ಚಿಕ್ಕಬಳ್ಳಾಪುರ: ಕಾಂಗ್ರೆಸ್ ಸರ್ಕಾರ ಬಯಲುಸೀಮೆಯನ್ನು ಕಡೆಗಣಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಎತ್ತಿನಹೊಳೆ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಲು ಹಾಗೂ ಎಚ್.ಎನ್ ವ್ಯಾಲಿ, ಕೆ.ಸಿ.ವ್ಯಾಲಿ, ವೃಷಭಾವತಿ ಯೋಜನೆಯಡಿ ಮೂರನೇ ಹಂತದ ಶುದ್ಧೀಕರಣ ಸೌಲಭ್ಯವನ್ನು ತರಲು ಕ್ರಮ ವಹಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ಆಗ್ರಹಿಸಿದರು.
ನಗರದಲ್ಲಿ ಬುಧವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಂದಿ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ಮಾಡುವ ಉದ್ದೇಶದಿಂದ ಕಾಂಗ್ರೆಸ್ ಸರ್ಕಾರ ಹಿಂದೆ ಸರಿದಿರುವುದು ಬೇಸರ ತಂದಿದೆ. ಎರಡೂವರೆ ವರ್ಷಗಳಲ್ಲಿ ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳು ಕಡೆಗಣನೆಯಾಗಿವೆ ಎಂದು ದೂರಿದರು.
ಎಚ್.ಎನ್ ವ್ಯಾಲಿ ಮತ್ತು ಕೆ.ಸಿ ವ್ಯಾಲಿ ನೀರನ್ನು ಮೂರು ಹಂತದಲ್ಲಿ ಶುದ್ಧೀಕರಣ ಮಾಡುವುದಾಗಿ ಬಸವರಾಜ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ಘೋಷಿಸಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಈ ಬಗ್ಗೆ ಯಾವುದೇ ಕ್ರಮವಹಿಸಿಲ್ಲ ಎಂದರು.‘
ಎಚ್.ಎನ್.ವ್ಯಾಲಿಯ 210 ಎಂಎಲ್‌ಡಿಯಲ್ಲಿ 148 ಎಂಎಲ್‌ಡಿ ನೀರು ಮಾತ್ರ ಜಿಲ್ಲೆಯ ಕೆರೆಗಳಿಗೆ ಬರುತ್ತಿದೆ. ಎಸ್‌ಟಿಪಿ ನೀರಿನಿಂದ ಬೆಳೆದ ತರಕಾರಿಗಳನ್ನೇ ಬೆಂಗಳೂರಿನ ಜನರು ಬಳಸುತ್ತಿದ್ದಾರೆ. ಸುಮಾರು 2 ಕೋಟಿ ಜನರು ಈ ನೀರನ್ನು ಬಳಸುತ್ತಿದ್ದಾರೆ. ಆದ್ದರಿಂದ ಈ ನೀರನ್ನು ಮೂರನೇ ಹಂತದಲ್ಲಿ ಶುದ್ಧೀಕರಣ ಮಾಡಲೇಬೇಕಿದೆ. ಕಾಂಗ್ರೆಸ್ ಸರ್ಕಾರ ಈ ಕುರಿತು ತೀರ್ಮಾನ ಕೈಗೊಳ್ಳಲಿ. ನಮ್ಮ ಭಾಗದ ಪ್ರತಿನಿಧಿಗಳು ಈ ಬಗ್ಗೆ ಮಾತನಾಡಲಿ ಎಂದು ಆಗ್ರಹಿಸಿದರು.
