ADVERTISEMENT

ಶಿಡ್ಲಘಟ್ಟ | ಬಯಲುಸೀಮೆಗೆ ಬಂದ ಕಿತ್ತಳೆ ಬಣ್ಣದ ಅಣಬೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2025, 3:08 IST
Last Updated 25 ಆಗಸ್ಟ್ 2025, 3:08 IST
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಕಂಡು ಬಂದ ಕಿತ್ತಳೆ ಬಣ್ಣದ ಅಣಬೆ
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಕಂಡು ಬಂದ ಕಿತ್ತಳೆ ಬಣ್ಣದ ಅಣಬೆ   

ಶಿಡ್ಲಘಟ್ಟ: ಪಶ್ಚಿಮ ಘಟ್ಟ ಮತ್ತು ಉಷ್ಣವಲಯದ ದೇಶಗಳಲ್ಲಿ ಕಂಡುಬರುವ ಅಪರೂಪದ ಕಿತ್ತಳೆ ಬಣ್ಣದ ಅಣಬೆ ಬಯಲುಸೀಮೆಯ ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಕಂಡುಬಂದಿದೆ. 

ಅಪ್ಪೇಗೌಡನಹಳ್ಳಿಯ ರೈತ ಎ.ಎಂ.ತ್ಯಾಗರಾಜ್ ಅವರ ತೋಟದಲ್ಲಿ ಈ ಪುಟ್ಟ ಗಾತ್ರದ ಕಿತ್ತಳೆ ಬಣ್ಣದ ಅಣಬೆ ನೆಲದಿಂದ ಮೇಲೆದ್ದಿರುವುದು ಅಚ್ಚರಿ ತಂದಿದೆ.

ಅಗಾರಿಕಸ್ ಟ್ರೈಸಲ್ಫುರಾಟಸ್ ಎಂಬ ವೈಜ್ಞಾನಿಕ ಹೆಸರಿನ ಈ ಅಣಬೆಯನ್ನು ಆಂಗ್ಲ ಭಾಷೆಯಲ್ಲಿ ಸ್ಕೇಲಿ ಟ್ಯಾಂಗರಿನ್ ಮಶ್ರೂಮ್ ಎಂದು ಕರೆಯಲಾಗುತ್ತದೆ. ಕಿತ್ತಳೆ ಬಣ್ಣದ ಅಣಬೆಯ ಮೇಲೆ ತ್ರಿಕೋನ ಆಕಾರದ ಪುಟ್ಟಪುಟ್ಟ ಹುರುಪೆ ರೀತಿಯ ಮಡತೆಗಳು ಮೂಡಿರುತ್ತವೆ.

ADVERTISEMENT

ಈ ಅಣಬೆಯು ಸಾವಯವವಾಗಿ ಸಮೃದ್ಧವಾಗಿರುವ ಮಣ್ಣಿನಲ್ಲಿ ಅಥವಾ ಚೆನ್ನಾಗಿ ಕೊಳೆತ ಮರದ ಬುಡಗಳಲ್ಲಿ ಬೆಳೆಯುತ್ತದೆ. ಇದು ಸಾಮಾನ್ಯವಾಗಿ ಹುಲ್ಲಿನಿಂದ ಆವೃತವಾದ ಅರಣ್ಯ ಪ್ರದೇಶಗಳಲ್ಲಿ ಕಂಡುಬರುತ್ತದೆ. ಕೆನ್ಯಾ, ಥಾಯ್ಲೆಂಡ್, ಮಲೇಷ್ಯಾ, ಆಸ್ಟ್ರೇಲಿಯಾ ಮತ್ತು ಆಫ್ರಿಕಾದ ಕೆಲವು ಭಾಗಗಳಲ್ಲಿನ ಉಷ್ಣವಲಯ ಮತ್ತು ಉಪ ಉಷ್ಣವಲಯದ ಪ್ರದೇಶಗಳಲ್ಲಿ ಈ ಅಣಬೆ ಪ್ರಭೇದಗಳು ಕಾಣಸಿಗುತ್ತವೆ. ಪಶ್ಚಿಮ ಘಟ್ಟಗಳಲ್ಲಿಯೂ ಇವು ಕಂಡುಬರುತ್ತವೆ ಎಂದು ಪರಿಸರ ತಜ್ಞರು ಅಭಿಪ್ರಾಯಪಡುತ್ತಾರೆ.

‘ಬಿಳಿ ಬಣ್ಣದ ಅಣಬೆ ನಮಗೆ ಪರಿಚಿತ. ಆದರೆ, ಕೇಸರಿ ಬಣ್ಣದ ಈ ರೀತಿಯ ಅಣಬೆಯನ್ನು ನಮ್ಮ ತೋಟದಲ್ಲಿ ನೋಡಿದ್ದು ಇದೇ ಮೊದಲು. ಸೋಜಿಗವೆನಿಸಿದೆ’ ಎನ್ನುತ್ತಾರೆ ರೈತ ತ್ಯಾಗರಾಜ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.