ADVERTISEMENT

ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣ ಸಲ್ಲ

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 13:39 IST
Last Updated 21 ಸೆಪ್ಟೆಂಬರ್ 2019, 13:39 IST
ಸಭೆಯಲ್ಲಿ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಮಾತನಾಡಿದರು.
ಸಭೆಯಲ್ಲಿ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ಸಹಕಾರಿ ಕ್ಷೇತ್ರ ರಾಜಕಾರಣ ಹೊರತಾಗಿ, ರೈತರ ಏಳಿಗೆ ಪೂರಕವಾಗಿ ಕೆಲಸ ಮಾಡಬೇಕು. ಆದ್ದರಿಂದ ನಾನು ಸೇರಿದಂತೆ ಯಾವ ಮುಖಂಡರೂ ಸಹಕಾರಿ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಿಲ್ಲ’ ಎಂದು ಅನರ್ಹ ಶಾಸಕ ಡಾ.ಕೆ.ಸುಧಾಕರ್ ಹೇಳಿದರು.


ನಗರದಲ್ಲಿ ಶನಿವಾರ ನಡೆದ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ನ 2018–19ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.


‘ದಕ್ಷಿಣ ಕರ್ನಾಟಕದಲ್ಲಿ ಸಹಕಾರಿ ಕ್ಷೇತ್ರಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ಆದರೆ ನಮ್ಮ ಜಿಲ್ಲೆಯಲ್ಲಿ ಸಹಕಾರಿ ಕ್ಷೇತ್ರ ಪ್ರಬಲವಾಗಿ ಬೆಳೆಯುತ್ತಿರುವುದು ಶ್ಲಾಘನೀಯ. ಕಳೆದ 60 ವರ್ಷಗಳಿಂದ ಇಲ್ಲಿ ಅನೇಕರು ಅಧ್ಯಕ್ಷರಾಗಿ ಅವರದೇ ಆದ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಸಹ ನಾವು ಸ್ಮರಿಸಬೇಕು. ಈಗ ಯುವಕರಿಗೆ ಅವಕಾಶ ಸಿಕ್ಕಿದೆ. ಅವರಿಗೆ ಅಭಿವೃದ್ಧಿ ಮಾಡಲು ಸಹಕಾರಿ ನೀಡಬೇಕಿದೆ’ ಎಂದು ತಿಳಿಸಿದರು.

ADVERTISEMENT


‘ರಾಜ್ಯ ಸರ್ಕಾರ ಈಗಾಗಲೇ 27 ಜಿಲ್ಲೆಗಳನ್ನು ಬರಪೀಡಿತ ಜಿಲ್ಲೆಗಳು ಎಂದು ಘೋಷಣೆ ಮಾಡಿದೆ. ಆದರೆ ಆ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿಲ್ಲ. ಸೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿರುವೆ. ಪಿಎಲ್‌ಡಿ ಬ್ಯಾಂಕಿನ ನೂತನ ಕಟ್ಟಡಕ್ಕೆ ‘ನೇಗಿಲ ಯೋಗಿ ಭವನ’ ಎಂದು ಹೆಸರಿಟ್ಟರೆ ಅರ್ಥಪೂರ್ಣವಾಗಿರುತ್ತದೆ’ ಎಂದರು.


ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಪಿ.ನಾಗೇಶ್‌ ಮಾತನಾಡಿ, ‘ಮೊದಲು ಬ್ಯಾಂಕ್ ದುಸ್ಥಿತಿಯಲ್ಲಿತ್ತು. ನಮ್ಮ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದ ಬಳಿಕ ಬ್ಯಾಂಕ್‌ ಸಾಕಷ್ಟು ಪ್ರಗತಿ ಸಾಧಿಸಿದೆ. ಸುಮಾರು 4,000 ಸದಸ್ಯತ್ವ ಮಾಡಿಸಿದ್ದೇವೆ. ಬ್ಯಾಂಕಿನ ವಾಣಿಜ್ಯ ಸಂಕೀರ್ಣದಿಂದ ವಾರ್ಷಿಕ ₹1 ಕೋಟಿ ಬಾಡಿಗೆ ಬರಲಿದೆ. ಅದರಿಂದ ಸ್ವಂತ ಬಂಡವಾಳದಲ್ಲಿ ರೈತರಿಗೆ ಸಾಲ ನೀಡುವ ಯೋಚನೆ ಇದೆ’ ಎಂದು ತಿಳಿಸಿದರು.


‘ನೂತನ ಕಾಯ್ದೆ ತಿದ್ದುಪಡಿಯಂತೆ ಬ್ಯಾಂಕ್‌ನಲ್ಲಿ ನಡೆಯುವ ಸಭೆಗಳಿಗೆ ಹಾಜರಾಗದ ಹಾಗೂ ಕನಿಷ್ಠ ಒಂದು ವರ್ಷದಲ್ಲಿ ಮೂರು ಬಾರಿ ಬ್ಯಾಂಕ್ ವ್ಯವಹಾರ ನಡೆಸದವರ ಸದಸ್ಯತ್ವವನ್ನು ರದ್ದುಪಡಿಸಲಾಗುತ್ತದೆ. ಮುಂದಿನ ಚುನಾವಣೆಯಲ್ಲಿ ಅಂತಹವರಿಗೆ ಮತದಾನ ಮಾಡುವ ಹಕ್ಕು ಇರುವುದಿಲ್ಲ’ ಎಂದು ಹೇಳಿದರು.


ಸಭೆಯಲ್ಲಿ 2017–18ನೇ ಸಾಲಿನ ಆಡಳಿತ ವರದಿ, ಖರ್ಚು ವೆಚ್ಚ, ಲೆಕ್ಕ ಪರಿಶೋಧಕರ ವರದಿ ಮಂಡಿಸಿ ಅಂಗೀಕರಿಸಲಾಯಿತು. ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಮೋಹನ್ ರೆಡ್ಡಿ, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಆವುಲರೆಡ್ಡಿ, ಒಕ್ಕಲಿಗರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ತಮ್ಮೇಗೌಡ, ಬ್ಯಾಂಕ್‌ ಉಪಾಧ್ಯಕ್ಷೆ ಅಕ್ಕಲಮ್ಮ, ನಿರ್ದೇಶಕರಾದ ಕೆ.ಎನ್‌.ಕೃಷ್ಣಮೂರ್ತಿ, ಜಿ.ನಾರಾಯಣಸ್ವಾಮಿ, ಕೆ.ಪಿ.ಚನ್ನಬೈರೇಗೌಡ, ಎಂ.ಶ್ರೀನಿವಾಸ್, ಕೆ.ಕೃಷ್ಣಪ್ಪ, ಸಿ.ನಾರಾಯಣಸ್ವಾಮಿ, ಎಂ.ಚನ್ನಕೇಶವ, ಹೆಚ್ಚುವರಿ ವ್ಯವಸ್ಥಾಪಕ ಎ.ಗೋಪಾಲಕೃಷ್ಣ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.