗೆ ನೀಡಿದ ಖಾಲಿ ನಿವೇಶನಗಳ ಹಕ್ಕು ಪತ್ರಗಳಲ್ಲಿ 9 ಹಕ್ಕುಪತ್ರಗಳು ಮುಖ್ಯಾಧಿಕಾರಿ ಗಮನಕ್ಕೆ ಬಾರದೆ ನಾಪತ್ತೆಯಾಗಿದೆ. 

ಇತ್ತೀಚೆಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ನೇತೃತ್ವದಲ್ಲಿ ಸುಮಾರು 10 ವರ್ಷದ ಹಿಂದೆ ರಸ್ತೆ ಅಗಲೀಕರಣದಲ್ಲಿ ಮನೆ ಕಳೆದುಕೊಂಡವರಿಗೆ ನಿವೇಶನ ನೀಡುವ ಸಲುವಾಗಿ ಬ್ರಾಹ್ಮಣರಹಳ್ಳಿ ಗ್ರಾಮಕ್ಕೆ ಹೋಗುವ ರಸ್ತೆ ಸಮೀಪದಲ್ಲಿ ಸರ್ಕಾರಿ ಜಮೀನು ಗುರುತಿಸಿ ನಿವೇಶನಗಳನ್ನು ವಿಂಗಡಿಸಿ ಸುಮಾರು 58 ಹಕ್ಕುಪತ್ರದಲ್ಲಿ 40 ಜನರಿಗೆ ಹಕ್ಕುಪತ್ರಗಳನ್ನು ವಿತರಣೆ ಮಾಡಿದ್ದರು.

ವಿತರಣೆಯಾಗದ ಹಕ್ಕುಪತ್ರಗಳನ್ನು ಮುಖ್ಯಾಧಿಕಾರಿ ತಮ್ಮ ಕಚೇರಿಯಲ್ಲಿಯೇ ಇಟ್ಟುಕೊಂಡಿದ್ದು, ಈಗ 9 ಹಕ್ಕುಪತ್ರಗಳು ಕಚೇರಿಯಿಂದ ನಾಪತ್ತೆಯಾಗಿದೆ.

ADVERTISEMENT

ಠಾಣೆಗೆ ದೂರು: ಹಕ್ಕುಪತ್ರಗಳು ಕಚೇರಿಯಿಂದ ನಾಪತ್ತೆಯಾಗಿರುವ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತುಕೊಂಡ ಮುಖ್ಯಾಧಿಕಾರಿ ಸಬಾಶಿರಿನ್ ಗುರುವಾರ ಗುಡಿಬಂಡೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

‘ನಿವೃತ್ತ ಸಿಬ್ಬಂದಿ ಶ್ರೀನಿವಾಸ್ ಎಂಬುವವರು ಹಕ್ಕುಪತ್ರ ಇರುವ ಕಡತವನ್ನು ಸಂಬಂಧಪಟ್ಟ ಅಧಿಕಾರಿಗೆ ನೀಡಿಲ್ಲ. ಕೂಡಲೇ ಅವರನ್ನು ಠಾಣೆಗೆ ಕರೆಸಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕು’ ಎಂದು ದೂರು ನೀಡಿದ್ದಾರೆ. 

ನಿವೃತ್ತಿಯಾದರು ಕೆಲಸ: ಹಕ್ಕುಪತ್ರ ಕಡತಗಳನ್ನು ನಿರ್ವಹಿಸುತ್ತಿದ್ದ ಸಿಬ್ಬಂದಿ ಶ್ರೀನಿವಾಸ್ ನಿವೃತ್ತಿಯಾಗಿ ಸುಮಾರು ತಿಂಗಳೇ ಕಳೆದಿದೆ. ಆದರೂ ಅವರು ಕಚೇರಿಯಲ್ಲಿಯೇ ಕೆಲಸ ಮಾಡಿಕೊಂಡಿದ್ದರು.

ವಿತರಣೆಯಾಗದ ಹಕ್ಕುಪತ್ರಗಳನ್ನು ಕಚೇರಿ ಸಿಬ್ಬಂದಿ ಹಣಕ್ಕೆ ಮಾರಾಟ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.

ಉತ್ತರಿಸದ ಮುಖ್ಯಾಧಿಕಾರಿ: ಹಕ್ಕುಪತ್ರ ನಾಪತ್ತೆಯಾಗಿರುವ ವಿಚಾರಕ್ಕೆ ಸಂಬಂಧಿಸಿ ಮುಖ್ಯಾಧಿಕಾರಿ ಸಬಾಶಿರನ್ ಪ್ರತಿಕ್ರಿಯಿಸಿ, ‘ನಾನು ಯಾವುದೇ ಹೇಳಿಕೆ ನೀಡಲು ಆಗುವುದಿಲ್ಲ. ಈ ಸಂಬಂಧ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದು, ಶಾಸಕರ ಗಮನಕ್ಕೆ ತರುತ್ತೇನೆ’ ಎಂದು ಹೇಳಿದರು.

ವಸತಿ ಕಳೆದುಕೊಂಡವರಿಗೆ ಶಾಸಕರು ಹಕ್ಕುಪತ್ರವನ್ನು ವಿತರಣೆ ಮಾಡುತ್ತಿರುವುದು
ಕಚೇರಿಯಲ್ಲಿ ಹಕ್ಕುಪತ್ರಗಳು ನಾಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಕೂಡಲೇ ಸಂಬಂಧಪಟ್ಟ ತಪ್ಪಿತಸ್ಥ ಸಿಬ್ಬಂದಿ ಅಧಿಕಾರಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು.
–ರಾಜೇಶ್, ಪಟ್ಟಣ ಪಂಚಾಯಿತಿ ಎರಡನೇ ವಾರ್ಡ್‌ ಸದಸ್ಯ

Quote -

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.