ಶಿಡ್ಲಘಟ್ಟ (ಚಿಕ್ಕಬಳ್ಳಾಪುರ): ತಾಲ್ಲೂಕಿನ ದೊಡ್ಡತೇಕಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಲವು ತಿಂಗಳಿನಿಂದ ಕುಡಿಯಲು ಹಾಗೂ ಶೌಚಕ್ಕೆ ಬಳಸಲು ನೀರು ಇಲ್ಲ!
ಬಿಸಿಯೂಟ ತಯಾರಿಕೆಗಾಗಿ ಅಕ್ಷರ ದಾಸೋಹ ಸಿಬ್ಬಂದಿ ಹೊರಗಿನಿಂದ ಬಿಂದಿಗೆಗಳಲ್ಲಿ ನೀರು ತರಬೇಕಾಗಿದೆ. ಸಮಸ್ಯೆ ಇಂದು ಇಲ್ಲವೇ ನಾಳೆ ಪರಿಹಾರ ಆಗುತ್ತದೆ ಎಂದು ಕಾಯ್ದ ಪೋಷಕರ ಆಕ್ರೋಶ ಶನಿವಾರ ಕಟ್ಟೆಯೊಡೆದಿದೆ.
ವಿದ್ಯಾರ್ಥಿನಿಯರ ತಾಯಂದಿರು ಶಾಲೆಗೆ ಮುತ್ತಿಗೆ ಹಾಕಿ ಎಸ್‌ಡಿಎಂಸಿ ಅಧ್ಯಕ್ಷ, ಮುಖ್ಯಶಿಕ್ಷಕರು ಹಾಗೂ ಪಂಚಾಯಿತಿ ವಿರುದ್ಧ ಹರಿಹಾಯ್ದರು. ಶೌಚಾಲಯದಲ್ಲಿ ನೀರಿಲ್ಲದೆ ತಮ್ಮ ಹೆಣ್ಣು ಮಕ್ಕಳು ನಿತ್ಯ ಅನುಭವಿಸುತ್ತಿರುವ ಕಷ್ಟ, ಮುಜುಗರವನ್ನು ಬಿಡಿಸಿಟ್ಟರು.
ಶಾಲೆಯಲ್ಲಿ ಒಂದರಿಂದ ಏಳನೇ ತರಗತಿವರೆಗೆ 99 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಅವರಲ್ಲಿ 56 ಬಾಲಕಿಯರಿದ್ದಾರೆ. ಐವರು ಶಿಕ್ಷಕರ ಪೈಕಿ ಮೂವರು ಶಿಕ್ಷಕಿಯರು ಇದ್ದಾರೆ.
ಬೇರೆ ತಾಲ್ಲೂಕುಗಳಿಂದ ಶಾಲೆಗೆ ಬರುವ ಶಿಕ್ಷಕಿಯರು ಸಹ ಶೌಚಾಲಯಕ್ಕೆ ನೀರು ಇಲ್ಲದ ಕಾರಣ ಶಾಲೆ ಸಮೀಪದ ಸ್ಥಳೀಯರ ಮನೆಗಳನ್ನು ಎಡತಾಕುತ್ತಿದ್ದಾರೆ. ಈ ಸಮಸ್ಯೆ ಬಗ್ಗೆ ಹಲವು ಬಾರಿ ಪಂಚಾಯಿತಿ ಗಮನಕ್ಕೆ ತಂದರೂ ಅಧಿಕಾರಿಗಳು ಮತ್ತು ಸಿಬ್ಬಂದಿ ಗಮನಕ್ಕೆ ಹಾಕಿಕೊಳ್ಳುತ್ತಿಲ್ಲ ಎಂದು ಪೋಷಕರು ತರಾಟೆಗೆ ತೆಗೆದುಕೊಂಡರು.
‘ಗ್ರಾಮದ ಬೇರೆ ಬೇರೆ ಕಡೆಗಳಿಂದ ಬಿಂದಿಗೆಯಲ್ಲಿ ಮಕ್ಕಳಿಂದ ನೀರು ತರಿಸುತ್ತಿದ್ದೀರಿ. ಏಕೆ ಈ ಕೆಲಸ ಮಾಡಿಸುತ್ತೀರಿ’ ಎಂದು ಶಿಕ್ಷಕರ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು.
‘ಶಾಲೆಯಲ್ಲಿ ಹಲವಾರು ಸಮಸ್ಯೆಗಳು ಇವೆ. ಜನಪ್ರತಿನಿಧಿಗಳು, ಪಂಚಾಯಿತಿ ಅಧಿಕಾರಿಗಳು, ಶಿಕ್ಷಣ ಇಲಾಖೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಎಸ್‌ಡಿಎಂಸಿ ರಚಿಸಿ ಹಲವು ವರ್ಷಗಳೇ ಕಳೆದಿವೆ. ಅಧ್ಯಕ್ಷರ ಮಕ್ಕಳು ಶಾಲೆಯಲ್ಲಿ ಓದುತ್ತಿಲ್ಲ. ಆದರೆ ಹಲವು ವರ್ಷಗಳಿಂದಲೂ ಅವರೇ ಅಧ್ಯಕ್ಷರಾಗಿ ಇದ್ದಾರೆ. ಹೊಸ ಎಸ್‌ಡಿಎಂಸಿ ಆಡಳಿತ ಮಂಡಳಿ ಆಯ್ಕೆ ಮಾಡಿಲ್ಲ. ಈ ಕಾರಣದಿಂದ ಇಷ್ಟೆಲ್ಲಾ ಅಧ್ವಾನ ಆಗಿದೆ’ ಎಂದು ಪೋಷಕರು ಅಸಮಾಧಾನ ವ್ಯಕ್ತಪಡಿಸಿದರು.
ಸರಿಪಡಿಸುವ ಭರವಸೆ: ಶಾಲೆಯಲ್ಲಿನ ನೀರಿನ ಸಮಸ್ಯೆಯ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಒ ಅವರಿಗೆ ತಿಳಿಸಿದ್ದೇವೆ. ಸದ್ಯದಲ್ಲಿಯೇ ಪೈಪ್‌ಲೈನ್ ಸರಿಪಡಿಸಿ ಕೊಡುವುದಾಗಿ ತಿಳಿಸಿದ್ದಾರೆ. ಎಸ್‌ಡಿಎಂಸಿ ಸಭೆ ಕರೆದು ಸರ್ಕಾರದ ಆದೇಶದಂತೆ ನೂತನ ಸಮಿತಿ ರಚಿಸಲಾಗುವುದು ಎಂದು ಮುಖ್ಯ ಶಿಕ್ಷಕ ಕಾಂತರಾಜು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.