ಚಿಕ್ಕಬಳ್ಳಾಪುರ: ಪಿಎಲ್‌ಡಿ ಬ್ಯಾಂಕ್, ನಗರಸಭೆ ಅಧ್ಯಕ್ಷ ಸ್ಥಾನವನ್ನು ಒಕ್ಕಲಿಗ ಸಮುದಾಯಕ್ಕೆ ನೀಡಲಾಗಿದೆ. ಸಾಮಾಜಿಕ ನ್ಯಾಯ ಕಾಪಾಡಬೇಕು ಮತ್ತು ಶೋಷಿತ ಸಮುದಾಯಗಳಿಗೆ ರಾಜಕೀಯ ಅವಕಾಶ ಕಲ್ಪಿಸಬೇಕು ಎಂದು ಚಿಕ್ಕಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್) ಅಧ್ಯಕ್ಷರಾಗಿ ಪರಿಶಿಷ್ಟ ಪಂಗಡದ ಆವಲಕೊಂಡರಾಯಪ್ಪ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ತಿಳಿಸಿದರು.
ಈ ಕುರಿತು ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ನನ್ನ ರಾಜಕೀಯ ಬದುಕಿನಲ್ಲಿ ಎಲ್ಲ ಸಮುದಾಯಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದೇನೆ. ವಿಶೇಷವಾಗಿ ಧ್ವನಿ ಇಲ್ಲದ ಮತ್ತು ಶೋಷಿತ ಸಮುದಾಯಗಳ ನಾಯಕರಿಗೆ ರಾಜಕೀಯ ಅಧಿಕಾರ ನೀಡಿದ್ದೇನೆ’ ಎಂದರು.
‘ಟಿಎಪಿಸಿಎಂಎಸ್ ಅಧ್ಯಕ್ಷರ ಆಯ್ಕೆ ವಿಚಾರದಲ್ಲಿ ನಾನು ಯಾರ ಒತ್ತಡಕ್ಕೂ ಮಣಿದಿಲ್ಲ. ಯಾವ ನಾಯಕರು ಹೇಳಿದರು ಎಂದು ನಾನು ಈ ನಿರ್ಧಾರ ಕೈಗೊಂಡಿಲ್ಲ. ಪಕ್ಷವು ಬಲಹೀನ ವರ್ಗಗಳ ಪರವಾಗಿ ಇರಬೇಕು. ಈ ದೃಷ್ಟಿಯಿಂದ ಟಿಎಪಿಸಿಎಂಎಸ್ ಅಧ್ಯಕ್ಷರ ಆಯ್ಕೆ ನಡೆದಿದೆ. ಸಾಮಾಜಿಕ ನ್ಯಾಯ ನೀಡಿದ್ದೇವೆ’ ಎಂದರು.
‘ಯಾವ ನಾಯಕರೂ ನನಗೆ ಮೇಲಲ್ಲ, ಕೆಳಗಿನವರಲ್ಲ. ಎಲ್ಲ ಮುಖಂಡರನ್ನೂ ಸಮಾನ ದೃಷ್ಟಿಯಿಂದ ನೋಡಿದ್ದೇನೆ. ಮುಂದೆಯೂ ನನ್ನದು ಇದೇ ದೃಷ್ಟಿ ಆಗಿರಲಿದೆ’ ಎಂದರು.
ಎಷ್ಟೋ ಜನರು ಸಾಮಾನ್ಯ ವರ್ಗದವರು ಇದ್ದರು. ಅವರಿಗೆ ಕೊಡಬಹುದಿತ್ತು. ಆದರೆ ಎಲ್ಲ ವರ್ಗಕ್ಕೂ ಆದ್ಯತೆ ಕೊಡಬೇಕು. ಟಿಎಪಿಸಿಎಂಎಸ್ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಪರಿಶಿಷ್ಟ ಸಮುದಾಯದ ಮುಖಂಡರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಹೇಳಿದರು.
ಈ ಹಿಂದೆ ಬಲಿಜ ಸಮುದಾಯದವರನ್ನು ಎಪಿಎಂಸಿ ನಿರ್ದೇಶಕರನ್ನಾಗಿ ಮಾಡಿ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದ್ದೇನೆ. ಹೀಗೆ ಎಲ್ಲ ವರ್ಗಕ್ಕೂ ಆದ್ಯತೆ ನೀಡಿದ್ದೇವೆ ಎಂದರು.
