ADVERTISEMENT

ಆಮ್ಲಜನಕ ಘಟಕ ಕಾಮಗಾರಿ ಪರಿಶೀಲನೆ

ಚಿಂತಾಮಣಿ: ₹ 45 ಲಕ್ಷ ವೆಚ್ಚದಡಿ ನಿರ್ಮಾಣ

​ಪ್ರಜಾವಾಣಿ ವಾರ್ತೆ
Published 25 ಜೂನ್ 2021, 4:02 IST
Last Updated 25 ಜೂನ್ 2021, 4:02 IST
ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾನಿಗಳ ನೆರವಿನಿಂದ ನಿರ್ಮಾಣವಾಗುತ್ತಿರುವ ಆಮ್ಲಜನಕ ಘಟಕದ ಕಾಮಗಾರಿಯನ್ನು ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಪರಿಶೀಲಿಸಿದರು
ಚಿಂತಾಮಣಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾನಿಗಳ ನೆರವಿನಿಂದ ನಿರ್ಮಾಣವಾಗುತ್ತಿರುವ ಆಮ್ಲಜನಕ ಘಟಕದ ಕಾಮಗಾರಿಯನ್ನು ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ಪರಿಶೀಲಿಸಿದರು   

ಚಿಂತಾಮಣಿ: ‘ಜನರಿಗೆ ಅನುಕೂಲವಾಗುವಂತೆ ಕ್ಷೇತ್ರಕ್ಕೆ ಶಾಶ್ವತವಾಗಿ ಉಳಿಯುವಂತಹ ಕೆಲಸವನ್ನು ಮೊದಲಿನಿಂದಲೂ ಮಾಡುವ ಅಭ್ಯಾಸ ಹಾಗೂ ಜವಾಬ್ದಾರಿಯನ್ನು ನಮ್ಮ ಕುಟುಂಬ ನಿರ್ವಹಿಸಿಕೊಂಡು ಬಂದಿದೆ’ ಎಂದು ಮಾಜಿ ಶಾಸಕ ಡಾ.ಎಂ.ಸಿ. ಸುಧಾಕರ್ ತಿಳಿಸಿದರು.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾನಿಗಳ ನೆರವಿನಿಂದ ₹ 45 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಆಮ್ಲಜನಕ ಘಟಕದ ಕಾಮಗಾರಿ ಪರಿಶೀಲಿಸಿದ ಬಳಿಕ ಅವರು ಸುದ್ದಿಗಾರರೊಂದಿಗೆ
ಮಾತನಾಡಿದರು.

‘ಕ್ಷೇತ್ರದಲ್ಲಿ ಶಾಶ್ವತವಾಗಿ ಜನರಿಗೆ ಅನುಕೂಲವಾಗುವಂತಹ ಅಭಿವೃದ್ಧಿ ಕಾರ್ಯ ಮಾಡಿದ್ದೇವೆ. ಕ್ಷೇತ್ರದ ಜನರು ಮತ್ತು ಸೋಂಕಿತರಿಗೆ ಉತ್ತಮ ಆರೋಗ್ಯ ಸೇವೆ ದೊರೆಯಬೇಕು. ಬೆಡ್ ಇಲ್ಲ, ಆಮ್ಲಜನಕ ಇಲ್ಲ ಎಂಬ ದೂರು ಬರಬಾರದು ಎಂದು ಅಭಿಮಾನಿಗಳು ಹಾಗೂ ದಾನಿಗಳಿಂದ ಸುಮಾರು ₹ 2 ಕೋಟಿ ವೆಚ್ಚದಡಿ ಸಾರ್ವಜನಿಕ ಆಸ್ಪತ್ರೆಗೆ ಶಾಶ್ವತ ಸೌಲಭ್ಯ ಒದಗಿಸಿದ್ದೇನೆ’ ಎಂದರು.

