ADVERTISEMENT

ಅಭ್ಯಾಸ ತೊಡಗಿಕೊಳ್ಳುವಂತೆ ಪ್ರೇರೇಪಿಸಲು ಆನ್‌ಲೈನ್ ತರಗತಿಗಳು

ಅಗಸ್ತ್ಯ ವಿಜ್ಞಾನ ಕೇಂದ್ರದಿಂದ 6 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಉಚಿತವಾಗಿ ವಿಜ್ಞಾನ, ಗಣಿತ ಪಠ್ಯಗಳ ಬೋಧನೆ

ಈರಪ್ಪ ಹಳಕಟ್ಟಿ
Published 9 ಆಗಸ್ಟ್ 2020, 2:23 IST
Last Updated 9 ಆಗಸ್ಟ್ 2020, 2:23 IST
-ಸಾಂದರ್ಭಿಕ ಚಿತ್ರ
-ಸಾಂದರ್ಭಿಕ ಚಿತ್ರ   

ಚಿಕ್ಕಬಳ್ಳಾಪುರ: ಲಾಕ್‌ಡೌನ್‌ ಬಳಿಕ ಕೋವಿಡ್‌ 19 ಉಲ್ಭಣ ಕಾರಣಕ್ಕೆ ಶಾಲೆಗಳು ಪ್ರಾರಂಭವಾಗಿಲ್ಲ. ಮನೆಯಲ್ಲಿಯೇ ಉಳಿದಿರುವ ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ತೊಡಗಲು ಪ್ರೇರೇಪಿಸುವ ಸಲುವಾಗಿ ಅಗಸ್ತ್ಯ ಅಂತರರಾಷ್ಟ್ರೀಯ ಪ್ರತಿಷ್ಠಾನವು ವಿದ್ಯಾರ್ಥಿಗಳಿಗೆ ಉಚಿತವಾಗಿ ಆನ್‌ಲೈನ್‌ ತರಗತಿ ಆರಂಭಿಸಿದೆ.

ಬಿಡುವಿನ ಈ ಸಮಯವನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಸದುಪಯೋಗಪಡಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಷ್ಠಾನವು ಸರ್ವ ಶಿಕ್ಷಣ ಅಭಿಯಾನ ಸಹಕಾರದೊಂದಿಗೆ ಆನ್‌ಲೈನ್‌ ತರಗತಿಗಳನ್ನು ಹಮ್ಮಿಕೊಂಡಿದೆ.

ಜಿಲ್ಲೆಯಲ್ಲಿ ಅಗಸ್ತ್ಯ ವಿಜ್ಞಾನ ಕೇಂದ್ರವು ಇ.ಪಿ.ಎಲ್ (ಎಕ್ಸ್‌ಪ್ಲೋರ್‌– ಪ್ಲೇ–ಲರ್ನಿಂಗ್) ಕಾರ್ಯ ನಿಯೋಜನೆ ಅಡಿಯಲ್ಲಿ ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲೆಯ 6 ರಿಂದ 10ನೇ ತರಗತಿ ವರೆಗಿನ ಮಕ್ಕಳು ಮತ್ತು ಶಿಕ್ಷಕರಿಗೆ ವಿಜ್ಞಾನ ಹಾಗೂ ಗಣಿತ ವಿಷಯಕ್ಕೆ ಸಂಬಂಧಿಸಿದಂತೆ ಗೂಗಲ್‌ ಮಿಟ್‌ ತಂತ್ರಾಂಶದ ಮೂಲಕ ಆನ್‌ಲೈನ್‌ ತರಗತಿಗಳನ್ನು ನಡೆಸುತ್ತಿದೆ.

ADVERTISEMENT

ಗ್ರಾಮೀಣ ಹಾಗೂ ನಗರ ಭಾಗದ ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ಕ್ರಿಯಾಶೀಲತೆ, ವೈಚಾರಿಕತೆ, ಹಾಗೂ ವೈಜ್ಞಾನಿಕ ಮನೋಭಾವನೆ ಬೆಳೆಸಲು ಜಿಲ್ಲೆಯ ಪ್ರತಿ ತಾಲ್ಲೂಕುಗಳ ಅಗಸ್ತ್ಯ ವಿಜ್ಞಾನ ಕೇಂದ್ರಗಳ ಮೂಲಕ ಈ ಶಿಬಿರ ರೂಪಿಸಲಾಗಿದೆ.

