ADVERTISEMENT

ಚನ್ನಪಟ್ಟಣದವರೆಗೆ ಪ್ಯಾಸೆಂಜರ್ ರೈಲು ಸಂಚಾರ ವಿಸ್ತರಿಸಲು ಪ್ರಯಾಣಿಕರ ಮನವಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2021, 6:57 IST
Last Updated 5 ಜನವರಿ 2021, 6:57 IST
ಚಿಂತಾಮಣಿಗೆ ಬಂದ ಪ್ಯಾಸೆಂಜರ್ ರೈಲು
ಚಿಂತಾಮಣಿಗೆ ಬಂದ ಪ್ಯಾಸೆಂಜರ್ ರೈಲು   

ಚಿಂತಾಮಣಿ: ಬಂಗಾರಪೇಟೆ–ಯಶವಂತಪುರ ಪ್ಯಾಸೆಂಜರ್ ರೈಲನ್ನು ಈ ಮೊದಲು ಇದ್ದಂತೆ ಮೆಜೆಸ್ಟಿಕ್ ಮೂಲಕ ಚನ್ನಪಟ್ಟಣದವರೆಗೂ ಮುಂದುವರೆಸಬೇಕು ಎಂದು ರೈಲು ಪ್ರಯಾಣಿಕರು ಸಂಸದರು ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.

ಈಪ್ಯಾಸೆಂಜರ್ ರೈಲು 9 ತಿಂಗಳ ನಂತರ ಪುನರಾರಂಭವಾಗಿದ್ದು, ಸೋಮವಾರ ನಗರದ ನಿಲ್ದಾಣಕ್ಕೆ ರೈಲು ಬಂದಾಗ ಪ್ರಯಾಣಿಕರು ಸ್ಟೇಷನ್ ಮಾಸ್ಟರ್ ಮೂಲಕ ಮನವಿ ಸಲ್ಲಿಸಿದರು. ಬಂಗಾರಪೇಟೆ, ಕೋಲಾರ, ಶ್ರೀನಿವಾಸಪುರ, ಚಿಂತಾಮಣಿ, ಶಿಡ್ಲಘಟ್ಟ, ಚಿಕ್ಕಬಳ್ಳಾಪುರ ಪ್ರದೇಶಗಳ ಜನರಿಗೆ ಈ ರೈಲಿನ ಸಂಚಾರ ತುಂಬಾ ಅನುಕೂಲಕರವಾಗಿದೆ. ಬಡವರು ಹಾಗೂ ದಿನನಿತ್ಯ ಕೆಲಸಗಳಿಗೆ ಹೋಗುವ ಪ್ರಯಾಣಿಕರು ಕಡಿಮೆ ದರದಲ್ಲಿ ಪ್ರಯಾಣಿಸಬಹುದು. ಜತೆಗೆ ಈ ಭಾಗದ ರೈತರು ತಮ್ಮ ತರಕಾರಿ ಬೆಳೆಗಳ ಉತ್ಪನ್ನಗಳನ್ನು ಸಾಗಿಸಲು ಅನುಕೂಲವಾಗುತ್ತದೆ. ಹೀಗಾಗಿ ಇನ್ನೂ ಹೆಚ್ಚಿನ ರೈಲುಗಳನ್ನು ಓಡಿಸಬೇಕು ಹಾಗೂ ಮೆಜೆಸ್ಟಿಕ್ ಗೆ ಸಂಪರ್ಕ ಕಲ್ಪಿಸಬೇಕು ಎಂದು ಪ್ರಯಾಣಿಕರು ಮನವಿ ಮಾಡಿದರು.

ಈ ರೈಲು ಮೊದಲು ಯಶವಂತಪುರದಿಂದ ಮೆಜೆಸ್ಟಿಕ್ ಮಾರ್ಗವಾಗಿ ಚನ್ನಪಟ್ಟಣದವರೆಗೂ ಸಂಚರಿಸುತ್ತಿತ್ತು. ಮೆಜೆಸ್ಟಿಕ್ ತಲುಪುವ ಪ್ರಯಾಣಿಕರಿಗೆ ತುಂಬಾ ಅನುಕೂಲವಾಗಿತ್ತು. ಈ ರೈಲನ್ನು ಯಶವಂತಪುರಕ್ಕೆ ಸ್ಥಗಿತಗೊಳಿಸಿರುವುದು ಬೆಂಗಳೂರು ಕೇಂದ್ರ ನಿಲ್ದಾಣವನ್ನು ಸೇರಿ, ಅಲ್ಲಿಂದ ಬೇರೆ ಬೇರೆ ಕಡೆ ಹೋಗುವ ಪ್ರಯಾಣಿಕರಿಗೆ ತೊಂದರೆಯಾಗಿದೆ. ರೈಲ್ವೆ ಅಧಿಕಾರಿಗಳು ಹಾಗೂ ಸಂಸದರು ಕೂಡಲೇ ಗಮನಹರಿಸಿ ರೈಲು ಹಿಂದಿನಂತೆ ಸಂಚರಿಸಲು ಕ್ರಮಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.