ADVERTISEMENT

ಚಿಂತಾಮಣಿ: ಲಂಡನ್‌ನಲ್ಲಿ ಕೆಲಸ ಕೊಡಿಸುವುದಾಗಿ ಕರೆದೊಯ್ದಿದು ಕೊಂದರು

ಮೃತ ವ್ಯಕ್ತಿಯಿಂದ ಹಣ ಪಡೆದಿದ್ದ ಮೂವರು ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 29 ಜೂನ್ 2025, 14:15 IST
Last Updated 29 ಜೂನ್ 2025, 14:15 IST
ಕೊಲೆ ಆರೋಪಿ
ಕೊಲೆ ಆರೋಪಿ   

ಚಿಂತಾಮಣಿ: ತಾಲ್ಲೂಕಿನ ಕೆಂಪದೇನಹಳ್ಳಿಯ ತೋಟದ ಬಾವಿಯೊಂದರಲ್ಲಿ ಶವ ಪತ್ತೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಮೂವರು ಆರೋಪಿಗಳನ್ನು ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಲ್ಲೂಕಿನ ಕೈವಾರದ ದೊಡ್ಡಗುಟ್ಟಹಳ್ಳಿ ಗ್ರಾಮ ನಿವಾಸಿ, ಖಾಸಗಿ ಫೈನಾನ್ಸ್ ನೌಕರರಾದ ಸುಧಾಕರ್, ಎಂ.ಮನೋಜ್, ತಳಗವಾರದ ನಿವಾಸಿ ಟೊಮೆಟೊ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಬಂಧಿತ ಆರೋಪಿಗಳು. 

ಆರೋಪಿಗಳು ಮೃತ ವ್ಯಕ್ತಿಗೆ ಲಂಡನ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ದೊಡ್ಡ ಮೊತ್ತ ಹಣ ತೆಗೆದುಕೊಂಡಿದ್ದರು. ಲಂಡನ್‌ಗೆ ಕಳುಹಿಸುವುದಾಗಿ ಮನೆಯಿಂದ ಕರೆದುಕೊಂಡು ಬಂದು ಕೊಲೆ ಮಾಡಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ ಎಂದು ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದರು.

ADVERTISEMENT

ಜೂನ್‌ 23ರಂದು ಕೆಂಪದೇನಹಳ್ಳಿಯ ತೋಟದ ಬಾವಿಯೊಂದರಲ್ಲಿ ವ್ಯಕ್ತಿಯೊಬ್ಬರ ಶವ ಕೊಳತೆ ಸ್ಥಿತಿಯಲ್ಲಿ ಅನುಮಾನಾಸ್ಪದವಾಗಿ ಕಂಡು ಬಂದಿತ್ತು. ಕೈ–ಕಾಲು ಹಗ್ಗದಿಂದ ಕಟ್ಟಿ, ಶವಕ್ಕೆ ಸೈಜು ಕಲ್ಲು ಕಟ್ಟಿ ಬಾವಿಗೆ ಎಸೆಯಲಾಗಿತು. ಶವದ ಗುರುತು ಪತ್ತೆಯಾಗಿರಲಿಲ್ಲ. ಗ್ರಾಮಾಂತರ ಠಾಣೆ ಪೊಲೀಸರು ಅಪರಿಚಿತ ಶವ ಎಂದು ಅಂತ್ಯಸಂಸ್ಕಾರ ನೆರವೇರಿಸಿದ್ದರು ತಿಳಿಸಿದರು.

ರಾಂಪುರ ಗ್ರಾಮದ ವಿಶ್ವನಾಥ್ ಮತ್ತು ಭಾಗ್ಯ ಗ್ರಾಮಾಂತರ ಠಾಣೆಗೆ ಹಾಜರಾಗಿ ‘ನನ್ನ ತಮ್ಮ ರಾಮಾಂಜಿ ಜೂನ್‌ 18 ರಂದು ಆರೋಪಿ ಸುಧಾಕರ್ ಜತೆಯಲ್ಲಿ ಮನೆಯಿಂದ ಹೊರಟವರು ಮತ್ತೆ ಮನೆಗೆ ಬಂದಿಲ್ಲ. ಯಾವುದೇ ಮಾಹಿತಿ ದೊರೆತಿಲ್ಲ’ ಎಂದು ದೂರು ನೀಡಿದ್ದರು.

