ADVERTISEMENT

ನರೇಗಾ; ಚಿಕ್ಕಬಳ್ಳಾಪುರಕ್ಕೆ 5ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2025, 6:11 IST
Last Updated 9 ಆಗಸ್ಟ್ 2025, 6:11 IST

ಚಿಕ್ಕಬಳ್ಳಾಪುರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2024-25ನೇ ಸಾಲಿಗೆ 30 ಲಕ್ಷ ಮಾನವ ದಿನಗಳ ಗುರಿ ಹೊಂದಲಾಗಿತ್ತು. 33.78 ಲಕ್ಷ ಮಾನವ ದಿನಗಳನ್ನು ಸೃಜಿಸುವ ಮೂಲಕ ಸರಾಸರಿ ಶೇ 112.6 ರಷ್ಟು ಸಾಧನೆ ಮಾಡಿ, ಮಾನವ ದಿನಗಳ ಸೃಜನೆಯಲ್ಲಿ ಜಿಲ್ಲೆಯು ರಾಜ್ಯದಲ್ಲಿಯೇ 5ನೇ ಸ್ಥಾನಗಳಿಸಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವೈ.ನವೀನ್ ಭಟ್ ತಿಳಿಸಿದರು.

ಈ ಬಗ್ಗೆ ಮಾಹಿತಿ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನರೇಗಾ ಯೋಜನೆಯಡಿ ಉತ್ತಮ ಸಾಧನೆ ಮಾಡಲಾಗಿದೆ. 2024-25 ನೇ ಸಾಲಿನಲ್ಲಿ 33.78 ಲಕ್ಷ ಮಾನವ ದಿನಗಳನ್ನು ಸೃಜಿಸಿ ₹202.63 ಕೋಟಿ ವೆಚ್ಚ ಮಾಡಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಅನುಷ್ಠಾನ ಇಲಾಖೆಗಳಾದ ತೋಟಗಾರಿಕೆ ಇಲಾಖೆಯಿಂದ 1,633 ಹೆಕ್ಟೇರ್‌, ರೇಷ್ಮೆ ಇಲಾಖೆಯಿಂದ 203 ಹೆಕ್ಟೇರ್‌, ಕೃಷಿ ಇಲಾಖೆಯಿಂದ 131 ಹೆಕ್ಟೇರ್ ಪ್ರದೇಶ ವಿಸ್ತರಿಸಲಾಗಿದೆ. ಅನುಷ್ಠಾನ ಇಲಾಖೆಗಳಿಂದ ಇಲ್ಲಿಯವರೆವಿಗೂ ಒಟ್ಟು 8.66 ಲಕ್ಷ ಮಾನವ ದಿನಗಳನ್ನು ಸೃಜಿಸಲಾಗಿದೆ ಎಂದು ತಿಳಿಸಿದರು.

ADVERTISEMENT

2025-26 ನೇ ಸಾಲಿಗೆ ಸರ್ಕಾರದಿಂದ 28 ಲಕ್ಷ ಮಾನವ ದಿನಗಳ ಗುರಿ ನೀಡಲಾಗಿದೆ. ಜುಲೈ ಅಂತ್ಯದ ವೇಳೆಗೆ 10.83 ಲಕ್ಷ ಮಾನವ ದಿನಗಳ ಸೃಜಸಿ ವಾರ್ಷಿಕ ಗುರಿಗೆ ಅನುಗುಣವಾಗಿ ಈಗಾಗಲೇ ಶೇ 38.67 ರಷ್ಟು ಪ್ರಗತಿ ಸಾಧಿಸಲಾಗಿದೆ. ಜಿಲ್ಲೆಯು ಜುಲೈ ಅಂತ್ಯದ ಮಾನವ ದಿನಗಳ ಸೃಜನೆಯ ಪ್ರಗತಿಯಲ್ಲಿ ರಾಜ್ಯದಲ್ಲಿ 3 ನೇ ಸ್ಥಾನದಲ್ಲಿತ್ತು ಎಂದು ತಿಳಿಸಿದರು.

ಮಹಾತ್ಮ ಗಾಂಧಿ ರಾಷ್ಠ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಅನುಷ್ಠಾನಗೊಳಿಸುವ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಹಾಗೂ ಇತರೆ ಮಾರ್ಗಸೂಚಿಗಳ ಉಲ್ಲಂಘನೆಯ ಬಗ್ಗೆ ಯಾವುದಾದರೂ ಪ್ರಕರಣಗಳಿದ್ದಲ್ಲಿ, ಜಿಲ್ಲಾ ಮಟ್ಟದಲ್ಲಿರುವ ಓಂಬುಡ್ಸ್‌ಮನ್  ಕಚೇರಿಗೆ  ದೂರು ಸಲ್ಲಿಸಬಹುದು ಎಂದು ಹೇಳಿದರು.

2024-25 ನೇ ಸಾಲಿನಲ್ಲಿ ಸ್ವೀಕೃತವಾದ ದೂರುಗಳ ಪೈಕಿ ₹ 1,03,461 ವಸೂತಿ ಮಾಡಿ ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಕೆ.ಎಸ್.ಇ.ಜಿ.ಎಫ್ ಖಾತೆಗೆ ಜಮೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.