ADVERTISEMENT

‘ಸೌಲಭ್ಯ ಪಡೆಯಲು ಸಂಘಟನೆ ಅಗತ್ಯ’

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2020, 7:33 IST
Last Updated 6 ಡಿಸೆಂಬರ್ 2020, 7:33 IST
ಚಿಂತಾಮಣಿಯಲ್ಲಿ ಶನಿವಾರ ನಡೆದ ಅಂಗವಿಕಲರ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ. ರಾಜೇಂದ್ರಕುಮಾರ್ ಉದ್ಘಾಟಿಸಿದರು
ಚಿಂತಾಮಣಿಯಲ್ಲಿ ಶನಿವಾರ ನಡೆದ ಅಂಗವಿಕಲರ ದಿನಾಚರಣೆಯನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ. ರಾಜೇಂದ್ರಕುಮಾರ್ ಉದ್ಘಾಟಿಸಿದರು   

ಚಿಂತಾಮಣಿ: ‘ಅಂಗವಿಕಲರಿಗೆ ಅನುಕಂಪದ ಅಗತ್ಯಕ್ಕಿಂತ ಅವಕಾಶ ನೀಡುವುದು ಉತ್ತಮ’ ಎಂದು ಜೆ.ಎಂ.ಎಫ್. ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಕೆ.ಎಂ. ರಾಜೇಂದ್ರಕುಮಾರ್ ಅಭಿಪ್ರಾಯಪಟ್ಟರು.

ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ತಾಲ್ಲೂಕು ಪಂಚಾಯಿತಿ, ತಾಲ್ಲೂಕು ಕಚೇರಿ, ನಗರಸಭೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶನಿವಾರ ಅಂಗವಿಕಲರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂಗವಿಕಲರು ಗ್ರಾಮಮಟ್ಟದಿಂದ ತಾಲ್ಲೂಕು, ಜಿಲ್ಲೆ, ರಾಜ್ಯಮಟ್ಟದವರೆಗೂ ಸಂಘಟಿತರಾಗ ಬೇಕು. ಸಂಘಟಿತರಾದರೆ ಹಕ್ಕುಗಳನ್ನು ಪಡೆಯಲು ಸಹಕಾರವಾಗುತ್ತದೆ. ಅಂಗವಿಕಲರ ಪ್ರಮಾಣ ಪತ್ರ ದುರುಪಯೋಗವಾಗುವುದು ತಪ್ಪುತ್ತದೆ ಎಂದು ತಿಳಿಸಿದರು.

ADVERTISEMENT

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಿ.ಆರ್. ಮಂಜುನಾಥ್ ಮಾತನಾಡಿ, ಪ್ರಮಾಣ ಪತ್ರ ಪಡೆಯಲು ಜಿಲ್ಲಾ ಕೇಂದ್ರಕ್ಕೆ ಹೋಗಬೇಕಾಗಿತ್ತು. ನಗರದ ಸರ್ಕಾರಿ ಆಸ್ಪತ್ರೆಗೆ ವೈದ್ಯರ ತಂಡ ಆಗಮಿಸಿ ಇಲ್ಲೇ ಪ್ರಮಾಣ ಪತ್ರ ಕೊಡಿಸುವ ವ್ಯವಸ್ಥೆ ಮಾಡಲಾಗಿದೆ. ಗ್ರಾಮೀಣ ಭಾಗಗಳಲ್ಲಿ ನರೇಗಾ ಯೋಜನೆಯಡಿ ಅಂಗವಿಕಲರಿಗೆ ಅವಕಾಶ ನೀಡಲಾಗಿದೆ ಎಂದರು.

ತಹಶೀಲ್ದಾರ್ ಹನುಮಂತಪ್ಪ ಮಾತನಾಡಿ, ಅಂಗವಿಕಲರಿಗೆ ಸರ್ಕಾರ ದಿಂದ ಸಿಗಬೇಕಾದ ಸೌಲಭ್ಯಗಳಲ್ಲಿ ಏನಾದರೂ ಸಮಸ್ಯೆಗಳಿದ್ದು, ತಾಲ್ಲೂಕು ಕಚೇರಿ ಗಮನಕ್ಕೆ ತಂದರೆ ಅವರ ಮನೆ ಬಾಗಿಲಿಗೆ ಭೇಟಿ ನೀಡಿ ಸೌಲಭ್ಯ ತಲುಪಿಸಲಾಗುವುದು. ಕಚೇರಿಗೆ ಬರುವುದು ಬೇಡ. ದೂರವಾಣಿ ಮೂಲಕ ತಿಳಿಸಿದರೆ ಮನೆಯ ಬಳಿಗೆ ಅಧಿಕಾರಿಗಳನ್ನು ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.

ಅಂಗವಿಕಲರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧಿಕಾರಿ ಮಂಜುನಾಥ್, ವಕೀಲರ ಸಂಘದ ಅಧ್ಯಕ್ಷ ಎಸ್. ರಾಜಾರಾಂ ಮಾತನಾಡಿದರು. ಪ್ರಧಾನ ಸಿವಿಲ್ ನ್ಯಾಯಾಧೀಶ ಜಿ.ಜೆ. ಶಿವಕುಮಾರ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಂದ್ರ, ಪೌರಾಯುಕ್ತ ಉಮಾಶಂಕರ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.