ADVERTISEMENT

‘ನಾನು ಮತ್ತು ನನ್ನ ಅಭಿಮಾನಿಗಳು, ನನ್ನ ಸ್ನೇಹಿತರ ಸಹಕಾರದಿಂದ ನಾನಾ ರೀತಿಯಲ್ಲಿ ಸಹಾಯ ಮಾಡುತ್ತಿದ್ದೇವೆ. ನಗರದ ವಿದ್ಯಾಗಣಪತಿ ಟ್ರಸ್ಟ್‌ನಿಂದ ₹ 50 ಲಕ್ಷ ವೆಚ್ಚದಲ್ಲಿ ಸರ್ಕಾರಿ ಆಸ್ಪತ್ರೆಯ 50 ಬೆಡ್‌ಗಳನ್ನು 100ಕ್ಕೆ ಏರಿಸಲು ಅಗತ್ಯ ಪರಿಕರಗಳನ್ನು ಕೊಡುಗೆಯಾಗಿ ನೀಡಲಾಗಿದೆ’ ಎಂದು ತಿಳಿಸಿದರು.

ಆಮ್ಲಜನಕ ತಯಾರಿಕಾ ಘಟಕಕ್ಕೆ ಸ್ನೇಹಿತರಾದ ಬೆಂಗಳೂರಿನ ಜಯನಗರ ಆಶ್ರಯ ಹಸ್ತ ಟ್ರಸ್ಟ್‌ನ ದಿನೇಶ್ ಕೃಷ್ಣಸ್ವಾಮಿ ನೆರವು ನೀಡಿದ್ದಾರೆ. ಬೆಸ್ಕಾಂ ಅಧಿಕಾರಿಗಳು ನಿರಂತರ ವಿದ್ಯುತ್ ಸರಬರಾಜು ಆಗುವುದಕ್ಕೆ ಸಂಪರ್ಕ ವ್ಯವಸ್ಥೆ ಮಾಡುತ್ತಿದ್ದಾರೆ. ಕೋಚಿಮುಲ್ ನಿರ್ದೇಶಕ ವೈ.ಬಿ. ಅಶ್ವತ್ಥನಾರಾಯಣ ಬಾಬು ₹ 7.5 ಲಕ್ಷ ವೆಚ್ಚದ 125 ಕೆ.ವಿ ಜನರೇಟರ್ ನೀಡಿದ್ದಾರೆ. ಬಿ.ಇ.ಎಲ್ ಸಂಸ್ಥೆಯ ಸಿಎಸ್‌ಆರ್‌ ನಿಧಿಯಿಂದ ಒಂದು ಎಲ್‌ಪಿಎಂ ಘಟಕ ನೀಡುತ್ತಿದ್ದಾರೆ. ಎರಡು ಘಟಕಗಳಿಂದ 400 ಎಲ್‌ಪಿಎಂ ಆಮ್ಲಜನಕ ಸಿಗಲಿದೆ. ತಾಲ್ಲೂಕಿನ ಜನರಿಗೆ ಅನುಕೂಲವಾಗಲಿದೆ ಎಂದು ವಿವರಿಸಿದರು.

ಆಡಳಿತ ವೈದ್ಯಾಧಿಕಾರಿ ಡಾ.ಸಂತೋಷ್, ಮುಖಂಡ ಮಾಳಪಲ್ಲಿ ಮುನಿಶಾಮಿರೆಡ್ಡಿ, ನಗರಸಭೆ ಅಧ್ಯಕ್ಷೆ ರೇಖಾ ಉಮೇಶ್, ಸ್ಥಾಯಿಸಮಿತಿ ಅಧ್ಯಕ್ಷ ಅಕ್ಷಯ್ ಕುಮಾರ್, ಸದಸ್ಯ ಶ್ರೀನಾಥ್, ಮಾಜಿ ಸದಸ್ಯ ದೇವರಾಜ್, ಸ್ಟುಡಿಯೊ ಕಲ್ಯಾಣ್, ಬೀಡಾ ಶ್ರೀನಿವಾಸ, ಗೋಪಾಲರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.