ADVERTISEMENT

ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ: 12 ನಾಮಪತ್ರಗಳ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2020, 13:16 IST
Last Updated 24 ಜನವರಿ 2020, 13:16 IST

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ನಾಲ್ಕನೆಯ ದಿನವಾದ ಶುಕ್ರವಾರ ಎಂಟು ನಾಮಪತ್ರಗಳು ಸಲ್ಲಿಕೆಯಾದವು. ಈವರೆಗೆ ನಗರದ 31 ವಾರ್ಡ್‌ಗಳ ಪೈಕಿ 12 ನಾಮಪತ್ರಗಳು ಸಲ್ಲಿಕೆಯಾದಂತಾಗಿವೆ.

ಶುಕ್ರವಾರ 2ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಕೆ.ರೂಪಾ, 6ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಸಿ.ವೀಣಾ, 7ನೇ ವಾರ್ಡ್‌ನಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಮುನಿನರಸಿಂಹಯ್ಯ, 10ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಸುಬ್ರಮಣ್ಯಚಾರಿ, 12ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಮಹಮ್ಮದ್ ಜಾಫರ್, 13ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಪದ್ಮಮ್ಮ, 14ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿಯಾಗಿ ಕೆ.ಜಿ.ಕುಮಾರ್, 30ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ಜಯಲಕ್ಷ್ಮೀ ಅವರು ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸಲು ಜ.28 ಕೊನೆಯ ದಿನವಾಗಿದ್ದು, ಜ.29 ರಂದು ನಾಮಪತ್ರ ಪರಿಶೀಲನೆ ಕಾರ್ಯ ನಡೆಯಲಿದೆ. ಜ.31 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಫೆ.9 ರಂದು ಬೆಳಿಗ್ಗೆ 7 ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅಗತ್ಯ ಬಿದ್ದರೆ ಫೆ.10 ರಂದು ನಡೆಸಬೇಕಾಗುತ್ತದೆ. ಫೆ.11 ರಂದು ತಾಲ್ಲೂಕು ಕೇಂದ್ರದಲ್ಲಿ ಬೆಳಿಗ್ಗೆ 8 ರಿಂದ ಮತ ಎಣಿಕೆ ಕಾರ್ಯ ನಡೆದು ಫಲಿತಾಂಶ ಘೋಷಣೆಯಾಗಲಿದೆ.

ADVERTISEMENT

ನಾಮಪತ್ರ ಸ್ವೀಕಾರಕ್ಕೆ ವಾರ್ಡ್‌ವಾರು ವಿಂಗಡನೆ ಮಾಡಿ ನಾಲ್ಕು ಚುನಾವಣೆ ಅಧಿಕಾರಿಗಳನ್ನು ನಿಯೋಜಿಸಿ, ನಗರದಲ್ಲಿ ಪ್ರತ್ಯೇಕ ಕಾರ್ಯಾಲಯಗಳನ್ನು ತೆರೆಯಲಾಗಿದೆ. ಆಯಾ ವಾರ್ಡ್ ಉಮೇದುವಾರರು ಸಂಬಂಧಪಟ್ಟ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ರಜಾ ದಿನ ಹೊರತುಪಡಿಸಿ, ಉಳಿದಂತೆ ಬೆಳಿಗ್ಗೆ 11 ರಿಂದ ಮಧ್ಯಾಹ್ನ 3ರ ವರೆಗೆ ನಾಮಪತ್ರ ಸಲ್ಲಿಸಬಹುದು.

1 ರಿಂದ 8 ವಾರ್ಡ್ ಉಮೇದುವಾರರು ನಗರದ ಹಳೆಯ ಜಿಲ್ಲಾ ಆಸ್ಪತ್ರೆ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಅವರ ಕಚೇರಿಯಲ್ಲಿ ತೆರೆದ ಚುನಾವಣಾಧಿಕಾರಿ (ಕುಮಾರಸ್ವಾಮಿ– 9448999242) ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಬೇಕು.

9 ರಿಂದ 16ನೇ ವಾರ್ಡ್‌ಗಳ ವ್ಯಾಪ್ತಿಯ ಉಮೇದುವಾರರು ನಗರದ ಎಂ.ಜಿ.ರಸ್ತೆಯಲ್ಲಿರುವ ಪಿಳ್ಳಪ್ಪ ಕಾಂಪ್ಲೆಕ್ಸ್‌ನಲ್ಲಿರುವ ಜಿಲ್ಲಾ ಪಂಚಾಯತ್ ರಾಜ್ ತಾಂತ್ರಿಕ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಅವರ ಕಚೇರಿಯಲ್ಲಿ ತೆರೆದ ಚುನಾವಣಾಧಿಕಾರಿ (ವಿ.ಶ್ರೀನಿವಾಸರೆಡ್ಡಿ –9880307224) ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಬೇಕು.

17 ರಿಂದ 24ರ ವಾರ್ಡ್‌ಗಳ ಉಮೇದುವಾರರು ನಗರಸಭೆ ಕಚೇರಿಯಲ್ಲಿ ತೆರೆದ ಚುನಾವಣಾಧಿಕಾರಿ (ಹರ್ಷವರ್ಧನ್– 9480859105) ಕಾರ್ಯಾಲಯದಲ್ಲಿ ಮತ್ತು 25 ರಿಂದ 31ರ ವಾರ್ಡ್‌ಗಳ ವ್ಯಾಪ್ತಿಯ ಉಮೇದುವಾರರು ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ ಕಚೇರಿಯಲ್ಲಿ ತೆರೆದ ಚುನಾವಣಾಧಿಕಾರಿ (ಶಿವಕುಮಾರ್– 9448143687) ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.