ADVERTISEMENT

ಕೈವಾರ: ಇಂದಿನಿಂದ ಸಂಗೀತ ಜಾತ್ರೆ

72 ಗಂಟೆ ನಿರಂತರ ಸಂಗೀತ ಸುಧೆ: ಸಾವಿರಾರು ಕಲಾವಿದರು ಭಾಗಿ

ಎಂ.ರಾಮಕೃಷ್ಣಪ್ಪ
Published 19 ಜುಲೈ 2024, 4:00 IST
Last Updated 19 ಜುಲೈ 2024, 4:00 IST
ಚಿಂತಾಮಣಿ ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಯತೀಂದ್ರರ ಆಶ್ರಮ 
ಚಿಂತಾಮಣಿ ತಾಲ್ಲೂಕಿನ ಕೈವಾರದ ಯೋಗಿನಾರೇಯಣ ಯತೀಂದ್ರರ ಆಶ್ರಮ    

ಚಿಂತಾಮಣಿ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಕೈವಾರದಲ್ಲಿ ಜುಲೈ 19 ರಿಂದ 21ರವರೆಗೆ ಮೂರು ದಿನಗಳ ಕಾಲ ಹಗಲು ರಾತ್ರಿ ನಿರಂತರವಾಗಿ ಗುರುಪೂಜೆ ಮತ್ತು ಸಂಗೀತೋತ್ಸವ ವಿಜೃಂಭಣೆಯಿಂದ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ಸ್ಥಳೀಯ ಮಟ್ಟದ ಕಲಾವಿದರು ಯತೀಂದ್ರರಿಗೆ ಸಂಗೀತ ಸೇವೆ ಸಲ್ಲಿಸಲಿದ್ದಾರೆ. ಗುರುಪೂಜೆ ಮಹೋತ್ಸವದಂದು ಸಾವಿರಾರು ಮಂದಿ ಸಂಗೀತಗಾರರು, ಸಂಗೀತ ಪ್ರೇಮಿಗಳು ಒಂದೆಡೆ ಸೇರಿ ನಿರಂತರವಾಗಿ 72 ಗಂಟೆ ಸಂಗೀತ ಸುಧೆ ಹರಿಸಲಿದ್ದಾರೆ.

ಕೈವಾರ ಕ್ಷೇತ್ರಕ್ಕೆ ಮೂರು ಯುಗಗಳ ಇತಿಹಾಸವಿದೆ. ಕೃತಯುಗದಲ್ಲಿ ಇಂದ್ರನು ವೃತಾಸುರನನ್ನು ಕೊಂದ ಪಾಪ ಪರಿಹಾರಕ್ಕಾಗಿ ಪ್ರತಿಷ್ಠಾಪಿಸಿದ ಪಂಚನಾರಾಯಣ ಶಿಲಾ ಮೂರ್ತಿಗಳಲ್ಲಿ ಕೈವಾರದ ಅಮರನಾರೇಯಣಸ್ವಾಮಿ ಮೂರ್ತಿಯೂ ಒಂದಾಗಿದೆ. ತ್ರೇತಾಯುಗದಲ್ಲಿ ರಾಮ, ಸೀತೆ, ಲಕ್ಷ್ಮಣ ಈ ಭಾಗದಲ್ಲಿ ಸಂಚರಿಸಿ ಅಮರನಾರೇಯಣಸ್ವಾಮಿಯನ್ನು ಪೂಜಿಸಿದ್ದಾರೆ ಎಂಬ ಪ್ರತೀತಿ ಇದೆ. ದ್ವಾಪರಯುಗದಲ್ಲಿ ಅರಗಿನ ಮನೆಯಿಂದ ತಪ್ಪಿಸಿಕೊಂಡು ಬಂದ ಪಾಂಡವರು ವಾಸವಿದ್ದ ಏಕಚಕ್ರಪುರವೇ ಕೈವಾರವಾಗಿದೆ. ಭೀಮನು ಬಕಾಸುರನನ್ನು ಕೊಂದ ದೋಷ ಪರಿಹಾರಕ್ಕಾಗಿ ಶಿವಲಿಂಗವನ್ನು ಪ್ರತಿಷ್ಠಾಪಿಸಿದನು. ಅದೇ ಇಂದಿನ ಭೀಮಲಿಂಗೇಶ್ವರ ದೇವಸ್ಥಾನ ಎಂದು ಸ್ಥಳ ಪುರಾಣವಿದೆ.

ADVERTISEMENT

ಪೌರಾಣಿಕ ಮತ್ತು ಚಾರಿತ್ರಿಕವಾಗಿ ಮಹತ್ವ ಪಡೆದಿರುವ ಕೈವಾರ ಕ್ಷೇತ್ರದಲ್ಲಿ ಧಾರ್ಮಿಕ, ಸಾಮಾಜಿಕ ಕ್ರಾಂತಿ ನಡೆಯುತ್ತಿದೆ. ಈ ಕ್ಷೇತ್ರದಲ್ಲಿ ಟ್ರಸ್ಟ್ ವತಿಯಿಂದ ಸದಾ ಭಜನೆ, ಪೂಜೆ, ಉಪನ್ಯಾಸ, ಸತ್ಸಂಗ, ಸಮಾಜಮುಖಿ ವಿಚಾರಗೋಷ್ಠಿ, ತರಬೇತಿ ಕಾರ್ಯಾಗಾರಗಳು ನಡೆಯುತ್ತಿರುತ್ತವೆ.

