ADVERTISEMENT

ತಿಂಗಳಲ್ಲಿ ತಲೆ ಎತ್ತಲಿದೆ ಮಾದರಿ ಪ್ರಯೋಗಾಲಯ

ಇಂದಿನಿಂದ ಜಿಲ್ಲಾ ಆಸ್ಪತ್ರೆಯಲ್ಲಿ ಎರಡು ಹೊಸ ಟ್ರ್ಯೂ ನ್ಯಾಟ್ ಯಂತ್ರಗಳ ಬಳಕೆ, ಕೊರೊನಾ ಶಂಕಿತರ ಮಾದರಿ ಪರೀಕ್ಷೆ ಕಾರ್ಯದಲ್ಲಿ ಚುರುಕು

ಈರಪ್ಪ ಹಳಕಟ್ಟಿ
Published 15 ಮೇ 2020, 19:30 IST
Last Updated 15 ಮೇ 2020, 19:30 IST
–ಸಾಂದರ್ಭಿಕ ಚಿತ್ರ
–ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಭೀತಿ, ಹೆಚ್ಚಿದ ಕೋವಿಡ್‌ ಪ್ರಕರಣಗಳ ಆತಂಕದ ನಡುವೆಯೇ, ಕೋವಿಡ್‌ 19 ಕಾಯಿಲೆಯನ್ನೂ ದೃಢೀಕರಿಸಬಹುದಾದಂತಹ ಅತ್ಯಾಧುನಿಕ ಮಾದರಿ ಪ್ರಯೋಗಾಲಯ ಸ್ಥಾಪಿಸಲಾಗುತ್ತಿರುವುದು ವೈದ್ಯಕೀಯ ವಲಯದಲ್ಲಿ ಸಂತಸ ತಂದಿದೆ.

ಜಿಲ್ಲಾ ಕೇಂದ್ರದಲ್ಲಿ ಒಂದು ತಿಂಗಳಲ್ಲಿ ಸುಸಜ್ಜಿತವಾದ ’ರ್‍ಯಾಪಿಡ್‌ ಟೆಸ್ಟ್‌ ಪಾಲಿಮರೈಸ್ಡ್‌ ಚೈನ್‌ ರಿಯಾಕ್ಷನ್‌‘ (ಆರ್‌ಟಿಪಿಸಿಆರ್‌) ಪ್ರಯೋಗಾಲಯ ತಲೆ ಎತ್ತಲಿದೆ. ಈ ಪ್ರಯೋಗಾಲಯ ಕಾರ್ಯಾರಂಭ ಮಾಡಿದ ಬಳಿಕ ಯಾವುದೇ ಮಾದರಿಯ ಪರೀಕ್ಷೆಗಳ ಫಲಿತಾಂಶಕ್ಕಾಗಿ ಜಿಲ್ಲೆಯ ಸರ್ಕಾರಿ ವೈದ್ಯರು ಹೊರಗಿನ ಪ್ರಯೋಗಾಲಯಗಳ ಮೊರೆ ಹೋಗುವುದು ತಪ್ಪಲಿದೆ.

ಪ್ರಸ್ತುತ ಜಿಲ್ಲೆಯಲ್ಲಿ ಕೊರೊನಾ ವೈರಸ್‌ ಸೋಂಕಿನ ಶಂಕಿತ ವ್ಯಕ್ತಿಗಳಿಂದ ಪಡೆದ ಗಂಟಲು ದ್ರವ ಮಾದರಿಗಳನ್ನು ಪರೀಕ್ಷೆಗಾಗಿ ಬೆಂಗಳೂರಿನ ಕಮಾಂಡೊ ಆಸ್ಪತ್ರೆ, ಬೆಂಗಳೂರು ವೈದ್ಯಕೀಯ ಕಾಲೇಜು (ಬಿಎಂಸಿ) ಮತ್ತು ಗಾಂಧಿ ಕೃಷಿ ವಿಜ್ಞಾನ ಕೇಂದ್ರದದ (ಜಿಕೆವಿಕೆ) ಪ್ರಯೋಗಾಲಯಗಳಿಗೆ ಕಳುಹಿಸಿ ಕೊಡಲಾಗುತ್ತಿದೆ.

ADVERTISEMENT

ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರ ವಿಶೇಷ ಆಸಕ್ತಿಯ ಫಲವಾಗಿ ಆರ್‌ಟಿಪಿಸಿಆರ್‌ ಪ್ರಯೋಗಾಲಯ ಮಂಜೂರಾಗಿದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು. ಈಗಾಗಲೇ ಪ್ರಯೋಗಾಲಯ ನಿರ್ಮಾಣಕ್ಕೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯಿಂದ (ಐಸಿಎಂಆರ್‌) ಅನುಮತಿ ಕೂಡ ದೊರೆತಿದೆ.

