ADVERTISEMENT

ಮತದಾನದ ಹಕ್ಕನ್ನು ವಿವೇಚನೆಯಿಂದ ಬಳಸಿ: ಎಸ್‌.ಎಚ್‌.ಕೋರಡ್ಡಿ

‘ರಾಷ್ಟ್ರೀಯ ಮತದಾರರ ದಿನಾಚರಣೆ’ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 15:11 IST
Last Updated 25 ಜನವರಿ 2019, 15:11 IST
ಹೊಸದಾಗಿ ಮತದಾರರಾಗಿ ನೋಂದಣಿ ಮಾಡಿಸಿಕೊಂಡ ಯುವಜನರಿಗೆ ಕಾರ್ಯಕ್ರಮದಲ್ಲಿ ಮತದಾರರ ಗುರುತಿನ ಚೀಟಿ ವಿತರಿಸಲಾಯಿತು.
ಹೊಸದಾಗಿ ಮತದಾರರಾಗಿ ನೋಂದಣಿ ಮಾಡಿಸಿಕೊಂಡ ಯುವಜನರಿಗೆ ಕಾರ್ಯಕ್ರಮದಲ್ಲಿ ಮತದಾರರ ಗುರುತಿನ ಚೀಟಿ ವಿತರಿಸಲಾಯಿತು.   

ಚಿಕ್ಕಬಳ್ಳಾಪುರ: ‘ಯುವಜನರು ಈ ದೇಶದ ಬಲಿಷ್ಠ ಶಕ್ತಿ. ಈ ಶಕ್ತಿ ಮತದಾನದ ಹಕ್ಕನ್ನು ವಿವೇಚನೆಯಿಂದ ಬಳಸಿ ದೇಶಕ್ಕೆ ಒಳ್ಳೆಯ ಸರ್ಕಾರ ಮತ್ತು ನಾಯಕತ್ವ ದೊರೆಯುವಲ್ಲಿ ಮಹತ್ವದ ಪಾತ್ರ ವಹಿಸಬೇಕು’ ಎಂದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಎಸ್‌.ಎಚ್‌.ಕೋರಡ್ಡಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಚುನಾವಣಾ ಆಯೋಗ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ವತಿಯಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ 9ನೇ ‘ರಾಷ್ಟ್ರೀಯ ಮತದಾರರ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ಇಚ್ಛೆಯಂತೆ ಆಡಳಿತ ನಡೆಯಬೇಕು. ಮತದಾನದಿಂದ ಮಾತ್ರ ಮುಂದಿನ ಭವಿಷ್ಯ ನಿರ್ಧರಿಸುವುದು ಸಾಧ್ಯ. ಹೀಗಾಗಿ, 18 ವರ್ಷ ತುಂಬಿದ ಪ್ರತಿಯೊಬ್ಬರೂ ಮತದಾರರಾಗಿ ಹೆಸರು ನೋಂದಾಯಿಸಿಕೊಳ್ಳುವ ಜತೆಗೆ ಪ್ರತಿ ಚುನಾವಣೆಯಲ್ಲಿ ತಪ್ಪದೆ ಮತದಾನ ಮಾಡಬೇಕು. ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕಿದೆ’ ಎಂದು ತಿಳಿಸಿದರು.

ADVERTISEMENT

‘ಮತದಾರರು ದೇಶದ ಅಳಿವು, ಉಳಿವಿನ ಬಗ್ಗೆ ಚಿಂತಿಸಿ, ನಮಗೆ ಯಾವ ಸರ್ಕಾರ ಬೇಕು ಎಂಬುದನ್ನು ನಿರ್ಧರಿಸಿ, ಮತ ಚಲಾಯಿಸುವ ಮೂಲಕ ಯೋಗ್ಯ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು. ನಾವು ಮೊದಲು ಪ್ರಾಮಾಣಿಕರಾಗಿ ಉಳಿಯುವ ಜತೆಗೆ ಪ್ರಾಮಾಣಿಕರಿಗೆ ಮತ ಹಾಕಬೇಕು. ಆಗ ಮಾತ್ರ ದೇಶವನ್ನು ಸ್ವಚ್ಛವಾಗಿಡಲು ಸಾಧ್ಯ. ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಗೌರವ, ಘನತೆ ತರಲು ಸಾಧ್ಯ’ ಎಂದರು.