ಬಯಲುಸೀಮೆಗೆ ಕಾವೇರಿ, ಕೃಷ್ಣಾ, ತುಂಗಭದ್ರಾದಿಂದ ನೀರು ಸಿಗುವುದಿಲ್ಲ. ಎತ್ತಿನಹೊಳೆಯಿಂದ ನೀರು ಬರಲಿದೆ ಎಂದು 12 ವರ್ಷದ ಹಿಂದೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಹಿಂದಿನ ಬಿಜೆಪಿ ಸರ್ಕಾರ ₹ 4 ಸಾವಿರ ಕೋಟಿಗೂ ಅಧಿಕ ಅನುದಾನ ನೀಡಿ ಕಾಮಗಾರಿ ಮಾಡಿಸಿತ್ತು. ಕಾಂಗ್ರೆಸ್ ಸರ್ಕಾರ ಬಂದ ನಂತರ ಸರಿಯಾದ ಅನುದಾನ, ಭೂ ಸ್ವಾಧೀನ ಪರಿಹಾರ ನೀಡಿಲ್ಲ. ನೀರು ಇನ್ನೂ ಸಕಲೇಶಪುರದ ಬಳಿಯೇ ಇದೆ. ನಮ್ಮ ರೈತರಿಗೆ ನೀರು ಸಿಗುವುದು ತಡವಾಗುತ್ತಿದೆ. ಸಂಪುಟ ಸಭೆಯಲ್ಲಿ ಸ್ಪಷ್ಟವಾಗಿ ಈ ಬಗ್ಗೆ ನಿರ್ಧರಿಸಬೇಕು. ₹ 1 ಸಾವಿರ ಕೋಟಿ ನೀಡಿ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
ಭದ್ರಾ ಮೇಲ್ದಂಡೆ, ಕೃಷ್ಣಾದಿಂದ ಬಯಲುಸೀಮೆಗೆ ನೀರು ತರಬಹುದು. ಆದರೆ ರಾಜ್ಯ ಸರ್ಕಾರ ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ವೈದ್ಯಕೀಯ ಶಿಕ್ಷಣ ಕಾಲೇಜನ್ನು ಬಿಜೆಪಿ ಅವಧಿಯಲ್ಲಿ ನಿರ್ಮಿಸಲಾಗಿದೆ. ₹ 810 ಕೋಟಿ ಖರ್ಚು ಮಾಡಿದರೂ ಆಸ್ಪತ್ರೆ ಆರಂಭವಾಗಿಲ್ಲ. ಕ್ಷೇತ್ರದಲ್ಲಿ ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ನಾನು ನಿರ್ಮಿಸಿದ್ದೇನೆ. ಆದರೆ ಇನ್ನೂ ವೈದ್ಯಕೀಯ ಉಪಕರಣಗಳನ್ನು ಪೂರೈಕೆ ಮಾಡಿಲ್ಲ. ಉನ್ನತ ಶಿಕ್ಷಣ ಸಚಿವರು ನಮ್ಮ ಜಿಲ್ಲೆಗೆ ವಿಶ್ವವಿದ್ಯಾಲಯ ತರುತ್ತಾರೆ ಎಂದುಕೊಂಡಿದ್ದೆ. ಆದರೆ 9 ವಿಶ್ವವಿದ್ಯಾಲಯಗಳನ್ನು ಮುಚ್ಚಿಹಾಕಿದ್ದಾರೆ ಎಂದು ವ್ಯಂಗ್ಯವಾಡಿದರು.
900 ಎಕರೆ ಜಾಗದಲ್ಲಿ ಆಶ್ರಯ ಯೋಜನೆಯಡಿ 20 ಸಾವಿರ ನಿವೇಶನ ರೂಪಿಸಲಾಗಿದೆ. ಈಗಾಗಲೇ ಹಕ್ಕುಪತ್ರಗಳನ್ನೂ ನೀಡಿದ್ದು ಅದನ್ನು ತಡೆಹಿಡಿಯಲಾಗಿದೆ. ಎರಡೂವರೆ ವರ್ಷದಲ್ಲಿ ಒಂದು ಮನೆ ಕಟ್ಟಿಸಿಲ್ಲ, ಒಂದು ನಿವೇಶನ ನೀಡಿಲ್ಲ ಎಂದರು.
