ADVERTISEMENT

ಸೇವಾ ಭದ್ರತೆ ಕಲ್ಪಿಸಲು ಒತ್ತಾಯ

ಜಿಲ್ಲಾಡಳಿತ ಭವನದ ಎದುರು ಸರ್ಕಾರಿ ಹಾಸ್ಟೆಲ್– ವಸತಿ ಶಾಲಾ ಹೊರಗುತ್ತಿಗೆ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2020, 5:40 IST
Last Updated 12 ನವೆಂಬರ್ 2020, 5:40 IST
ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದ ಎದುರು ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು
ಚಿಕ್ಕಬಳ್ಳಾಪುರದ ಜಿಲ್ಲಾಡಳಿತ ಭವನದ ಎದುರು ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರು ಪ್ರತಿಭಟನೆ ನಡೆಸಿದರು   

ಚಿಕ್ಕಬಳ್ಳಾಪುರ: ಸೇವಾ ಭದ್ರತೆ, ಬಾಕಿ ವೇತನ ಬಿಡುಗಡೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರು ಬುಧವಾರ ಸಿಐಟಿಯು ನೇತೃತ್ವದಲ್ಲಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸರ್ಕಾರಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಆಂಜನೇಯರೆಡ್ಡಿ, ‘ಸರ್ಕಾರವು ಎಲ್ಲ ಹೊರಗುತ್ತಿಗೆ ನೌಕರರಿಗೆ ಕೋವಿಡ್ ಲಾಕ್‍ಡೌನ್ ಅವಧಿಯ ವೇತನವನ್ನು ನೀಡಲು ಆದೇಶ ಹೊರಡಿಸಿದ್ದರೂ, ಜಿಲ್ಲೆಯ ಹೊರಗುತ್ತಿಗೆ ನೌಕರರಿಗೆ ಈವರೆಗೆ ವೇತನ ನೀಡದೆ ತಾರತಮ್ಯವನ್ನು ಮಾಡಲಾಗುತ್ತಿದೆ. ಇದರಿಂದ ನೌಕರರು ಜೀವನ ನಡೆಸಲು ಸಾಲ ಮಾಡಿ ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ’ ಎಂದು ಹೇಳಿದರು.

‘ವಿವಿಧ ಕಲ್ಯಾಣ ಇಲಾಖೆಗಳು ಮತ್ತು ವಸತಿ ಶಾಲೆಗಳಲ್ಲಿ ಸುಮಾರು 10–20 ವರ್ಷಗಳಿಂದ ಅಡುಗೆ ನೌಕರರಾಗಿ ಕೆಲಸ ಮಾಡುತ್ತ ಬಂದಿರುವ ಹೊರಗುತ್ತಿಗೆ ನೌಕರರು ಸೇವಾ ಭದ್ರತೆಯಿಂದ ವಂಚಿತರಾಗಿದ್ದಾರೆ. ಆದ್ದರಿಂದ ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಒದಗಿಸಬೇಕು. 10 ವರ್ಷಕ್ಕಿಂತ ಹೆಚ್ಚು ಕಾಲ ಸೇವೆ ಸಲ್ಲಿಸಿದವರನ್ನು ನೇಮಕಾತಿ ಮಾಡಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

ADVERTISEMENT

‘ಬಿಸಿಎಂ ಹಾಸ್ಟೆಲ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಹೊರಗುತ್ತಿಗೆ ನೌಕರರನ್ನು ನೇರ ನೇಮಕಾತಿ ಸಮಯದಲ್ಲಿ ಕೆಲಸದಿಂದ ತೆಗೆದುಹಾಕಲಾಯಿತು. ಆ ಸಂದರ್ಭದಲ್ಲಿ ಹೋರಾಟ ನಡೆಸಿದಾಗ ತೆಗೆದುಹಾಕಿದ ನೌಕರರನ್ನು ಹೆಚ್ಚುವರಿ ನೌಕರರನ್ನಾಗಿ ಪರಿಗಣಿಸಿ ಮುಂದುವರಿಸಲಾಯಿತು. ಆದರೆ ಈವರೆಗೆ ಅವರಿಗೆ ನೀಡಬೇಕಾದ ವೇತನ ಬಾಕಿ ಪಾವತಿ ಮಾಡಿಲ್ಲ’ ಎಂದು ತಿಳಿಸಿದರು.