ಕೈವಾರ ತಾತಯ್ಯ ಅವರು ಜನರ ನೆಮ್ಮದಿಯ ಬದುಕಿಗೆ ಅಧ್ಯಾತ್ಮಿಕ ಪರಿಹಾರ ಸೂಚಿಸಿ ಜನಮನದಲ್ಲಿ ನೆಲೆಸಿದ ಮಹಾನ್ ಸಂತ. ಮನುಷ್ಯರ ಮನೋಲ್ಲಾಸಕ್ಕೆ ಸುಲಭ ಹಾಗೂ ಸರಳ ಹಾದಿ ತೋರಲು ತಮ್ಮ ದಿವ್ಯ ದೃಷ್ಟಿಯಿಂದ ಭವಿಷ್ಯದ ಆಗುಹೋಗುಗಳನ್ನು ಮೊದಲೇ ಅನಾವರಣ ಮಾಡಿದ ಕಾಲಜ್ಞಾನಿ.

ಯೋಗಿನಾರೇಯಣ ಯತೀಂದ್ರರರು 1726ರಲ್ಲಿ ಜನಿಸಿ ಚಿಕ್ಕ ವಯಸ್ಸಿನಲ್ಲಿಯೇ ಭಜನೆ, ಕೀರ್ತನೆ, ಸಾಧು, ಸತ್ಪುರುಷರ ಸೇವೆಯಲ್ಲಿ ತೊಡಗಿದವರು. ಜೀವನದಲ್ಲಿ ಸದಾ ಅಂತರ್ಮುಖಿಯಾಗಿರುತ್ತಿದ್ದ ನಾರಾಯಣಪ್ಪ ಒಮ್ಮೆ ತಮ್ಮ ಬಳೆ ವ್ಯಾಪಾರಕ್ಕೆ ಹೋಗಿದ್ದಾಗ ಮಳೆ ಬಂದು ಕಾಡಿನ ಒಂದು ಗುಹೆಯಲ್ಲಿ ಆಶ್ರಯ ಪಡೆದಿದ್ದರು. ಅಲ್ಲಿದ್ದ ತಪಸ್ವಿಗಳು ಅವರಿಗೆ ಅಷ್ಟಾಕ್ಷರಿ ಮಂತ್ರವನ್ನು ಉಪದೇಶಿಸಿದರು ಎನ್ನಲಾಗಿದೆ. ನಾರಾಯಣಪ್ಪ ಸಿದ್ಧಿ ಪಡೆದ ಮೇಲೆ ಯೋಗಿನಾರೇಯಣ ಯತೀಂದ್ರರು ಆದರು. 110 ವರ್ಷಗಳ ಕಾಲ ಸಾಧನೆಯ ಜೀವನ ನಡೆಸಿ 1836ರಲ್ಲಿ ಸಜೀವ ಬೃಂದಾವನಸ್ಥರಾದರು.

ಇಂತಹ ಪವಿತ್ರ ಭೂಮಿಯಲ್ಲಿ ಗುರುಪೂಜೆ ಮತ್ತು ಸಂಗೀತೋತ್ಸವವನ್ನು ಯೋಗಿನಾರೇಯಣ ಯತೀಂದ್ರರ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ನಡೆಯುತ್ತಿದೆ. ಜುಲೈ 19 ರಂದು ಧರ್ಮಾಧಿಕಾರಿಗಳ ನೇತೃತ್ವದ ಸಂಕೀರ್ತನಾ ತಂಡ ತಾತಯ್ಯನವರ ಕೀರ್ತನೆಗಳನ್ನು ಹಾಡುವ ಮೂಲಕ ಸಂಗೀತೋತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ಅಮರನಾರೇಯಣಸ್ವಾಮಿ ದೇವಸ್ಥಾನ
ಯೋಗಿನಾರೇಯಣ ಯತೀಂದ್ರರರು

ಕ್ಷೇತ್ರದ ಪ್ರೇಕ್ಷಣೀಯ ಸ್ಥಳಗಳು

ಕೈವಾರ ಕ್ಷೇತ್ರದಲ್ಲಿ ಯೋಗಿನಾರೇಯಣ ಯತೀಂದ್ರರ ಆಶ್ರಮ ಅಮರನಾರೇಯಣಸ್ವಾಮಿ ದೇವಸ್ಥಾನ ಭೀಮಲಿಂಗೇಶ್ವರಸ್ವಾಮಿ ದೇವಸ್ಥಾನ ನರಸಿಂಹಸ್ವಾಮಿ ಗುಹೆ ತಪೋವನ ಬೆಟ್ಟ ಬಕಾಸುರನಗುಂಡು ಮುಂತಾದ ಪ್ರೇಕ್ಷಣೀಯ ಸ್ಥಳಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.