ಚೇಳೂರು: ತಾಲ್ಲೂಕು ಪ್ರಜಾಸೌಧ ಕಚೇರಿ ಚೇಳೂರಿನಲ್ಲೇ ನಿರ್ಮಾಣವಾಗಬೇಕೆಂದು ಚೇಳೂರು ಹೋರಾಟ ಸಮಿತಿ, ರೈತರು, ನಾಗರಿಕರು ಹಾಗೂ ಜನಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಬುಧವಾರ ಪ್ರತಿಭಟನೆ ರ‍್ಯಾಲಿಯನ್ನು ಹಮ್ಮಿಕೊಂಡಿದ್ದರು.
ಆಂದ್ರ ಗಡಿಯಲ್ಲಿ ತಾಲ್ಲೂಕು ಪ್ರಜಾಸೌಧ ನಿರ್ಮಾಣ ಮಾಡುತ್ತಿರುವುದನ್ನ ವಿರೋಧಿಸಿ ಪಕ್ಷಾತೀತಾವಾಗಿ ಬಿಜೆಪಿ, ಜೆಡಿಎಸ್ ಹಾಗೂ ವಿವಿಧ ಸಂಘ ಸಂಸ್ಥೆಗಳು, ರೈತಪರ, ಕನ್ನಡಪರ, ಸಂಘಟನೆಗಳ ಮುಖಂಡರು, ಸಾರ್ವಜನಿಕರು ಚೇಳೂರು ತಾಲ್ಲೂಕು ಕೇಂದ್ರದಲ್ಲಿ ಮೆರವಣಿಗೆ ನಡೆಸಿದರು.
ರ‍್ಯಾಲಿಯಲ್ಲಿ ಸಂಸದ ಡಾ.ಕೆ.ಸುಧಾಕರ್ ಮಾತನಾಡಿ, ಚೇಳೂರು ತಾಲ್ಲೂಕು ಘೋಷಣೆ ಮಾಡಿದ್ದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ. ತಾಲ್ಲೂಕು ಕಚೇರಿ ಪ್ರಾರಂಭ ಮಾಡಿದ್ದು ಬಿಜೆಪಿ ಸರ್ಕಾರ. ಅಂದಿನಿಂದ ಇಂದಿನ ತನಕ ಯಾವುದೇ ತಾಲ್ಲೂಕು ಮಟ್ಟದ ಕಚೇರಿಗಳಿಲ್ಲ. ಮೂರು ಬಾರಿ ಗೆದ್ದಿರುವ ಕ್ಷೇತ್ರದ ಶಾಸಕರ ಶಾಶ್ವತ ಕೆಲಸ ಇಲ್ಲ ಎಂದರು.
2019ರಲ್ಲಿ ಘೋಷಣೆಯಾದ ಚೇಳೂರು ತಾಲ್ಲೂಕು ಬಗ್ಗೆ ಅಭಿವೃದ್ಧಿ ಮಾಡಬೇಕೆಂಬ ಮನಸ್ಸಿಲ್ಲ. ಬಿಜೆಪಿ ಸರ್ಕಾರ ಇದ್ದಾಗ ಪ್ರಜಾಸೌಧ ಕಟ್ಟಡಕ್ಕೆ ಅನುದಾನಕ್ಕೆ ಚೇಳೂರು ಹೋರಾಟಗಾರರು ಸೇರಿದಂತೆ ನಾನು ಮನವಿ ಮಾಡಿದ್ದೆ. ಅನುದಾನ ಈಗ ಬಂದಿದೆ. ಷೇರ್‌ಖಾನ್ ಕೋಟೆ ಸ.ನಂ.47 ರಲ್ಲಿ 9-10 ಗುಂಟೆ ಜಮೀನಿನಲ್ಲಿ ಕಚೇರಿ ಕಟ್ಟಡ ನಿರ್ಮಾಣ ಮಾಡಬೇಕು. ಇಲ್ಲವಾದ್ದಲ್ಲಿ ರಾಜಕೀಯದಲ್ಲಿ ನಿಮಗೆ ಮುಂದಿನ ದಿನಗಳಲ್ಲಿ ಉಳಿಗಾಲ ಇಲ್ಲ ಎಂದರು.
ಹರಿನಾಥರೆಡ್ಡಿ ಮಾತನಾಡಿ, ಚೇಳೂರು ತಾಲ್ಲೂಕಾದ ನಂತರ ಭೂ ಕಬಳಿಕೆದಾರರು ಹೆಚ್ಚಾಗಿದ್ದಾರೆ. ತಮ್ಮ ಸ್ವಾರ್ಥಕ್ಕಾಗಿ ಚೇಳೂರಿನ ತಾಲ್ಲೂಕು ಪ್ರಜಾಸೌಧ ಚೇಳೂರಿನಲ್ಲಿ ಮಾಡದೇ ಆಂಧ್ರ ಗಡಿಯಲ್ಲಿ ಮಾಡಿದರೆ ತಾಲ್ಲೂಕಿನ 12 ಗ್ರಾ. ಪಂ ಜನತೆ ಬಹುದೂರ ಸಾಗಬೇಕಾಗುತ್ತದೆ. ಇದರಿಂದ ಸಮಯ, ಹಣ ನಷ್ಟ. ಯಾರೋದೋ ಮಾತಿಗೆ ಅಧಿಕಾರಿಗಳು ಮರುಳಾಗಿ ಆಂಧ್ರದಲ್ಲಿ ಕಚೇರಿ ಸ್ಥಾಪನೆ ಬೇಡ ಎಂದರು.
ಸಂಸದರು ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು. ರಾಜ್ಯ ಬಿಜೆಪಿ ಕಾರ್ಯದರ್ಶಿ ಸಿ.ಮುನಿರಾಜು, ರಾಜ್ಯ ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಕೋನಪರೆಡ್ಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಜೆ.ಪಿ.ಚಂದ್ರಶೇಖರರೆಡ್ಡಿ, ನಾರಾಯಣಸ್ವಾಮಿ, ಕೆ.ಎನ್.ರಾಮಕೃಷ್ಣಾರೆಡ್ಡಿ, ಎನ್.ಸೋಮಶೇಖರ, ಎಸ್.ಆರ್ ಲಕ್ಷ್ಮಿನಾರಾಯಣ, ಎಸ್.ವೈ.ವೆಂಕಟರಮಣಾರೆಡ್ಡಿ, ಕೊಂಡಿಕೊಂಡ ಸುಬ್ಬಾರೆಡ್ಡಿ, ಪಿ.ವಿ.ಅಪ್ಪಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.