‘ಆನ್‌ಲೈನ್ ತರಗತಿಗಳ ಕಾರಣಕ್ಕಾಗಿ ಪ್ರತಿ ಶಾಲೆಯಲ್ಲಿ ಶಿಕ್ಷಕರು ವ್ಯಾಟ್ಸ್‌ ಆ್ಯಪ್‌ ಗ್ರೂಪ್ ರಚನೆ ಮಾಡಿದ್ದು. ಆಸಕ್ತ ವಿದ್ಯಾರ್ಥಿಗಳಿಗೆ ಅವುಗಳ ಮೂಲಕ ಆನ್‌ಲೈನ್‌ ತರಗತಿಗಳ ಲಿಂಕ್‌ ಹಂಚಿಕೊಳ್ಳಲಾಗುತ್ತದೆ. ಬೆಳಿಗ್ಗೆ 10 ರಿಂದ ಸಂಜೆ 6ರ ವರೆಗೆ ತರಗತಿಗಳು ನಡೆಯುತ್ತಿರುವೆ. ವಿದ್ಯಾರ್ಥಿಗಳು ಆಸಕ್ತ ತರಗತಿಗೆ ಸೇರ್ಪಡೆಗೊಳ್ಳುತ್ತಾರೆ’ ಎನ್ನುತ್ತಾರೆ ಅಗಸ್ತ್ಯ ವಿಜ್ಞಾನ ಕೇಂದ್ರದ ಮುಖ್ಯಸ್ಥ ಸಿ.ವಸಂತ್ ಕುಮಾರ್.

‘ಆನ್‌ಲೈನ್‌ ತರಗತಿಗಳಲ್ಲಿ ಪಠ್ಯ ಚಟುವಟಿಕೆ ಮಾತ್ರವಲ್ಲದೇ ಪಠ್ಯೇತರ ಚಟುವಟಿಕೆಗಳ ಕಲಿಕೆಗೂ ಅವಕಾಶವಿದೆ. ಮನೆಯಲ್ಲಿಯೇ ಸಿಗುವ ವಸ್ತುಗಳಿಂದ ವಿಜ್ಞಾನ ಮಾದರಿ ತಯಾರಿಸುವುದು, ಚಿತ್ರಕಲೆ, ಮೋಜಿನ ಗಣಿತ, ಆಹಾರ ಸುರಕ್ಷತೆ, ಸೋಂಕು ತಡೆಗಟ್ಟಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಸೇರಿದಂತೆ ಉಪಯುಕ್ತ ಮಾಹಿತಿಗಳನ್ನು ತಿಳಿಸಲಾಗುತ್ತದೆ’ ಎಂದು ಹೇಳಿದರು.

‘ಈ ಆನ್‌ಲೈನ್‌ ತರಗತಿಗಳು ಮಾಡಿ ಕಲಿ ಪ್ರಾಯೋಗಿಕ ಶಿಕ್ಷಣದ ಮಾದರಿಯಲ್ಲಿದ್ದು, ಮಕ್ಕಳಲ್ಲಿ ಕುತೂಹಲ, ಸೃಜನಶೀಲತೆ ಮತ್ತು ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸುತ್ತವೆ. ಜೂನ್‌ನಿಂದ ವಿದ್ಯಾರ್ಥಿಗಳು ಓದಬೇಕಿದ್ದ ಪಠ್ಯವನ್ನು ಆನ್‌ಲೈನ್‌ ತರಗತಿಗಳಲ್ಲಿ ಬೋಧಿಸುವುದರಿಂದ ಮುಂದಿನ ಶೈಕ್ಷಣಿಕ ದಿನಗಳಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ಇದು ನೆರವಾಗಲಿದೆ’ ಎಂದು ತಿಳಿಸಿದರು.

ಉಚಿತ ಆನ್‌ಲೈನ್ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಭಾಗವಹಿಸುವ ಶಿಕ್ಷಕರು, ವಿದ್ಯಾರ್ಥಿಗಳು 88843 85980 ಈ ಸಂಖ್ಯೆಗೆ ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.