ADVERTISEMENT

ಡಿಸೆಂಬರ್‌ಗೆ 15 ಸಾವಿರ ನಿವೇಶನ ಹಂಚಿಕೆ

ಜಲಜೀವನ್ ಮಿಷನ್ ಕಾರ್ಯಕ್ರಮ; ಸಚಿವ ಡಾ.ಕೆ. ಸುಧಾಕರ್ ಘೋಷಣೆ

​ಪ್ರಜಾವಾಣಿ ವಾರ್ತೆ
Published 31 ಜುಲೈ 2022, 5:49 IST
Last Updated 31 ಜುಲೈ 2022, 5:49 IST
ಚಿಕ್ಕಬಳ್ಳಾಪುರ ತಾಲ್ಲೂಕಿನ ಚಲಕಾಯಲಪರ್ತಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಗೆ ಸಚಿವ ಡಾ.ಕೆ.ಸುಧಾಕರ್ ಶಂಕುಸ್ಥಾಪನೆ ನೆರವೇರಿಸಿದರು
ಚಿಕ್ಕಬಳ್ಳಾಪುರ ತಾಲ್ಲೂಕಿನ ಚಲಕಾಯಲಪರ್ತಿ ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಗೆ ಸಚಿವ ಡಾ.ಕೆ.ಸುಧಾಕರ್ ಶಂಕುಸ್ಥಾಪನೆ ನೆರವೇರಿಸಿದರು   

ಚಿಕ್ಕಬಳ್ಳಾಪುರ: ಗ್ರಾಮೀಣ ಪ್ರದೇಶದ 10 ಸಾವಿರ ಮತ್ತು ನಗರ ವ್ಯಾಪ್ತಿಯ 5 ಸಾವಿರ ಸೇರಿ ಒಟ್ಟು 15 ಸಾವಿರ ಮಂದಿಗೆ ಡಿಸೆಂಬರ್ ವೇಳೆಗೆ ಉಚಿತ ನಿವೇಶನಗಳನ್ನು ನೀಡಲಾಗುವುದು ‌ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಘೋಷಿಸಿದರು.

ತಾಲ್ಲೂಕಿನ ಚಲಕಾಯಲಪರ್ತಿ ಗ್ರಾಮದಲ್ಲಿ ಶನಿವಾರ ಆಯೋಜಿಸಿದ್ದ ಜಲಜೀವನ್ ಮಿಷನ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲಾಧಿಕಾರಿ ಮತ್ತು ಜಿ.ಪಂ ಸಿಇಒ ನಿವೇಶನ ಹಂಚಿಕೆಗೆ ಅಗತ್ಯವಿರುವ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ 15 ಸಾವಿರ ಮಂದಿ ಬಡವರಿಗೆ ಉಚಿತ ನಿವೇಶನ ನೀಡುವ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.

ADVERTISEMENT

ಲಕ್ಕನಾಯಕನಹಳ್ಳಿ, ರಾಯಪ್ಪನಹಳ್ಳಿ ಗ್ರಾಮಗಲ್ಲಿ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಸ್ವಾತಂತ್ರ್ಯ ಬಂದ 10 ವರ್ಷದಲ್ಲಿ ಆಗಬೇಕಿದ್ದ ಈ ಕೆಲಸಗಳು ಸ್ವಾತಂತ್ರ್ಯ ದಿನಾಚರಣೆಯ ಅಮೃತಮಹೋತ್ಸವ ಸಮಯದಲ್ಲಿ ಮಾಡಬೇಕಾದ ಸ್ಥಿತಿ ಎದುರಾಗಿದೆ ಎಂದರು.

ಮಂಚೇನಹಳ್ಳಿ ತಾಲ್ಲೂಕು ವ್ಯಾಪ್ತಿಯ 54 ಗ್ರಾಮಗಳಿಗೆ ₹ 44 ಕೋಟಿ ವೆಚ್ಚದಲ್ಲಿ ನಲ್ಲಿ ನೀರು ಒದಗಿಸಲು ಕ್ರಮ ವಹಿಸಲಾಗುತ್ತಿದೆ ಎಂದರು.

