ಚಿಂತಾಮಣಿ: ತಾಲ್ಲೂಕಿನ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಪಿಎಲ್‌ಡಿ) 26 ವರ್ಷಗಳ ನಂತರ ಪುನರಾರಂಭಗೊಂಡಿದೆ. ರೈತರ ಸಂಕಷ್ಟ ನಿವಾರಣೆಗೆ ನೆರವಾಗಿದ್ದ ಈ ಬ್ಯಾಂಕ್ 1999ರಲ್ಲಿ ಸಮಾಪನಗೊಂಡಿತ್ತು. ಇದುವರೆಗೆ ಯಾವುದೇ ಚುನಾಯಿತ ಪ್ರತಿನಿಧಿಗಳು ಇದನ್ನು ಪುನರಾರಂಭಿಸಲು ಪ್ರಯತ್ನಿಸಿರಲಿಲ್ಲ. ಸಹಕಾರಿ ಇಲಾಖೆ ಎಲ್ಲ ಪ್ರಕ್ರಿಯೆ ಪೂರ್ಣಗೊಳಿಸಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಶನಿವಾರ ಬ್ಯಾಂಕನ್ನು ಪುನರಾರಂಭಿಸಿ ರೈತರ ನಿರೀಕ್ಷೆ ನನಸು ಮಾಡಿದ್ದಾರೆ.
ಸರ್ಕಾರವು ರೈತರು ಮತ್ತು ಕೃಷಿಗಾಗಿ ಹಲವು ಯೋಜನೆಗಳನ್ನು ರೂಪಿಸಿ ಸಹಕಾರಿ ಬ್ಯಾಂಕ್‌ಗಳ ಮೂಲಕ ಜಾರಿಗೊಳಿಸುತ್ತಿದೆ. ಪಿ.ಎಲ್.ಡಿ ಬ್ಯಾಂಕ್ ಮೂಲಕ ರೈತರಿಗೆ ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲ ಸೌಲಭ್ಯ ದೊರಕುತ್ತದೆ. ಮೂರು ವರ್ಷದಿಂದ ಹತ್ತು ವರ್ಷಗಳ ಅವಧಿಯ ತಿರುವಳಿ ಸಾಲದ ಅವಕಾಶವಿದೆ. ಕೃಷಿ, ತೋಟಗಾರಿಕೆ, ಕೊಳವೆ ಬಾವಿ ತೋಡಿಸಲು, ಟ್ರ್ಯಾಕ್ಟರ್ ಕೊಳ್ಳಲು, ಹಸು, ಕುರಿ, ಕೋಳಿ, ಹಂದಿ ಸಾಕಾಣಿಕೆ ಸೇರಿದಂತೆ ಎಲ್ಲ ರೀತಿಯ ಸಾಲ ಸೌಲಭ್ಯ ರೈತರು ಪಡೆಯಬಹುದು.
ಬ್ಯಾಂಕ್ ಸಮಾಪನಗೊಂಡಿದ್ದರಿಂದ ತಾಲ್ಲೂಕಿನ ರೈತರು ಈ ಸೌಲಭ್ಯಗಳಿಂದ ವಂಚಿತರಾಗಿದ್ದರು. ಸಹಕಾರಿ ಸಂಘಗಳ ಮೂಲಕ ₹2ಲಕ್ಷವರೆಗೆ ಬಡ್ಡಿಯಿಲ್ಲದ ಸಾಲ, ₹10ಲಕ್ಷವರೆಗೆ ಶೇ3ರಿಂದ ಶೇ4 ಪ್ರತಿಶತ ಬಡ್ಡಿಯ ಸಾಲ, ಅಲ್ಪಾವಧಿ ಮತ್ತು ಮಧ್ಯಮಾವಧಿ ಸಾಲಗಳು ಹಾಗೂ ಸರ್ಕಾರದ ಸಾಲ ಮಾಫಿ ಯೋಜನೆಗಳ ಲಾಭ ತಾಲ್ಲೂಕಿನ ರೈತರಿಗೆ ಸಿಗುತ್ತಿರಲಿಲ್ಲ.
