
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್
ಸಂಗ್ರಹ ಚಿತ್ರ
ಚಿಕ್ಕಬಳ್ಳಾಪುರ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರವು ಜಾರಿಗೊಳಿಸಿದ್ದ ಯೋಜನೆಗಳ ಹೆಸರು ಬದಲಿಸುತ್ತಿದೆ. ಇದರ ಮುಂದುವರಿದ ಭಾಗವೇ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ’ (ನರೇಗಾ) ಹೆಸರನ್ನು ವಿಬಿ–ಜಿ ರಾಮ್ ಜಿ ಎಂದು ಬದಲಿಸಿರುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ವಾಗ್ದಾಳಿ ನಡೆಸಿದರು.
ನಗರದಲ್ಲಿ ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಬಡವರ ಬದುಕಿನಲ್ಲಿ ಬದಲಾವಣೆ ತರಬೇಕು ಎಂದು ಉದ್ಯೋಗ ಖಾತ್ರಿ ಯೋಜನೆಯನ್ನು ದೇಶದಾದ್ಯಂತ ಜಾರಿಗೊಳಿಸಿದರು ಎಂದರು.
2014ರಿಂದ ಬಿಜೆಪಿ ಸರ್ಕಾರವು ಯೋಜನೆಗಳ ಹೆಸರು ಬದಲಿಸುತ್ತಿದೆ. ಸ್ವಚ್ಛತಾ ಆಂದೋಲವನ್ನು ಸ್ವಚ್ಛ ಭಾರತ್ ಎಂದು ಬದಲಿಸಿದರು. ಹೀಗೆ ಎಲ್ಲದಕ್ಕೂ ಹಿಂದಿ ಪದಗಳನ್ನು ಬಳಸುತ್ತಿದ್ದಾರೆ ಎಂದರು.
ನರೇಗಾ ಯೋಜನೆಯ ಹೆಸರು ಬದಲಿಸಿ ರಾಮ್ ಎಂದು ಹೆಸರು ಇಡಲಾಗಿದೆ. ರಾಮನ ಹೆಸರಿಗೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದೆ ಎಂದು ಜನರಲ್ಲಿ ತಪ್ಪು ಭಾವನೆ ಹರಡುತ್ತಿದ್ದಾರೆ ಎಂದರು.
ಈ ಹಿಂದೆ ಕೇಂದ್ರದ ಪಾಲು ಶೇ 90 ಮತ್ತು ರಾಜ್ಯದ ಪಾಲು ಶೇ 10 ಇತ್ತು. ಆದರೆ ಈಗ ಯೋಜನೆಯ ಸ್ವರೂಪ ಬದಲಿಸಿ ಕೇಂದ್ರದ್ದು ಶೇ 60 ಮತ್ತು ರಾಜ್ಯದ ಪಾಲು ಶೇ 40 ಎಂದಿದ್ದಾರೆ. ಈ ಹಿಂದೆ ಅಂಗನವಾಡಿ ಕಟ್ಟಡಗಳು, ಕೊಟ್ಟಿಗೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನರೇಗಾದಡಿ ಅನುಷ್ಠಾನಗೊಳಿಸಬಹುದಿತ್ತು. ಆದರೆ ಈಗ ಕೆಲವು ಕಾರ್ಯಕ್ರಮಗಳನ್ನು ಮಾತ್ರ ಜಾರಿಗೊಳಿಸಬಹುದು ಎಂದರು.
ಗ್ರಾಮಗಳು ಅಭಿವೃದ್ಧಿ ಆಗಬೇಕು ಎನ್ನುವುದು ಗಾಂಧೀಜಿ ಅವರ ಪರಿಕಲ್ಪನೆ. ಆ ಕಾರಣದಿಂದಲೇ ನರೇಗಾ ಯೋಜನೆ ರೂಪಿಸಲಾಗಿತ್ತು. ಆದರೆ ಇದಕ್ಕೆ ವಿರುದ್ಧವಾಗಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ. ಜಿಎಸ್‌ಟಿ ಸೇರಿದಂತೆ ಬೇರೆ ಬೇರೆ ತೆರಿಗೆಗಳನ್ನು ರಾಜ್ಯವು ಕೇಂದ್ರಕ್ಕೆ ನೀಡುತ್ತದೆ. ಆದರೆ ನಮಗೆ ನಮ್ಮ ರಾಜ್ಯದ ಪಾಲನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ
ಎಂದರು.
ಕಾಂಗ್ರೆಸ್ ಜಾತಿ ಧರ್ಮದ ಆಧಾರದಲ್ಲಿ ರಾಜಕೀಯ ಮಾಡುವುದಿಲ್ಲ. ಸ್ವಾತಂತ್ರ್ಯ ಹೋರಾಟದಲ್ಲಿ ಪಾತ್ರವೇ ಇಲ್ಲದವರು ಜಾತಿ, ಧರ್ಮದ ಹೆಸರಿನಲ್ಲಿ ದೇಶ ವಿಭಜಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಐಸಿಸಿ ಕಾರ್ಯದರ್ಶಿ ಅಭಿಷೇಕ್ ದತ್ತ ಮಾತನಾಡಿ, ಯಾವುದೇ ರೀತಿ ಸಾರ್ವಜನಿಕ ಚರ್ಚೆ ನಡೆಸದೆ ಹೆಸರುಗಳನ್ನು ಕೇಂದ್ರ ಸರ್ಕಾರ ಬದಲಿಸುತ್ತಿದೆ. ಗೋಡ್ಸೆ, ಮಹಾತ್ಮ ಗಾಂಧಿ ಅವರನ್ನು ಹತ್ಯೆ ಮಾಡಿದ. ಈಗ ಬಿಜೆಪಿ ಗಾಂಧಿ ಚಿಂತನೆಗಳನ್ನು ಹತ್ಯೆ ಮಾಡುತ್ತಿದೆ ಎಂದರು.
ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ, ರಾಮನ ಆಶೀರ್ವಾದ ಬಿಜೆಪಿಗೆ ಇದ್ದಿದ್ದರೆ ಅಯೋಧ್ಯೆಯಲ್ಲಿ ಗೆಲ್ಲಬೇಕಿತ್ತು. ಆದರೆ ಅಲ್ಲಿಯೇ ಗೆಲ್ಲಲು ಆಗಲಿಲ್ಲ. ಬಿಜೆಪಿಯ ಹೆಸರು ಬದಲಾವಣೆ ಮತ್ತು ಅದರ ಪರಿಣಾಮಗಳನ್ನು ಜನರು ಅರಿತುಕೊಳ್ಳಬೇಕು
ಎಂದರು.
ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ಮಾತನಾಡಿ, ನರೇಗಾ ಗ್ರಾಮಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿತ್ತು. ಈ ಯೋಜನೆಯ ರೂಪುರೇಷೆಗಳನ್ನು ಬದಲಿಸುವ ಮೂಲಕ ಬಿಜೆಪಿ ಗ್ರಾಮೀಣಾಭಿವೃದ್ಧಿಗೆ ಅಡ್ಡಿ ಆಗಿದೆ ಎಂದು ದೂರಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಎಚ್.ಎನ್.ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ, ಬೀಜ ನಿಗಮದ ಅಧ್ಯಕ್ಷ ಆಂಜನಪ್ಪ, ಉಗ್ರಾಣ ನಿಗಮದ ಅಧ್ಯಕ್ಷ ಸಂಪಂಗಿ, ಮಾವು ಅಭಿವೃದ್ಧಿ ಮತ್ತು ಮಾರಾಟ ನಿಗಮದ ಡಾ.ಬಿ.ಸಿ ಮುದ್ದು ಗಂಗಾಧರ್, ಮಾಜಿ ಶಾಸಕರಾದ ಕೆ.ಪಿ ಬಚ್ಚೇಗೌಡ, ಅನಸೂಯಮ್ಮ, ಶಿವಾನಂದ್, ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಶಶಿ ಹುಲಿಕುಂಟೆಮಠ ಮತ್ತಿತರರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.
‘ತೀರ್ಮಾನಗಳ ಹಿಂದೆ ಆರ್‌ಎಸ್‌ಎಸ್ ಪಾತ್ರ’
ಎನ್‌ಡಿಎ ಸರ್ಕಾರದ ತೀರ್ಮಾನಗಳ ಹಿಂದೆ ಆರ್‌ಎಸ್‌ಎಸ್ ಪಾತ್ರವಿದೆ. ರಾಹುಲ್ ಗಾಂಧಿ ಅವರು ಹೇಳಿದರು ಎನ್ನುವ ಕಾರಣಕ್ಕೆ ಜಾತಿ ಜನಗಣತಿಯನ್ನು ಬಿಜೆಪಿ ವಿರೋಧಿಸಿತು. ಆದರೆ ಆರ್‌ಎಸ್‌ಎಸ್ ಹೇಳಿದ ಮೇಲೆ ಜಾತಿ ಸಮೀಕ್ಷೆ ಮಾಡುತ್ತೇವೆ ಎಂದರು. ಆರ್‌ಎಸ್‌ಎಸ್ ಅಣತಿಯಂತೆ ಕಾರ್ಯಕ್ರಮಗಳು ಜಾರಿ ಆಗುತ್ತಿವೆ ಎಂದು ಡಾ.ಎಂ.ಸಿ.ಸುಧಾಕರ್ ಆರೋಪಿಸಿದರು. ದೇಶದ ಜಾತ್ಯತೀತ ನೆಲೆಗಟ್ಟನ್ನು ಅವರ ಸಿದ್ಧಾಂತಕ್ಕೆ ತರಬೇಕು ಎಂದು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ. ಸಮಾಜವನ್ನು ಧರ್ಮದ ಹೆಸರಲ್ಲಿ ವಿಭಜಿಸುವುದೇ ದುರುದ್ದೇಶ ಇದೆ. ಸ್ವಾತಂತ್ರ್ಯ ಹೋರಾಟದಲ್ಲಿ ಆರ್‌ಎಸ್‌ಎಸ್ ಪಾತ್ರ ಏನಿತ್ತು? ಅವರು ಸ್ವಾತಂತ್ರ್ಯಕ್ಕಾಗಿ ಹೋರಾಟ ನಡೆಸಲಿಲ್ಲ ಎಂದರು.
ಗ್ರಾಮ ಮಟ್ಟದಿಂದ ಹೋರಾಟ ನರೇಗಾ ಯೋಜನೆ ಹೆಸರು ಬದಲಿಸಿರುವ ಬಗ್ಗೆ ಗ್ರಾಮ ತಾಲ್ಲೂಕು ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ಹೋರಾಟಗಳನ್ನು ರೂಪಿಸುತ್ತೇವೆ. ಹಂತ ಹಂತವಾಗಿ ಹೋರಾಟಗಳು ನಡೆಯುತ್ತವೆ ಎಂದು ಸಚಿವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.