’ಜಿಲ್ಲಾ ಆಸ್ಪತ್ರೆಯ ಹಳೆಯ ಕಟ್ಟಡದ ಆವರಣದಲ್ಲಿರುವ ಮೂರು ಶೆಡ್‌ಗಳನ್ನು ನವೀಕರಣ ಮಾಡಿ, ಆರ್‌ಟಿಪಿಸಿಆರ್‌ ಪ್ರಯೋಗಾಲಯ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ನಾವು ಪ್ರಯೋಗಾಲಯ ನಿರ್ಮಾಣ ಕಾಮಗಾರಿಗೆ ಕಾರ್ಯಾದೇಶ ಕೊಟ್ಟಿದ್ದೇವೆ‘ ಎನ್ನುತ್ತಾರೆಹಂಗಾಮಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ರಮೇಶ್‌ ಹೇಳಿದರು.

’ಆರ್‌ಟಿಪಿಸಿಆರ್‌ ಪ್ರಯೋಗಾಲಯದ ಸಿವಿಲ್‌ ಮತ್ತು ತಾಂತ್ರಿಕ ಕಾಮಗಾರಿಗಳಿಗೆ ಸುಮಾರು 15 ರಿಂದ 20 ದಿನ ಕಾಲಾವಕಾಶ ಬೇಕಾಗುತ್ತದೆ. ಸುಮಾರು 25 ದಿನಗಳಲ್ಲಿ ಮಾದರಿ ಪ್ರಯೋಗಾಲಯ ಕಾರ್ಯಾರಂಭ ಮಾಡಲಿದೆ. ಈಗಾಗಲೇ ಯಂತ್ರಗಳ ಖರೀದಿಗೆ ₹80 ಲಕ್ಷದ ಕಾರ್ಯಾದೇಶ ನೀಡಿದ್ದೇವೆ‘ ಎಂದು ತಿಳಿಸಿದರು.

ಆರ್‌ಟಿಪಿಸಿಆರ್‌ ಪ್ರಯೋಗಾಲಯದಲ್ಲಿ ಬಹುವಿಧ ಮಾದರಿಗಳನ್ನು ಪರೀಕ್ಷೆ ಮಾಡಲು ಅವಕಾಶವಿರುತ್ತದೆ. ನೂರಾರು ಸಂಖ್ಯೆಯಲ್ಲಿ ಪರೀಕ್ಷೆಗಳನ್ನು ನಡೆಸಬಹುದು. ಇದರಿಂದ ತ್ವರಿತಗತಿಯಲ್ಲಿ ವೈದ್ಯಕೀಯ ಸೇವೆ ಒದಗಿಸಲು ಅನುಕೂಲವಾಗುತ್ತದೆ. ಈ ಪ್ರಯೋಗಾಲಯ ಕಾರ್ಯಾರಂಭ ಮಾಡಿದರೆ ಕೋವಿಡ್‌ ಪರೀಕ್ಷೆಗಳನ್ನೂ ಜಿಲ್ಲೆಯಲ್ಲಿ ನಡೆಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.

ಜಿಲ್ಲೆಯಲ್ಲಿ ಕೋವಿಡ್‌ ಕಾಣಿಸಿಕೊಂಡ ಬಳಿಕ ಆರೋಗ್ಯ ಇಲಾಖೆ ಸಿಬ್ಬಂದಿ ಜಿಲ್ಲೆಯಾದ್ಯಂತ ಸಮುದಾಯ ಸಮೀಕ್ಷೆ, ಸೋಂಕಿತ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಗಳು ಸೇರಿದಂತೆ ಸುಮಾರು 6,029 ಪರೀಕ್ಷೆಗಳನ್ನು ನಡೆಸಿದ್ದಾರೆ. ಬೆಂಗಳೂರು ಹತ್ತಿರ ಇರುವುದರಿಂದ ಈವರೆಗೆ ನಮಗೆ ಕೋವಿಡ್‌ ಪರೀಕ್ಷೆ ನಡೆಸುವುದು ಕಷ್ಟವಾಗಿಲ್ಲ. ಆದರೂ ಆರ್‌ಟಿಪಿಸಿಆರ್ ಪ್ರಯೋಗಾಲಯದ ಅಗತ್ಯವಿತ್ತು ಎಂದು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.