ADVERTISEMENT

ಚಿಕ್ಕಬಳ್ಳಾಪುರ: ಬೆಳಿಗ್ಗೆಯೇ ನಂದಿಬೆಟ್ಟದ ಬಾಗಿಲಲ್ಲಿ ಪ್ರವಾಸಿಗರು

ಮೂರು ತಿಂಗಳ ನಂತರ ಭೇಟಿ: ಮೊದಲ ದಿನ ಪ್ರವಾಸಿಗರ ಸಂಖ್ಯೆ ವಿರಳ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2021, 5:48 IST
Last Updated 2 ಡಿಸೆಂಬರ್ 2021, 5:48 IST
ನಂದಿಬೆಟ್ಟದಲ್ಲಿ ಪ್ರವಾಸಿಗರು
ನಂದಿಬೆಟ್ಟದಲ್ಲಿ ಪ್ರವಾಸಿಗರು   

ಚಿಕ್ಕಬಳ್ಳಾಪುರ: ಪ್ರಸಿದ್ಧ ನಂದಿಗಿರಿಧಾಮಕ್ಕೆ ಮೂರು ತಿಂಗಳ ನಂತರ ಪ್ರವಾಸಿಗರು ಭೇಟಿ ನೀಡಿದರು. ಬುಧವಾರ ಬೆಳಿಗ್ಗೆ 6ರಿಂದಲೇ ಮುಖ್ಯದ್ವಾರಕ್ಕೆ ಪ್ರವಾಸಿಗರು ಬಂದರು. ಮೊದಲದಿನವಾದ ಕಾರಣ ಪ್ರವಾಸಿಗರ ಸಂಖ್ಯೆ ಕಡಿಮೆ ಇತ್ತು. ಮಧ್ಯಾಹ್ನ 12ರವರೆಗೆ 500ಕ್ಕೂ ಹೆಚ್ಚು ಮಂದಿಯಷ್ಟೇ ಗಿರಿಧಾಮಕ್ಕೆ ಬಂದಿದ್ದರು. ವಾಹನ ನಿಲುಗಡೆ ಸ್ಥಳದಲ್ಲಿ ಈ ಹಿಂದಿನಂತೆ ದಟ್ಟಣೆ ಕಂಡು ಬರಲಿಲ್ಲ.

ಕಾರಹಳ್ಳಿ ಕ್ರಾಸ್ ಹಾಗೂ ನಂದಿಬೆಟ್ಟದ ಆಸುಪಾಸಿನಲ್ಲಿ ಹೋಟೆಲ್‌ಗಳು, ಪಾನಿಪೂರಿ, ಆಮ್ಲೆಟ್, ಕಬಾಬ್ ಅಂಗಡಿಗಳು ತೆರೆದಿದ್ದವು. ವಾಣಿಜ್ಯ ಚಟುವಟಿಕೆಗಳು ಸಾಮಾನ್ಯ ಸ್ಥಿತಿಯಲ್ಲಿ ಇತ್ತು.

ಕಳೆದ ಮೂರು ತಿಂಗಳಿನಿಂದ ಪ್ರವಾಸಿಗರು ಇಲ್ಲದ ಕಾರಣ ಇವುಗಳು ವಹಿವಾಟು ಸ್ಥಗಿತಗೊಳಿಸಿ ಬಾಗಿಲು ಮುಚ್ಚಿದ್ದವು. ನಂದಿ ಹಾದಿಯಲ್ಲಿ ಜೋಳ, ಎಳನೀರು ಮಾರಾಟಗಾರರು ಯಥಾಪ್ರಕಾರ ವ್ಯಾಪಾರದಲ್ಲಿ ತೊಡಗಿದ್ದರು.

ADVERTISEMENT

ಬೆಂಗಳೂರಿನ ವಿನಿತ್, ಶಿಡ್ಲಘಟ್ಟ ತಾಲ್ಲೂಕಿನ ವಿಜಯಪುರದ ಮೋಹನ್ ಹಾಗೂ ಸ್ನೇಹಿತರು ಬೆಳ್ಳಂ ಬೆಳಿಗ್ಗೆ ಬೆಟ್ಟಕ್ಕೆ ಸೈಕ್ಲಿಂಗ್ ಬಂದಿದ್ದರು. ದಟ್ಟ ಮಂಜಿನಿಂದ ವಾತಾವರಣವಿತ್ತು. ಕಾರುಗಳ ಚಾಲಕರ ಹೆಡ್‌ಲೈಟ್ ಹಾಕಿಕೊಂಡು ಗಿರಿಧಾಮಕ್ಕೆ ಸಾಗುತ್ತಿದ್ದರು.ಬೆಟ್ಟಕ್ಕೆ ಬಂದ ಪ್ರವಾಸಿಗರು ಭೂಕುಸಿತವಾದ ಸ್ಥಳವನ್ನು ನೋಡಿ ಅಬ್ಬಾ! ಎಷ್ಟೊಂದು ಭೂ ಕುಸಿತವಾಗಿದೆ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದರು. ಕುಸಿತವಾದ ಸ್ಥಳದಲ್ಲಿ ಕ್ಷಣ ಹೊತ್ತು ನಿಂತು ಬೆಟ್ಟದತ್ತ ಮುಖ ಮಾಡುತ್ತಿದ್ದಾರೆ.

