ADVERTISEMENT

ಶಿಡ್ಲಘಟ್ಟ: ಅಸ್ತಿತ್ವ ಕಳೆದುಕೊಂಡ ಅಂಚೆ ಡಬ್ಬಿಗಳು

ಆಧುನಿಕ ಸಂಪರ್ಕ ಸಾಧನದ ಸೆಳೆತಕ್ಕೆ ಸಿಲುಕಿದ ನಾಗರಿಕರು

ಡಿ.ಜಿ.ಮಲ್ಲಿಕಾರ್ಜುನ
Published 23 ಅಕ್ಟೋಬರ್ 2021, 4:58 IST
Last Updated 23 ಅಕ್ಟೋಬರ್ 2021, 4:58 IST
ಶಿಡ್ಲಘಟ್ಟದ ಅಂಚೆ ಕಚೇರಿ ಮುಂದೆ ಹಳೆಯ ಅಂಚೆ ಡಬ್ಬಿಗಳಿಗೆ ಹೊಸದಾಗಿ ಬಣ್ಣ ಬಳಿದಿಡಲಾಗಿದೆ
ಶಿಡ್ಲಘಟ್ಟದ ಅಂಚೆ ಕಚೇರಿ ಮುಂದೆ ಹಳೆಯ ಅಂಚೆ ಡಬ್ಬಿಗಳಿಗೆ ಹೊಸದಾಗಿ ಬಣ್ಣ ಬಳಿದಿಡಲಾಗಿದೆ   

ಶಿಡ್ಲಘಟ್ಟ: ಆಧುನಿಕ ತಂತ್ರಜ್ಞಾನದ ಸಂಪರ್ಕ ಕ್ರಾಂತಿಯ ಹೊಡೆತಕ್ಕೆ ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ಕೆಂಪು ಬಣ್ಣದ ಅಂಚೆ ಪೆಟ್ಟಿಗೆಗಳು ತನ್ನ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಅವುಗಳ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿದೆ.

ಶಿಡ್ಲಘಟ್ಟ ನಗರ ಸೇರಿದಂತೆ ಇನ್ನೂರಕ್ಕೂ ಹೆಚ್ಚು ಗ್ರಾಮಗಳಲ್ಲಿ ಇರುವುದು ಕೇವಲ 25 ಅಂಚೆ ಡಬ್ಬಿಗಳು ಮಾತ್ರ. ಬಿಸಿಲು, ಮಳೆ, ಚಳಿ, ಗಾಳಿಗೆ ತನ್ನ ಬಣ್ಣ ಕಳೆದುಕೊಂಡು ತುಕ್ಕು ಹಿಡಿಯಲು ಪ್ರಾರಂಭಿಸಿರುವ ಈ ಡಬ್ಬಿಗಳಿಗೆ ವಾರ್ಷಿಕ ದೇಖಾರೇಕಿಯಂತೆ ನಗರದ ಅಂಚೆ ಕಚೇರಿಯ ಬಳಿ ಬಣ್ಣ ಬಳಿದು ಇಡಲಾಗಿದೆ.

ಈ ಹಿಂದೆ ವಿಶ್ವದಲ್ಲಿಯೇ ಬಹುದೊಡ್ಡ ಸಂಪರ್ಕ ಜಾಲ ಹೊಂದಿದ್ದ ಅಂಚೆ ಇಲಾಖೆಯು ಹಳ್ಳಿಯ ಜನರ ಮಾಹಿತಿಯನ್ನು ಪತ್ರದ ಮೂಲಕ ರವಾನಿಸಲು ಗ್ರಾಮಕ್ಕೊಂದರಂತೆ ಗ್ರಾಮದ ಆಲದಮರ, ಅರಳಿಮರ, ವಿದ್ಯುತ್‌ ಕಂಬಗಳಲ್ಲಿ ಅಂಚೆ ಡಬ್ಬಿಗಳ ವ್ಯವಸ್ಥೆ ಕಲ್ಪಿಸಿತ್ತು. ಆ ಮೂಲಕ ಊರಿನ ಜನರು ಪತ್ರ ಬರೆದು ಡಬ್ಬಿಗಳಿಗೆ ಹಾಕುತ್ತಿದ್ದರು.

ADVERTISEMENT

ಅಂಚೆಯಣ್ಣ ಅಂಚೆ ಡಬ್ಬ ತೆರೆದು ಅದರಲ್ಲಿನ ಪತ್ರಗಳನ್ನು ರವಾನಿಸುವ ಕೆಲಸ ಮಾಡುತ್ತಿದ್ದರು. ಆದರೆ, ಈ ವ್ಯವಸ್ಥೆ ಈಗ ಆಧುನಿಕ ಭರಾಟೆಗೆ ಸಿಲುಕಿ ಸಂಪೂರ್ಣವಾಗಿ ನಿಷ್ಕ್ರಿಯಗೊಂಡು ಅಂಚೆ ಡಬ್ಬಿಗಳು
ಕಣ್ಮರೆಯಾಗುತ್ತಿವೆ.