ವಿಶ್ವೇಶ್ವರಯ್ಯ ಜಲಭಾಗ್ಯ ನಿಗಮದ ಮೂಲಕ ₹ 52 ಕೋಟಿ ವೆಚ್ಚದಲ್ಲಿ ಬೂದುಗೊಂಡ್ಲು ಅಣೆಕಟ್ಟೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಅಣೆಕಟ್ಟು ನಿರ್ಮಾಣವಾದರೆ ಮಂಡಿಕಲ್ ಹೋಬಳಿಯ ಎಲ್ಲ ಗ್ರಾಮಗಳ ಪ್ರತಿ ಮನೆಗೆ ನಲ್ಲಿ ನೀರು ನೀಡಲು ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಎಚ್ಎನ್ ವ್ಯಾಲಿ, ಎತ್ತಿನಹೊಳೆ ಜೊತೆಗೆ ಕೃಷ್ಣಾ ಕೊಳ್ಳದಿಂದಲೂ ಅಗತ್ಯ ನೀರು ತಂದು ಕುಡಿಯಲು ಮತ್ತು ಕೃಷಿ ಬಳಕೆಗೆ ನೀಡಲು ಕ್ರಮ ವಹಿಸಲಾಗುವುದು ಎಂದರು.

ಕೈಗಾರಿಕೆಗಳ ಸ್ಥಾಪನೆಗಾಗಿ ಕ್ಷೇತ್ರದಲ್ಲಿ 3 ಸಾವಿರ ಎಕರೆ ಪ್ರದೇಶ ಗುರುತಿಸಲಾಗಿದೆ. ಆದಷ್ಟು ಶೀಘ್ರದಲ್ಲಿ ಕೈಗಾರಿಕೆಗಳನ್ನು ತಂದು ಯುವಕರಿಗೆ ಉದ್ಯೋಗ ಕಲ್ಪಿಸಲು ಕ್ರಮ ವಹಿಸಲಾಗುವುದು.ಕ್ಷೇತ್ರಗಳಲ್ಲಿ ನಡೆಯುತ್ತಿರುವ ಎಲ್ಲ ಕೆಲಸಗಳಲ್ಲಿಯೂ ಗುಣಮಟ್ಟ ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಜಲಜೀವನ್ ಮಿಷನ್ ಯೋಜನೆಗೆ ಬಳಸುವ ಪೈಪ್ ಗುಣಮಟ್ಟದಿಂದ ಕೂಡಿರಬೇಕು. ಗುಣಮಟ್ಟದಲ್ಲಿ ರಾಜಿ ಆಗಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್ ಮಾತನಾಡಿ,ಕಳೆದ ಎರಡು ವರ್ಷಗಳಲ್ಲಿ ಉತ್ತಮ ಮಳೆಯಾದ ಕಾರಣ 200-300 ಅಡಿಯಲ್ಲಿ ನೀರು ದೊರೆಯುತ್ತಿರುವುದು ಕೃಷಿಕರಿಗೆ ಸಂತಸ ವಿಚಾರವಾಗಿದೆ. ಜಲ ಜೀವನ್ ಮಿಷನ್ ಯೋಜನೆಯಡಿ ನಿತ್ಯ ಪ್ರತಿ ವ್ಯಕ್ತಿಗೆ 55 ಲೀಟರ್ ನೀರನ್ನು ನೀಡುವ ಉದ್ದೇಶ ಇದೆ. ಪ್ರತಿ ಮನೆಗೆ ನಲ್ಲಿ ಮೂಲಕ ನೀರನ್ನು ಪೂರೈಸುವ ಯೋಜನೆ ಜಿಲ್ಲೆಯಲ್ಲಿ ಚಾಲನೆಯಲ್ಲಿದೆ ಎಂದರು.

ಸಚಿವರುಗಂಗರೇಕಾಲುವೆ ಗ್ರಾಮದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ಭವನ ಉದ್ಘಾಟಿಸಿದರು. ಪುಟ್ಟತಿಮ್ಮನಹಳ್ಳಿಯಲ್ಲಿ ರಸ್ತೆ ಅಭಿವೃದ್ಧಿ ಮತ್ತು ಡಾಂಬರ್ ಕಾಮಗಾರಿಗೆ ಭೂಮಿ ಪೂಜೆ, ಚಿಕ್ಕಬಳ್ಳಾಪುರದವಾಪಸಂದ್ರದ ಬಾಲಕಿಯರಸರ್ಕಾರಿ ಪ್ರೌಢಶಾಲೆ ಹೆಚ್ಚುವರಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್, ತಹಶೀಲ್ದಾರ್ ಗಣಪತಿ ಶಾಸ್ತ್ರಿ,ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್, ಮರಳುಕುಂಟೆ ಕೃಷ್ಣಮೂರ್ತಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.