ತಾಲ್ಲೂಕಿನಲ್ಲಿ ಯಾವುದೇ ನದಿ ಅಥವಾ ಕಾಲುವೆಗಳಿಲ್ಲದೆ ಕೇವಲ ಮಳೆ ಅವಲಂಬಿಸಿ ಜೀವನ ನಡೆಸಬೇಕಾಗಿರುವ ರೈತರು ಸರ್ಕಾರಿ ಸೌಲಭ್ಯಗಳಿಲ್ಲದೆ ಬಳಲುತ್ತಿದ್ದರು. ಇತರ ತಾಲ್ಲೂಕುಗಳ ರೈತರು ಎಲ್ಲ ಸೌಲಭ್ಯ ಪಡೆಯುತ್ತಿದ್ದರೆ, ಚಿಂತಾಮಣಿ ತಾಲ್ಲೂಕಿನ ರೈತರು ನಿರಾಶೆಯಿಂದ ನೋಡಿಕೊಂಡಿರಬೇಕಾಗಿತ್ತು.
ತಾಲ್ಲೂಕಿನ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಸ್ವಾತಂತ್ರ್ಯ ಪೂರ್ವದ 1940ರಲ್ಲಿ ರೈತರ ಅನುಕೂಲಕ್ಕಾಗಿ ಆರಂಭವಾಗಿತ್ತು. ಆರಂಭದಲ್ಲಿ ಸಾಕಷ್ಟು ವರ್ಷ ಉತ್ತಮವಾಗಿ ನಡೆಯಿತು. ಕಾಲಾಂತರದಲ್ಲಿ ಸರ್ಕಾರದ ಸಾಲ ವಸೂಲಾತಿ ನೀತಿ ಮತ್ತು ಆಡಳಿತ ಮಂಡಳಿ ದುರ್ನಡತೆಯಿಂದ ಬ್ಯಾಂಕ್ ನಷ್ಟ ಅನುಭವಿಸಿತು. ಒಬ್ಬ ರಾಜಕೀಯ ನಾಯಕ ತಮ್ಮ ರಾಜಕೀಯ ಉದ್ದೇಶಗಳಿಗಾಗಿ ಬ್ಯಾಂಕ್ ಮೇಲೆ ನಿರ್ಬಂಧ ವಿಧಿಸಿದರು. ನಂತರ 1999ರಲ್ಲಿ ಬ್ಯಾಂಕ್ ಸಮಾಪನಗೊಂಡಿತು. ಅಂದಿನಿಂದ ಇದುವರೆಗೆ ಯಾವ ನಾಯಕರೂ ಬ್ಯಾಂಕ್ ಪುನರಾರಂಭಕ್ಕೆ ಪ್ರಯತ್ನಿಸಲಿಲ್ಲ ಎಂದು ಹಿರಿಯ ಸಹಕಾರಿ ನಿಯಂತ್ರಕರು ವಿಷಾದಿಸುತ್ತಾರೆ.