‘ಆರ್ಥಿಕ ಇಲಾಖೆ ಹೆಚ್ಚುವರಿ ನೌಕರರ ವೇತನ ಬಾಕಿ ಪಾವತಿಗೆ ಸುಮಾರು ₹17 ಕೋಟಿ ಬಿಡುಗಡೆ ಮಾಡಿದೆ. ಆದರೆ ವೇತನ ಪಾವತಿಸಲು ಜಿಲ್ಲಾ ಮಟ್ಟದ ಅಧಿಕಾರಿಗಳು ಆಸಕ್ತಿ ತೋರಿಸುತ್ತಿಲ್ಲ. ಈ ಬಗ್ಗೆ ಇಲಾಖೆ ಆಯುಕ್ತರು, ಜಂಟಿ ನಿರ್ದೇಶಕರ ಬಳಿ ಅನೇಕ ಬಾರಿ ಸಮಸ್ಯೆ ಹೇಳಿಕೊಂಡರೂ ಪ್ರಯೋಜನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಸಂಘದ ರಾಜ್ಯ ಘಟಕದ ಕಾರ್ಯದರ್ಶಿ ಹನುಮೇಗೌಡ ಮಾತನಾಡಿ, ‘ರಜಾ ಸಂದರ್ಭದಲ್ಲಿ ಹೊರಗುತ್ತಿಗೆ ನೌಕರರಿಗೂ ಪೂರ್ಣ ಸಂಬಳ ನೀಡಬೇಕು ಎಂದು ಸರ್ಕಾರದ ಆದೇಶವಿದ್ದರೂ ಸಂಬಂಧಿಸಿದ ಇಲಾಖೆಗಳು ಈವರೆಗೆ ಹೊರಗುತ್ತಿಗೆ ನೌಕರರಿಗೆ ಕೋವಿಡ್‌ ರಜಾ ದಿನಗಳ ವೇತನ ನೀಡಿಲ್ಲ. ಕೂಡಲೇ ಈ ವೇತನ ಬಿಡುಗಡೆಗೊಳಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕಾರ್ಮಿಕ ವಿರೋಧಿ ತಿದ್ದುಪಡಿಗಳನ್ನು ರದ್ದುಗೊಳಿಸಬೇಕು. ಕನಿಷ್ಠ ತಿಂಗಳಿಗೆ ₹25 ಸಾವಿರ ವೇತನ ನಿಗದಿಪಡಿಸಬೇಕು. ಆಹಾರ ಸಾಮಗ್ರಿ ಕಿಟ್ ವಿತರಿಸಬೇಕು. ಹೊರಗುತ್ತಿಗೆ ಸಂಸ್ಥೆಯವರು ನೌಕರರಿಗೆ ಇಪಿಎಫ್‌ ಮತ್ತು ಇಎಸ್‌ಐ ಮೊತ್ತವನ್ನು ಪಾವತಿಸುತ್ತಿಲ್ಲ. ಅದನ್ನು ಗುತ್ತಿಗೆದಾರರಿಂದ ವಸೂಲಿ ಮಾಡಿ ನೌಕರರಿಗೆ ಕೊಡಿಸಬೇಕು’ ಎಂದು ಹೇಳಿದರು.

‘ಇನ್ನಾದರೂ ಸರ್ಕಾರ ಹೊರಗುತ್ತಿಗೆ ನೌಕರರ ಹಿತ ಕಾಯುವ ಕೆಲಸ ಮಾಡಬೇಕು. ಕಾಯಂ ನೌಕರರು ಕೆಲಸ ಬಿಟ್ಟರೆ ಹೊಸದಾಗಿ ಹುದ್ದೆಗೆ ಬೇರೊಬ್ಬರನ್ನು ನೇಮಿಸಿಕೊಳ್ಳುವ ಬದಲು ಹೊರಗುತ್ತಿಗೆ ನೌಕರರನ್ನು ಸೇವಾ ಹಿರಿತನದ ಆಧಾರದ ಮೇಲೆ ನೇಮಿಸಿಕೊಳ್ಳಬೇಕು. ನೌಕರರ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸಬೇಕು. ಇಲ್ಲದಿದ್ದರೆ ನಮ್ಮ ಹೋರಾಟ ಮತ್ತೆ ಆರಂಭವಾಗಲಿದೆ’ ಎಂದು ಎಚ್ಚರಿಸಿದರು.

ಸಿಐಟಿಯು ಜಿಲ್ಲಾ ಘಟಕದ ಕಾರ್ಯದರ್ಶಿ ಜಿ. ಸಿದ್ದಗಂಗಪ್ಪ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಎನ್. ಮುನಿಕೃಷ್ಣಪ್ಪ, ಪದಾಧಿಕಾರಿಗಳಾದ ಮುನಿಯಪ್ಪ, ಪುಷ್ಪಾ, ಕದಿರಪ್ಪ, ಸುಮಿತ್ರಮ್ಮ, ನಾರಾಯಣಪ್ಪ, ಚಂದ್ರಪ್ಪ, ವಿಮಲಮ್ಮ, ಮಂಜುಳಮ್ಮ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.