ಹಿರಿಯರು ಇರಲಿ, ಕಿರಿಯರು ಇರಲಿ ಯಾರು ತಪ್ಪು ಮಾಡಿದರೂ ಅವರಿಗೆ ಶಿಕ್ಷೆ ಆಗಬೇಕು. ಅಂದಮಾತ್ರಕ್ಕೆ ಅವರನ್ನು ಪಕ್ಷದಿಂದ ಹೊರಗೆ ಹಾಕುವುದಿಲ್ಲ. ಅವರಿಗೆ ಪಕ್ಷದ ಸಿದ್ದಾಂತ ಅರ್ಥ ಮಾಡಿಸಿ ಪಕ್ಷದ ಚೌಕಟ್ಟಿನಲ್ಲಿ ಕೆಲಸ ಮಾಡುವ ಪರಿಪಾಠ ಮಾಡುವ ಕೆಲಸವನ್ನು ಮಾಡುತ್ತೇವೆ ಎಂದರು.
ಕಾಂಗ್ರೆಸ್‌ನಲ್ಲಿ ಬಹುಸಂಖ್ಯೆಯ ಮುಖಂಡರು ಅನಿವಾರ್ಯ ಕಾರಣಕ್ಕಾಗಿ ಇದ್ದಾರೆ. ಸರ್ಕಾರ ಮತ್ತೊಂದು ಕಾರಣ ಬಿಟ್ಟರೆ ನಮ್ಮ ವ್ಯಕ್ತಿತ್ವಕ್ಕೆ ಮತ್ತು ಮಾನಸಿಕವಾಗಿ ನಮ್ಮ ಜೊತೆಗೆ ಇದ್ದಾರೆ ಎಂದು ಹೇಳಿದರು.
ಪಕ್ಷದ ಎಲ್ಲ ನಾಯಕರನ್ನು ಕೂರಿಸಿ ಮಾತನಾಡಿದ್ದೇವೆ. ಬೇರೆ ಪಕ್ಷದ ಮುಖಂಡರ ಸಿಕ್ಕಾಗ ಸಾಮಾನ್ಯವಾಗಿ ಮಾತುಕತೆ ನಡೆಸುವುದು ಬೇರೆ. ರಾಜಕೀಯ ಸಖ್ಯವೇ ಬೇರೆ. ದಿನ ನಿತ್ಯ ಬೇರೆ ಪಕ್ಷದ ಮುಖಂಡರ ಜೊತೆ ಇದ್ದು ರಾಜಕೀಯ ಮಾಡುತ್ತೇವೆ ಎಂದರೆ ನೀವು ಆ ಪಕ್ಷಕ್ಕೆ ಹೋಗಿ. ಇಲ್ಲ ನಿಮ್ಮ ಸಂಪರ್ಕದಲ್ಲಿ ಇರುವ ಆ ಪಕ್ಷದ ಮುಖಂಡರನ್ನೇ ನಮ್ಮ ಪಕ್ಷಕ್ಕೆ ಕರೆ ತನ್ನಿ ಎಂದಿದ್ದೇನೆ ಎಂದು ಡಾ.ಕೆ.ಸುಧಾಕರ್ ತಿಳಿಸಿದರು. ಎದುರಾಳಿ ಪಕ್ಷದ ಮುಖಂಡರು ನಿಮ್ಮ ಜೊತೆ ಅಷ್ಟು ಒಡಂಬಡಿಕೆಯಿಂದ ಇದ್ದರೆ ಅವರನ್ನು ನಮ್ಮ ಪಕ್ಷಕ್ಕೆ ಕರೆ ತನ್ನಿ ಎಂದು ಮುಖಂಡರಿಗೆ ಕಿವಿಮಾತು ಹೇಳಿದರು. ಮುಖಂಡರ ನಡೆಗಳು ಭಿನ್ನಾಭಿಪ್ರಾಯ ಮತ್ತು ಅನುಮಾನಕ್ಕೆ ಎಡ ಮಾಡಬಾರದು. ಪರಸ್ಪರ ವಿಶ್ವಾಸ ಮತ್ತು ನಂಬಿಕೆ ಮುಖ್ಯ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.