ಕೇಂದ್ರದ ಪರಿಶಿಷ್ಟ ಜಾತಿ ಪಂಗಡ ಸಚಿವಾಲಯದ ಕೆಲವು ಯೋಜನೆಗಳಿಗೆ ರಾಜ್ಯ ಸರ್ಕಾರ ಪ್ರಸ್ತಾವವನ್ನೇ ಸಲ್ಲಿಸಿಲ್ಲ. ರಿಯಾಯಿತಿ ದರದಲ್ಲಿ ಔಷಧಿ ನೀಡುವ ಜನ ಔಷಧಿ ಮಳಿಗೆಗಳನ್ನು ಮುಚ್ಚಿಸಿ ಖಾಸಗಿ ಕಂಪನಿಗಳಿಗಾಗಿ ಲಾಬಿ ಮಾಡಲಾಗುತ್ತಿದೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಆವಲಕೊಂಟರಾಯಪ್ಪ, ನಗರಸಭೆ ಅಧ್ಯಕ್ಷ ಗಜೇಂದ್ರ, ಉಪಾಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಲೀಲಾವತಿ ಶ್ರೀನಿವಾಸ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪ್ರಸಾದ್, ಮುಖಂಡರಾದ ಕೆ.ವಿ.ನಾಗರಾಜ್, ಮರಳುಕುಂಟೆ ಕೃಷ್ಣಮೂರ್ತಿ, ರಾಮಸ್ವಾಮಿ ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
ಐಸಿಯುನಲ್ಲಿ ಸರ್ಕಾರ
ಗೌರಿಬಿದನೂರಿನಲ್ಲಿ ಕೇಂದ್ರ ಸರ್ಕಾರದ ಕುಸುಮ್ ಯೋಜನೆಗೆ ಚಾಲನೆ ನೀಡಲಾಗಿದೆ. ಇದನ್ನು ರಾಜ್ಯ ಸರ್ಕಾರ ಪ್ರಚಾರಕ್ಕೆ ಬಳಸಿಕೊಂಡಿರುವುದಲ್ಲದೆ ಕೇಂದ್ರ ಸರ್ಕಾರದ ಯಾರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ. ಈ ಸರ್ಕಾರ ಐಸಿಯುನಲ್ಲಿದೆ. ಸರ್ಕಾರ ಇನ್ನೂ ಬದುಕಿದೆ ಎಂದು ತೋರಿಸಿಕೊಳ್ಳಲು ಕಲಬುರ್ಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಂಪುಟ ಸಭೆ ಮಾಡಿದ್ದಾರೆ ಎಂದು ಸಂಸದರು ಟೀಕಿಸಿದರು.
ಕೈಗಾರಿಕೆ ಹೆಸರಿನಲ್ಲಿ ರಿಯಲ್ ಎಸ್ಟೇಟ್ ದಂಧೆ
ಕೈಗಾರಿಕೆ ಅಭಿವೃದ್ಧಿ ಹೆಸರಿನಲ್ಲಿ ನಮ್ಮ ಭಾಗದಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಯುತ್ತಿದೆ. ಚಿಂತಾಮಣಿಯಲ್ಲಿ ಎಷ್ಟು ವರ್ಷಗಳ ಹಿಂದೆ ಜಮೀನು ವಶಕ್ಕೆ ಪಡೆದಿದ್ದಾರೆ? ಅಲ್ಲಿ ಎಷ್ಟು ಕೈಗಾರಿಕೆ ನಿರ್ಮಾಣವಾಗಿವೆ ಎಂದು ಡಾ.ಕೆ.ಸುಧಾಕರ್ ಪ್ರಶ್ನಿಸಿದರು. ರೈತರಿಂದ ಫಲವತ್ತಾದ ಭೂಮಿಯನ್ನು ಪಡೆದು ಅದನ್ನು ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡಲಾಗುತ್ತಿದೆ. ರೈತರ ಬದುಕಿನ ಜೊತೆ ಆಟವಾಡುತ್ತಿರುವ ಸರ್ಕಾರಕ್ಕೆ ರೈತರ ಶಾಪ ತಟ್ಟಲಿದೆ. ಉತ್ತರ ಕರ್ನಾಟಕ ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿಯೂ ಕೈಗಾರಿಕೆಗಳ ಸ್ಥಾಪನೆ ಆಗಲಿ. ನಮ್ಮ ಭಾಗದಲ್ಲಿ ಕೈಗಾರಿಕೆ ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ರಿಯಲ್ ಎಸ್ಟೇಟ್ ದಂಧೆ ಬಗ್ಗೆ ಕೂಡಲೇ ಸಿದ್ದರಾಮಯ್ಯನವರು ಈ ಕುರಿತು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
‘ಖಾತೆ ಕೊಡಲು ದೊಣ್ಣೆ ನಾಯಕರ ಬರಬೇಕು’
ನಗರಸಭೆಯಲ್ಲಿ 700 ಖಾತೆಗಳು ಸಿದ್ಧವಿದೆ. ಆದರೆ ಈ ಖಾತೆಗಳನ್ನು ಕೊಡಲು ದೊಣ್ಣೆ ನಾಯಕ ಬರಬೇಕಂತೆ ಎಂದು ಶಾಸಕ ಪ್ರದೀಪ್ ಈಶ್ವರ್ ವಿರುದ್ಧ ವಾಗ್ದಾಳಿ ನಡೆಸಿದರು. ಆಡಳಿತ ಮಂಡಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಪೌರಾಯುಕ್ತರ ಮೇಲೆ ದೂರು ಕೊಡಿ ಎಂದು ಹೇಳಿದ್ದೇನೆ. ಅಧಿಕಾರಿಗಳು ನಮಗೆ ಯಾವುದೇ ಸಹಕಾರ ನೀಡುತ್ತಿಲ್ಲ. ಲೋಕಾಯುಕ್ತ ಬಳಿ ಸಿಕ್ಕಿಹಾಕಿಕೊಂಡು ಅಮಾನತಾಗಿದ್ದ ಅಧಿಕಾರಿಯನ್ನು ನಗರಸಭೆಯಲ್ಲಿ ಪೌರಾಯುಕ್ತರನ್ನಾಗಿ ಮಾಡಿದ್ದಾರೆ ಎಂದರು.
‘ಬಯಲುಸೀಮೆ ಮುರು ಜಿಲ್ಲೆಗಳು ಕಾಂಗ್ರೆಸ್ ನಕ್ಷೆಯಲ್ಲಿಲ್ಲ’ ಚಿಕ್ಕಬಳ್ಳಾಪುರ: ಬಯಲುಸೀಮೆಯ
ಚಿಕ್ಕಬಳ್ಳಾಪುರ ಕೋಲಾರ ಬೆಂಗಳೂರು ಗ್ರಾಮಾಂತರ ಮೂರು ಜಿಲ್ಲೆಗಳು ಕಾಂಗ್ರೆಸ್ ಪಕ್ಷದ ನಕ್ಷೆಯಲ್ಲಿ ಇಲ್ಲ ಎನಿಸುತ್ತದೆ. ಅವರ ನಕ್ಷೆಯಲ್ಲಿ ಈ ಮೂರು ಜಿಲ್ಲೆಗಳು ಬೇರೆ ರಾಜ್ಯಗಳಿಗೆ ಸೇರಿರಬೇಕು ಎಂದು ಸಂಸದ ಡಾ.ಕೆ.ಸುಧಾಕರ್ ವ್ಯಂಗ್ಯವಾಡಿದ್ದಾರೆ. ಮೂರು ಜಿಲ್ಲೆಗಳ 15 ವಿಧಾನಸಭಾ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.ಈ ಶಾಸಕರನ್ನು ನೋಡಿಯಾದರೂ ನಂದಿ ಬೆಟ್ಟದಲ್ಲಿ ಸಂಪುಟ ಸಭೆ ನಡೆಸಬೇಕಾಗಿತ್ತು ಎಂದರು. ಎತ್ತಿನಹೊಳೆ ಯೋಜನೆ ಕೆ.ಸಿ ವ್ಯಾಲಿ ಎಚ್.ಎನ್.ವ್ಯಾಲಿ ನೀರಿನ ಮೂರು ಹಂತದ ಶುದ್ದೀಕರಣ ಸೇರಿದಂತೆ ಹಲವು ಯೋಜನೆಗಳ ಕಾರ್ಯಗತದ ಬಗ್ಗೆ ಅಪಾರ ನಿರೀಕ್ಷೆ ಇದ್ದವು. ಏಕಾಏಕಿ ಸಭೆ ಸ್ಥಳಾಂತರಿಸಿರುವುದು ಬೇಸರವಾಗಿದೆ. ಬಯಲು ಸೀಮೆ ಜಿಲ್ಲೆಗಳ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.