ಚಿಕ್ಕಬಳ್ಳಾಪುರ: ಇತ್ತೀಚಿಗೆ ಪೆಹಲ್ಗಾಮ್‌ನಲ್ಲಿ ಉಗ್ರಗಾಮಿಗಳು ಅಮಾಯಕ ಜನರನ್ನು ಬಲಿ ಪಡೆದಿದ್ದರು. ಅದರಲ್ಲೂ ಮಹಿಳೆಯರ ಕಣ್ಮುಂದೆಯೇ ಅವರವರ ಗಂಡನನ್ನು ಅಮಾನುಷವಾಗಿ ಹಾಗೂ ಯಾವ ಭಾರತೀಯ ಮಹಿಳೆಯೂ ನಿರೀಕ್ಷೆ ಮಾಡದ ರೀತಿಯಲ್ಲಿ ಕ್ರೂರವಾಗಿ ಕೊಂದರು.
ಅದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೈನಿಕರು ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನದ ಉಗ್ರಗಾಮಿಗಳಿಗೆ ತಕ್ಕ ಪಾಠ ಕಲಿಸಿತು. ಭಾರತೀಯ ಸೈನಿಕರು ನಮ್ಮೆಲ್ಲರ ಹೆಮ್ಮೆ ಎಂದು ಉನ್ನತ ಶಿಕ್ಷಣ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದರು.
ಜಿಲ್ಲಾ ಸರ್ ಎಂವಿ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ದೇಶದ ಗೌರವ ಮತ್ತು ರಕ್ಷಣೆಗಾಗಿ ಪ್ರಾಣ ನೀಡಿರುವ ಸೈನಿಕರಿಗೆ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಎಲ್ಲರೂ ಗೌರವಪೂರ್ಣ ನಮನ ಸಲ್ಲಿಸಬೇಕಿದೆ. ಅದು ನಮ್ಮೆಲ್ಲರ ಕರ್ತವ್ಯ. ಕೇಂದ್ರ ಸರ್ಕಾರ ಮತ್ತು ವಿರೋಧ ಪಕ್ಷಗಳು ಒಗ್ಗಟ್ಟಾಗಿ ದಿಟ್ಟತನದಿಂದ ಉಗ್ರರ ವಿರುದ್ಧ ಸಮರ ಸಾರಿರುವುದು ಭಾರತದ ಐಕ್ಯತೆಯ ಸಂಕೇತವಾಗಿದೆ ಎಂದರು.
ದೇಶದ ಜನರು ನೆಮ್ಮದಿಯಿಂದ ಜೀವನ ನಡೆಸಬೇಕಾದರೆ ಸೈನಿಕರು ಪ್ರಾಣಒತ್ತೆಯಿಟ್ಟು ದೇಶ ಕಾಯುತ್ತಿದ್ದಾರೆ. ಆ ವೀರಯೋಧರ ತ್ಯಾಗವನ್ನು ಯಾರೊಬ್ಬರೂ ಮರೆಯಲು ಸಾಧ್ಯವಿಲ್ಲ. ಬ್ರಿಟಿಷರ ದಾಸ್ಯದಿಂದ ದೇಶವನ್ನು ಮುಕ್ತಗೊಳಿಸುವ ಜೊತೆಗೆ ಸ್ವತಂತ್ರಗೊಳಿಸಲು ಮಹಾತ್ಮಾ ಗಾಂಧೀಜಿ ಸೇರಿದಂತೆ ಅನೇಕರು ಹೋರಾಟ, ತ್ಯಾಗ ಬಲಿದಾನ ಮಾಡಿದ್ದಾರೆ. ಇವೆಲ್ಲವನ್ನೂ ಸ್ಮರಿಸಬೇಕು ಎಂದರು.
ಗಾಂಧೀಜಿಯವರ ಅಹಿಂಸಾ ಮಾರ್ಗದ ಕ್ರಾಂತಿಯ ಮೂಲಕ ದೇಶ ಸ್ವತಂತ್ರವಾಗಿ 79 ವರ್ಷಗಳ ಸ್ವಾತಂತ್ರ್ಯದ ಸುದೀರ್ಘ ಪಯಣ ಮಾಡಿದೆ. ದೇಶ ಇಂದು ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಜಗತ್ತಿನಲ್ಲಿ ವೇಗವಾಗಿ ಮುಂದುವರೆಯುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವಿದ್ದು ಸಮರ್ಥವಾಗಿ ಮುನ್ನಡೆಯುತ್ತಿದೆ ಎಂದರು.
ಜಿಲ್ಲೆಯ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಯಲುವಳ್ಳಿ ಎನ್.ರಮೇಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಎನ್.ಕೇಶವರೆಡ್ಡಿ, ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಶಲ್ ಚೌಕ್ಸೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.