ಜೀವ ಕಳೆದುಕೊಂಡ ಪೋಸ್ಟ್ ಬಾಕ್ಸ್‌: ಗ್ರಾಮೀಣ ಭಾಗ ಸೇರಿದಂತೆ ನಗರದಲ್ಲಿಯೂ ಪೋಸ್ಟ್‌ ಬಾಕ್ಸ್ ಕಾರ್ಯವಿಲ್ಲದೆ ಜೀವ ಕಳೆದುಕೊಂಡಿವೆ. ಪೋಸ್ಟ್ ಬಾಕ್ಸ್‌ಗಳಿಗೆ ಕಾಗದ ಬರಲ್ಲ ಎಂಬುದು ಒಂದು ಕಾರಣವಾದರೆ, ಕೆಲವು ಬಾಕ್ಸ್‌ಗಳು ಎಷ್ಟು ಚಿಕ್ಕದಾಗಿರುತ್ತವೆಂದರೆ ಅದರಲ್ಲಿ ಕಾಗದ ಹಾಕುವುದೇ ದುಸ್ತರ.

ಶಿಡ್ಲಘಟ್ಟ ನಗರದಲ್ಲಿ 7 ಅಂಚೆ ಡಬ್ಬಿಗಳಿವೆ. ತಾಲ್ಲೂಕಿನ ಅಬ್ಲೂಡು, ಆನೆಮಡುಗು, ದೇವರಮಳ್ಳೂರು, ದಿಬ್ಬೂರಹಳ್ಳಿ, ಬಶೆಟ್ಟಹಳ್ಳಿ, ಕೊತ್ತನೂರು, ಕುಂದಲಗುರ್ಕಿ, ಪಲಿಚೇರ್ಲು ಹಾಗೂ ತಿಪ್ಪೇನಹಳ್ಳಿಯಲ್ಲಿ ಒಂದೊಂದು ಅಂಚೆ ಡಬ್ಬಿಗಳಿವೆ. ಮೇಲೂರು ಅಂಚೆ ಕಚೇರಿ ವ್ಯಾಪ್ತಿಯ ಹಳ್ಳಿಗಳಲ್ಲಿ ಒಟ್ಟು 9 ಅಂಚೆ ಡಬ್ಬಿಗಳಿವೆ.

‘ಅಯ್ಯೋ ಈಗ ಯಾರು ಈ ಡಬ್ಬಿಗಳಿಗೆಲ್ಲಾ ಪತ್ರ ಹಾಕುತ್ತಾರೆ ಹೇಳಿ. ಎಲ್ಲಾ ಮೊಬೈಲ್‌, ಇಮೇಲ್‌ ಕಾಲ. ಇಂತಹ ಆಧುನಿಕತೆ ಇರುವಾಗ ಪತ್ರ ಬರೆದು ಈ ಪೆಟ್ಟಿಗೆಗಳಿಗೆ ಹಾಕುವವರು ಯಾರು ಹೇಳಿ. ಹಾಗಾಗಿ ಈ ಡಬ್ಬಿಗಳಲ್ಲಿ ಪತ್ರಗಳು ಬೀಳುವುದು ತುಂಬಾ ಕಡಿಮೆ’ ಎಂದು ಹೆಸರು ಹೇಳಲು ಇಚ್ಛಿಸದ ಅಂಚೆ ಸೇವಕರೊಬ್ಬರು ಹೇಳಿದರು.

‘ಈಗಿನ ಮೊಬೈಲ್ ಯುಗದಲ್ಲಿ ಪತ್ರ ಬರೆಯುವವರನ್ನು ಎಲ್ಲರೂ ವಿಚಿತ್ರವಾಗಿ ನೋಡುವಂತಾಗಿದೆ. ಕ್ಷೇಮ ಸಮಾಚಾರ ಪತ್ರಗಳನ್ನು ಬರೆಯುವುದೇ ಇಲ್ಲ. ಬರೆದರೂ ಕೊರಿಯರ್ ಮಾಡುತ್ತಾರೆ. ಪೋಸ್ಟ್ ಬಾಕ್ಸ್‌ಗಳು ಕಾಣುವುದೇ ಅಪರೂಪ. ಇದ್ದರೂ ಕೆಲವೆಡೆ ಕೇವಲ ಅಲಂಕಾರಿಕ ವಸ್ತುವಾಗಿರುತ್ತವಷ್ಟೇ’ ಎಂದು ಹೇಳಿದರುನಾಗಭೂಷಣ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.