ಮೊದಲ ದಿನವೇ ಯುವ ಪ್ರೇಮಿಗಳು ಬೆಟ್ಟದಲ್ಲಿ ಕಂಡು ಬಂದರು. ಪರಸ್ಪರ ಕೈಹಿಡಿದು, ಸೆಲ್ಫಿ ತೆಗೆದುಕೊಳ್ಳುತ್ತ ಸಂಭ್ರಮಿಸಿದರು. ಮಂಜಿನ ಹಾದಿ ಪ್ರೇಮಿಗಳಲ್ಲಿ ಪುಳಕ ಹೆಚ್ಚಳಕ್ಕೆ ಕಾರಣವಾಗಿತ್ತು. ಬಹಳಷ್ಟು ಮಂದಿ ಕುಟುಂಬ ಸಮೇತರಾಗಿ ಚಿಕ್ಕಮಕ್ಕಳ ಜತೆ ಗಿರಿಧಾಮಕ್ಕೆ ಬಂದಿದ್ದರು.

ಬೆಟ್ಟವನ್ನು ತಬ್ಬಿದ ಮಂಜು: ಮಧ್ಯಾಹ್ನ 12ಗಂಟೆಯಾದರೂ ಬೆಟ್ಟವನ್ನುಮಂಜು ಹೊದ್ದಿತ್ತು. ಪ್ರವಾಸಿಗರು ಈ ತಣ್ಣನೆಯ ಅನುಭವದಿಂದ ಪುಳಕಿತರಾಗುತ್ತಿದ್ದರು. ಬೆಂಗಳೂರಿನಲ್ಲಿ ನೆಲೆಸಿರುವ ಕೇರಳ, ಆಂಧ್ರಪ್ರದೇಶದ ಜನರೂ ಮೊದಲ ದಿನವೇ ಗಿರಿಧಾಮಕ್ಕೆ ಬಂದಿದ್ದರು.

‘ಮೂರು ವರ್ಷದಿಂದ ನಂದಿಬೆಟ್ಟಕ್ಕೆ ಸೈಕ್ಲಿಂಗ್‌ ಮಾಡುತ್ತಿದ್ದೇವೆ. ಮೂರು ತಿಂಗಳಿನಿಂದ ಬೆಟ್ಟದ ದಾರಿ ಬಂದ್ ಆಗಿದ್ದು ಬೇಸರವನ್ನು ತರಿಸಿತ್ತು. ಇನ್ನೆಂದೂ ಈ ರೀತಿಯ ಪ್ರಕೃತಿ ವಿಕೋಪ ಜರುಗಬಾರದು. ಇನ್ನು ಮುಂದೆ ಆಗಾಗ್ಗೆ ಇಲ್ಲಿಗೆ ಸೈಕ್ಲಿಂಗ್‌ನಲ್ಲಿ ಬರುತ್ತೇವೆ’ ಎಂದು ವಿನಿತ್ ತಿಳಿಸಿದರು.

‘ಈ ರೀತಿಯ ಹವಾಗುಣ ಇರುವ ವಾತಾವರಣ ಬೆಂಗಳೂರಿನ ಸುತ್ತ ಎಲ್ಲೂ ಇಲ್ಲ. ವಾರಾಂತ್ಯದಲ್ಲಿ ನಾವು ಇಲ್ಲಿಗೆ ಬರುವುದಿಲ್ಲ. ಕನಿಷ್ಠ ಮೂರು ತಾಸು ಬೆಟ್ಟದಲ್ಲಿ ಇರುತ್ತೇವೆ’ ಎಂದು ಹೇಳಿದರು.

‘ನಾವು ಮೊದಲ ಬಾರಿ ಇಲ್ಲಿಗೆ ಬಂದಿದ್ದೇವೆ. ಸುಮ್ಮನೆ ಇಲ್ಲಿಗೆ ಬಂದೆವು. ಆದರೆ ಇಂದೇ ನಂದಿ ಪ್ರವೇಶಕ್ಕೆ ಅವಕಾಶ ದೊರೆತಿದೆ. ಖುಷಿ ಆಗುತ್ತಿದೆ’ ಎಂದು ದಾವಣಗೆರೆಯ ರಂಜಿತಾ ಸಂಭ್ರಮಿಸಿದರು.

‘ತುಂಬಾ ಖುಷಿ ಆಗುತ್ತಿದೆ. ತುಂಬಾ ಚೆನ್ನಾಗಿದೆ. ಮೂರು ತಿಂಗಳಿನಿಂದ ಗಿರಿಧಾಮಕ್ಕೆ ಪ್ರವೇಶವಿಲ್ಲದಿದ್ದು ಬೇಸರ ತರಿಸಿತ್ತು. ಕುಟುಂಬದ ಜತೆ ಬಂದಿದ್ದೇವೆ’ ಎಂದು ಬೆಂಗಳೂರಿನ ಮೇಘನಾ ತಿಳಿಸಿದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.