ADVERTISEMENT

ಸಾವಯವ ಕೃಷಿ ಪದ್ಧತಿ ಪ್ರಯೋಗಶಾಲೆ

ರಾಜ್ಯದ ವಿವಿಧ ಜಿಲ್ಲೆಯ ರೈತರ ತಂಡ ಭೇಟಿ, ವೀಕ್ಷಣೆ

ಎಂ.ರಾಮಕೃಷ್ಣಪ್ಪ
Published 29 ಡಿಸೆಂಬರ್ 2022, 5:00 IST
Last Updated 29 ಡಿಸೆಂಬರ್ 2022, 5:00 IST
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನಿಂದ ಆಗಮಿಸಿರುವ ಪ್ರಗತಿ ರೈತರಿಗೆ ರಾಧಾಕೃಷ್ಣ ಸಾವಯವ ಕೃಷಿ ಕುರಿತು ವಿವರಣೆ ನೀಡಿದರು
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನಿಂದ ಆಗಮಿಸಿರುವ ಪ್ರಗತಿ ರೈತರಿಗೆ ರಾಧಾಕೃಷ್ಣ ಸಾವಯವ ಕೃಷಿ ಕುರಿತು ವಿವರಣೆ ನೀಡಿದರು   

ಚಿಂತಾಮಣಿ: ಸಾವಯವ ಮತ್ತು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡಿರುವ ತಾಲ್ಲೂಕಿನ ಕುರುಟಹಳ್ಳಿಯ ಪ್ರಗತಿಪರ ರೈತ ರಾಧಾಕೃಷ್ಣ ಅವರ ತೋಟ, ಹೈನುಗಾರಿಕೆ, ಜೇನುಕೃಷಿ, ಕೋಳಿಫಾರಂ, ಹುಣಸೆ, ಜಂಬು ನೇರಳೆ, ಬೇವು ಮತ್ತಿತರ ಮರಗಳು ಕೃಷಿಕರಿಗೆ ಒಂದು ಪ್ರಯೋಗ ಶಾಲೆಯಂತಾಗಿದೆ.

ಮೈಸೂರು, ತುಮಕೂರು, ಗದಗ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಬೆಳಗಾವಿ ಸೇರಿದಂತೆ ಇನ್ನಿತರ ಜಿಲ್ಲೆಗಳ ರೈತ ತಂಡಗಳು ರಾಧಾಕೃಷ್ಣ ಅವರ ತೋಟಕ್ಕೆ ಕೃಷಿ ಅಧ್ಯಯನ ಪ್ರವಾಸ ಕೈಗೊಳ್ಳುತ್ತಾರೆ. ಅವರ ಸಮಗ್ರ ಕೃಷಿ ವಿಧಾನ ಮತ್ತುಅನುಭ ಹಂಚಿಕೊಳ್ಳುತ್ತಾರೆ.

ಸಾವಯವ ಪದ್ಧತಿ, ಸಮಗ್ರ ಕೃಷಿ ಪದ್ಧತಿ, ಕೃಷಿಯ ಉಪಕಸುಬುಗಳ ಅಳವಡಿಕೆ ವಿಧಾನ, ಆದಾಯ, ಖರ್ಚು, ವ್ಯವಸ್ಥಿತ ಕೃಷಿಯ ಸೊಬಗನ್ನು ಕಂಡು, ತಮಗೆ ಇಷ್ಟವಾದ ಆಯೆಗಳ ಟಿಪ್ಪಣಿ ಮಾಡಿಕೊಳ್ಳುವ ಯುವ ರೈತರು ಅಧ್ಯಯನದ ಸಂಶೋಧನೆಯಲ್ಲಿ ತೊಡಗಿಕೊಂಡವರಂತೆ ಕಾಣುತ್ತಾರೆ.

ADVERTISEMENT

35 ಎಕರೆ ತೋಟವನ್ನು ಸುತ್ತು ಹಾಕಿ ಬರುವ ರೈತರ ಮೊಗದಲ್ಲಿ ಆತ್ಮವಿಶ್ವಾಸ, ಆಸಕ್ತಿ ಮತ್ತು ಅಚ್ಚರಿ ಮೇಳೈಸುತ್ತದೆ. ಸಮಗ್ರ ಕೃಷಿ, ಸಾವಯವ ಕೃಷಿ, ಶೂನ್ಯ ಬಂಡವಾಳದ ಕೃಷಿ, ಪ್ರಕೃತಿಯ ಜತೆ ಹೊಂದಾಣಿಕೆ ಮಾಡಿಕೊಂಡು ಹೇಗೆ ಕೃಷಿಯಿಂದ ಲಾಭ ಪಡೆಯಬಹುದು. ಉಪ ಕಸುಬುಗಳನ್ನು ಯಾವ ರೀತಿ ಕೈಗೊಂಡು, ರೈತ ನೆಮ್ಮದಿಯ ಜೀವನ ಸಾಗಿಸಬಹುದು ಎಂಬುದರ ಕುರಿತು ರಾಧಾಕೃಷ್ಣ ಅವರು ತಾಳ್ಮೆಯಿಂದ ಹೇಳಿಕೊಡುತ್ತಾರೆ.

ಪದವೀಧರರಾದ ರಾಧಾಕೃಷ್ಣ ಅವರ ಬದುಕೇ ಒಂದು ಕೃಷಿ ವಿಶ್ವವಿದ್ಯಾಲಯ. ಅವರ ಜಮೀನು ಹೂ, ಹಣ್ಣು, ತರಕಾರಿ, ಹಸು, ನಾಯಿ,
ಕುರಿ, ಮೇಕೆ, ಕೋಳಿ, ಮೀನು, ಜೇನಿನ ವಾಸಸ್ಥಾನವಾಗಿದೆ. ಹುಣಸೆ,
ಜಂಬುನೇರಳೆ, ಹಲಸು, ಮಾವು, ಹೆಬ್ಬೇವು ಮತ್ತಿತರ ಮರಗಳ ಮೂಲಕ ಅರಣ್ಯವಾಗಿದೆ.

ಕೃಷಿ ವಿಜ್ಞಾನ ಕೇಂದ್ರಗಳು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಳುಹಿಸಿಕೊಡುವ ಪ್ರಗತಿಪರ ರೈತರ ತಂಡಗಳು ಭೇಟಿ ನೀಡಿ, ಇಲ್ಲಿನ ಬೇಸಾಯ ಕ್ರಮಗಳನ್ನು ಕಂಡು ಮಾಹಿತಿ ಪಡೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.