ಸಮಾಪನಾಧಿಕಾರಿ ಮಾಹಿತಿ ಪ್ರಕಾರ ಬ್ಯಾಂಕ್ ₹5.41 ಕೋಟಿ ನಷ್ಟದಲ್ಲಿದೆ. ಬ್ಯಾಂಕ್ ದಾಖಲೆಗಳ ಪ್ರಕಾರ 4,470 ಸದಸ್ಯರಿದ್ದು ₹13.61 ಲಕ್ಷ ಷೇರು ಬಂಡವಾಳವಿತ್ತು. ಅರ್ಧದಷ್ಟು ಸದಸ್ಯರು ಮರಣಿಸಿದ್ದಾರೆ. ರೈತರಿಂದ ಬ್ಯಾಂಕಿಗೆ ವಸೂಲಾಗಬೇಕಾದ ಅಸಲು ಸಾಲ ₹1.01 ಕೋಟಿ ಇದೆ. ಬ್ಯಾಂಕ್ ಅಪೆಕ್ಸ್ ಬ್ಯಾಂಕಿಗೆ ₹3.98 ಕೋಟಿ ಬಾಕಿ ನೀಡಬೇಕಾಗಿದೆ. ₹2.96 ಕೋಟಿ ವ್ಯತ್ಯಾಸವಿದೆ. ಬ್ಯಾಂಕ್ ಹೊಂದಿರುವ ಒಂದು ನಿವೇಶನವು ಬೆಲೆಬಾಳುವಂತದ್ದಾಗಿದೆ. ಸರ್ಕಾರ ಸಾಲ ಮಾಫಿ ನೀತಿಯಿಂದಾಗಿ ಸುಲಭವಾಗಿ ನಷ್ಟದಿಂದ ಪಾರಾಗಬಹುದಾಗಿತ್ತು. ರೈತರ ಹಿತದೃಷ್ಟಿಯಿಂದ ಬ್ಯಾಂಕ್ ಪುನರಾರಂಭ ಮಾಡಬೇಕು ಎಂದು ರೈತ ಮುಖಂಡರು ಒತ್ತಾಯಿಸುತ್ತಿದ್ದರು.
ಸಹಕಾರಿ ಇಲಾಖೆ ಉನ್ನತ ಅಧಿಕಾರಿಯಾಗಿದ್ದ ತಾಲ್ಲೂಕಿನ ಒಬ್ಬ ಅಧಿಕಾರಿ ಸುಮಾರು 11 ವರ್ಷಗಳ ಹಿಂದೆ ಬ್ಯಾಂಕ್ ಪುನರಾರಂಭಕ್ಕೆ ಪ್ರಯತ್ನ ನಡೆಸಿದ್ದರು. ಸದಸ್ಯರು ಮತ್ತು ಸಾರ್ವಜನಿಕ ಮುಖಂಡರ ಕೆಲವು ಪೂರ್ವಭಾವಿ ಸಭೆಗಳು ನಡೆದರೂ ಮುಂದುವರೆಯಲಿಲ್ಲ.
ಹಳೆ ಬ್ಯಾಂಕ್ ಪುನರಾರಂಭಿಸುವುದು ಅಥವಾ ಹೊಸ ಬ್ಯಾಂಕ್ ಸ್ಥಾಪಿಸುವುದು ಎಂಬ ಎರಡು ಮಾರ್ಗಗಳಿದ್ದವು. ಕೆಲವರು ಹಳೆ ಬ್ಯಾಂಕ್ ಪುನರಾರಂಭವೇ ಉತ್ತಮ ಎಂದರೆ ಇನ್ನು ಕೆಲವರು ಹೊಸ ಬ್ಯಾಂಕ್ ಸ್ಥಾಪನೆ ಮಾಡುವುದು ಉತ್ತಮ ಪರಿಹಾರ ಎಂದು ಭಿನ್ನಾಭಿಪ್ರಾಯ ಹೊಂದಿದ್ದರು. ಸಚಿವ ಡಾ.ಎಂ.ಸಿ.ಸುಧಾಕರ್ ನೇತೃತ್ವ ವಹಿಸಿ ಎರಡು ವರ್ಷಗಳಲ್ಲಿ ಪಿ.ಎಲ್.ಡಿ ಬ್ಯಾಂಕ್ ಅನ್ನು ಪುನರಾರಂಭಿಸಿ ರೈತರ ಸಹಾಯಕ್ಕೆ ಬಂದಿರುವುದು ರೈತರಲ್ಲಿ ಸಂತೋಷ ತಂದಿದೆ ಎಂದು ರೈತ ಸಂಘದ ಅಧ್ಯಕ್ಷ ಸೀಕಲ್ ರಮಣಾರೆಡ್ಡಿ ತಿಳಿಸಿದ್ದಾರೆ.