ಪೋಲೀಸರು ಕೆಂಪದೇನಹಳ್ಳಿಯಲ್ಲಿ ದೊರೆತ ಶವದ ಪೋಟೋ ಹಾಗೂ ಬಟ್ಟೆ ತೋರಿಸಿದಾಗ ಶವ ರಾಮಾಂಜಿ(30)ಯದೆ ಎಂದು ಗುರುತಿಸಿದ್ದರು. ರಾಮಾಂಜಿ ಬೆಂಗಳೂರಿನ ಯಲಹಂಕದ ಖಾಸಗಿ ಸಂಸ್ಥೆಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದರು ಎಂದು ಮಾಹಿತಿ ನೀಡಿದ್ದರು. ಆರೋಪಿ ಸುಧಾಕರ್ ಲಂಡನ್‌ನಲ್ಲಿ ಕೆಲಸ ಕೊಡಿಸುವುದಾಗಿ ಸಾಕಷ್ಟು ಹಣ ಪಡೆದಿದ್ದರು. ಮನೆಗೆ ಬಂದು ರಾಮಾಂಜಿ ಲಗ್ಗೇಜ್ ಪ್ಯಾಕ್ ಮಾಡಿಸಿಕೊಂಡು ಕರೆದುಕೊಂಡು ಹೋಗಿದ್ದರು ಎಂದೂ ತಿಳಿಸಿದ್ದರು.

ಈ ಮಾಹಿತಿ ಆಧಾರದ ಮೇಲೆ ಆರೋಪಿಗಳ ಪತ್ತೆ ತಂಡವನ್ನು ರಚಿಸಲಾಗಿತು. ತಂಡವು ರಾಂಪುರ ಗ್ರಾಮದ ಸ್ಥಳೀಯರಿಂದ ಮಾಹಿತಿ, ಆ ಭಾಗದ ಎಲ್ಲ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಇನ್‌ಸ್ಪೆಕ್ಟರ್‌ ಶಿವರಾಜ್, ಪಿಎಸ್‌ಐ ಗಳಾದ ಮಮತ, ನಾಗೇಂದ್ರ ಪ್ರಸಾದ್, ಅಪರಾಧ ವಿಭಾಗದ ಎಎಸ್‌ಐ ಗಳಾದ ದಿನೇಶ್, ಪ್ರಕಾಶ್, ಸಿಬ್ಬಂದಿ ಚಂದ್ರಪ್ಪ, ವಿಶ್ವನಾಥ್, ಶಿವಪ್ಪ, ನಾಗರಾಜು, ನರೇಶ್, ಕೃಷ್ಣಮೂರ್ತಿ, ಶರಣಬಸವ, ಮಂಜೇಶ್, ಮಂಜುನಾಥರೆಡ್ಡಿ, ಸಿದ್ದೇಶ್, ಅರುಣ್, ರವೀಂದ್ರಕುಮಾರ್ ಕಾರ್ಯಾಚರಣೆಯಲ್ಲಿ ಭಾಗವಹಿದ್ದರು ಎಂದು ತಿಳಿಸಿದರು.

ಡಿವೈಎಸ್ಪಿ ಮುರಳೀಧರ್ ಹಾಗೂ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

 ಕೊಲೆ ಆರೋಪಿ
ಕೊಲೆ ಆರೋಪಿ
ಚಿಂತಾಮಣಿಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಕೊಲೆ ಪ್ರಕರಣದ ಮಾಹಿತಿ ನೀಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ. ಡಿವೈಎಸ್ಪಿ ಪಿ.ಮುರಳೀಧರ್ ಹಾಗೂ ತನಿಖಾ ತಂಡದ ಅಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು
ಪೂರ್ವ ನಿಯೋಜಿತ ಕೊಲೆ 
ಲಂಡನ್‌ನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ರಾಮಾಂಜಿಯಿಂದ ₹10–15 ಲಕ್ಷ ಹಣ ಪಡೆದಿರುವ ಶಂಕೆ ಇದೆ. ಹಣ ವಾಪಸ್‌ ಕೇಳಿರುವುದಕ್ಕೆ ಕೊಲೆ ಮಾಡಲಾಗಿದೆ ಎಂಬುದು ಪ್ರಾಥಾಮಿಕ ತನಿಖೆಯಿಂದ ಗೊತ್ತಾಗಿದೆ. ರಾಮಾಂಜಿಯನ್ನು ಆರೋಪಿಗಳು ಕರೆದುಕೊಂಡು ಹೋಗುವ ಕಾರಿನಲ್ಲಿ ಹಗ್ಗ ಹಾಗೂ ಕೊಲೆ ಬೇಕಾದ ವಸ್ತುಗಳನ್ನು ತೆಗೆದುಕೊಂಡು ಹೋಗಿದ್ದರು. ಇದು ಪೂರ್ವ ನಿಯೋಜಿತವಾಗಿ ಕೊಲೆ ಎಂದು  ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕುಶಾಲ್ ಚೌಕ್ಸೆ ತಿಳಿಸಿದರು. ತನಿಖೆ ಪೂರ್ಣಗೊಂಡ ಇನ್ನಷ್ಟು ಖಚಿತ ಮಾಹಿತಿ ದೊರೆಯಲಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.