ಜಿಲ್ಲಾಧಿಕಾರಿ ಅನಿರುದ್ಧ್‌ ಶ್ರವಣ್‌ ಮಾತನಾಡಿ, ‘ನಮ್ಮದೇ ಆದ ಜನಪ್ರತಿನಿಧಿಯ ಆಯ್ಕೆಗಾಗಿ ನಾವು ಮತದಾರನಾಗಿರುವುದೇ ಹೆಮ್ಮೆಯ ವಿಚಾರ. ಆದ್ದರಿಂದ ಮತದಾನದಲ್ಲಿ ಯುವ ಜನರು ಹಾಗೂ ಮಹಿಳೆಯರು ಅರ್ಥಪೂರ್ಣ ಪಾಲ್ಗೊಳ್ಳವಿಕೆಯ ಅರಿವು ಮೂಡಿಸಲು ಚುನಾವಣಾ ಆಯೋಗ ಒತ್ತು ನೀಡಿದೆ. ಜಿಲ್ಲೆಯಲ್ಲಿ ಮತದಾರರಿಗೆ ಎಪಿಕ್ ಕಾರ್ಡ್ ನೀಡುವ ಕಾರ್ಯ ಶೇ. 100 ರಷ್ಟು ಆಗಿದೆ’ ಎಂದು ಹೇಳಿದರು.

‘ದೇಶದ ಆಡಳಿತ ನಿರ್ಧರಿಸುವುದು ಬರೀ ಮತದಾರರಿಂದ ಮಾತ್ರ ಸಾಧ್ಯ. ಆದ್ದರಿಂದ ಪ್ರತಿಯೊಬ್ಬರೂ ಜವಾಬ್ದಾರಿಯುತವಾಗಿ ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು. ಶ್ರೀಮಂತ, ಬಡವನ ಮತಕ್ಕೆ ಮೌಲ್ಯ ಒಂದೇ. ಮತ ಎಂಬುದು ಒಂದು ಅಸ್ತ್ರ ಇದ್ದಂತೆ. ಯೋಗ್ಯ ವ್ಯಕ್ತಿಯನ್ನು ಚುನಾವಣೆಯಲ್ಲಿ ಆಯ್ಕೆ ಮಾಡುವುದು ನಮ್ಮೆಲ್ಲರ ಕರ್ತವ್ಯ. ಮತದ ಮೂಲಕ ನಮ್ಮ ನಿಲುವನ್ನು ವ್ಯಕ್ತಪಡಿಸಬಹುದು’ ಎಂದು ತಿಳಿಸಿದರು.

‘ಮತದಾನದ ಕುರಿತು ಸಾರ್ವಜನಿಕರಿಗೆ ಇವಿಎಂ ಮತ್ತು ವಿವಿ ಪ್ಯಾಟ್‌ ಯಂತ್ರಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಮತದಾನದ ಕುರಿತು ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಯುವಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಶಾಲಾ-–ಕಾಲೇಜುಗಳಲ್ಲಿ ರಸಪ್ರಶ್ನೆ, ಪ್ರಬಂಧ ಸ್ಪರ್ಧೆಗಳನ್ನು ನಡೆಸಲಾಗುವುದು’ ಎಂದರು.

ಕಾರ್ಯಕ್ರಮದಲ್ಲಿ ಮತದಾರರ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಹೊಸದಾಗಿ ಮತದಾರರಾಗಿ ಹೆಸರು ನೋಂದಾಯಿಸಿಕೊಂಡವರಿಗೆ ಮತದಾರರ ಗುರುತಿನ ಚೀಟಿ ವಿತರಿಸಲಾಯಿತು.

ಹಿರಿಯ ಸಿವಿಲ್ ನ್ಯಾಯಾಧೀಶ ಎಚ್. ದೇವರಾಜ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗುರುದತ್‌ ಹೆಗಡೆ, ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್, ವಕೀಲರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ತಮ್ಮೇಗೌಡ, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ನಾಗೇಶ್, ತಹಶೀಲ್ದಾರ್ ಕೆ.ನರಸಿಂಹಮೂರ್ತಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕ ಲಕ್ಷ್ಮೀ ನಾರಾಯಣರೆಡ್ಡಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.