ಚಿಕ್ಕಬಳ್ಳಾಪುರ: ರಾಜ್ಯದ ರೇಷ್ಮೆ ಬೆಳೆಗಾರರನ್ನು ವಿಮೆ ಹಾಗೂ ಕಿಸಾನ್ ಸಮ್ಮಾನ್ ಯೋಜನೆಗೆ ಪರಿಗಣಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಲೋಕಸಭೆ ಅಧಿವೇಶನದಲ್ಲಿ ನಿಯಮ 377ರಡಿ ಸಾರ್ವಜನಿಕ ಹಿತಾಸಕ್ತಿಯ ವಿಷಯವಾಗಿ ಮಾತನಾಡಿದ ಅವರು ರೇಷ್ಮೆ ಕೃಷಿಕರ ಸಂಕಷ್ಟಗಳ ಬಗ್ಗೆ ಗಮನ ಸೆಳೆದರು.
2016-17ರಲ್ಲಿ ಜಾರಿಯಾದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿ ₹ 15,05,89.10 ಕೋಟಿ ಮೊತ್ತದ ವಿಮೆಯನ್ನು ರೈತರಿಗೆ ನೀಡಲಾಗಿದೆ. ಪಿ.ಎಂ ಕಿಸಾನ್ ಸಮ್ಮಾನ್ ನಿಧಿಯಡಿ 11 ಕೋಟಿ ರೈತರಿಗೆ ₹ 2.81 ಲಕ್ಷ ಕೋಟಿ ನೀಡಲಾಗಿದೆ. ಆದರೆ ಈ ಎರಡೂ ಯೋಜನೆಗಳ ಲಾಭ ರೇಷ್ಮೆ ಕೃಷಿಕರಿಗೆ ಹಾಗೂ ಮೀನುಗಾರಿಕೆಯಲ್ಲಿ ತೊಡಗಿರುವವರಿಗೆ ದೊರೆಯುತ್ತಿಲ್ಲ. ಸಾಮಾನ್ಯ ರೈತರಂತೆಯೇ ಈ ಕೃಷಿಕರು ಕೂಡ ಆರ್ಥಿಕ ನಷ್ಟ ಸೇರಿದಂತೆ ಹಲವು ಸಮಸ್ಯೆ ಎದುರಿಸುತ್ತಿದ್ದಾರೆ ಎಂದರು.
ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ, ರಾಮನಗರ ಸೇರಿದಂತೆ ರಾಜ್ಯದಲ್ಲಿ ಸುಮಾರು 1.1 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಬೆಳೆಯಲಾಗುತ್ತಿದೆ. 1.5 ಲಕ್ಷ ಕುಟುಂಬಗಳು ರೇಷ್ಮೆ ಬೆಳೆ ನೆಚ್ಚಿಕೊಂಡಿವೆ.
ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುವ ಹವಾಮಾನ, ಮಳೆ ವೈಪರೀತ್ಯದಿಂದ ಹಿಪ್ಪುನೇರಳೆ ಸೊಪ್ಪು ಹಾಗೂ ರೇಷ್ಮೆ ಹುಳುಗಳಲ್ಲಿ ಅನೇಕ ಸಮಸ್ಯೆಗಳು ಕಂಡುಬರುತ್ತಿವೆ. ನುಸಿ ಮತ್ತು ಕೀಟಗಳ ಹಾವಳಿಯಿಂದ ಹಿಪ್ಪುನೇರಳೆ ಸೊಪ್ಪಿನ ಗುಣಮಟ್ಟ ಮತ್ತು ಇಳುವರಿ ಕುಸಿತವಾಗುತ್ತಿದೆ. ಕಳಪೆ, ರೋಗಪೀಡಿತ ಮೊಟ್ಟೆಗಳ ಚಾಕಿಯಿಂದ ರೇಷ್ಮೆ ಹುಳು ಸಾಕಾಣಿಕೆಗೆ ಸಂಕಷ್ಟ ಎದುರಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಈ ಕುರಿತು ಗಮನಹರಿಸಿ ಈ ಎರಡೂ ಯೋಜನೆಗಳನ್ನು ರೇಷ್ಮೆ ಕೃಷಿಕರಿಗೆ ನೀಡಬೇಕು ಎಂದು ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.