ADVERTISEMENT

ಚಿಕ್ಕಬಳ್ಳಾಪುರ: ಹಾಲು ಉತ್ಪಾದಕರ ಸಂಘದ ಚುನಾವಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2021, 5:26 IST
Last Updated 8 ಮಾರ್ಚ್ 2021, 5:26 IST
ಹಾಲು ಉತ್ಪಾದಕರ ಸಹಕಾರ ಸಂಘದ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರತಿಭಟಿಸಿದ ಕೊಂಡೇನಹಳ್ಳಿ ಗ್ರಾಮಸ್ಥರು
ಹಾಲು ಉತ್ಪಾದಕರ ಸಹಕಾರ ಸಂಘದ ಮತದಾರರ ಪಟ್ಟಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಪ್ರತಿಭಟಿಸಿದ ಕೊಂಡೇನಹಳ್ಳಿ ಗ್ರಾಮಸ್ಥರು   

ಚಿಕ್ಕಬಳ್ಳಾಪುರ: ಅರ್ಹ ಮತದಾರರ ಪಟ್ಟಿಗೆ ಅನರ್ಹರನ್ನೂ ಸೇರಿಸಲಾಗಿದೆ. ಈ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದ ಹಿನ್ನೆಲೆಯಲ್ಲಿ ಭಾನುವಾರ ನಡೆಯಬೇಕಿದ್ದ ತಾಲ್ಲೂಕಿನ ಕೊಂಡೇನಹಳ್ಳಿ ಹಾಲು ಉತ್ಪಾದಕರ ಸಹಕಾರದ ಚುನಾವಣೆಯನ್ನು ಮುಂದೂಡಲಾಗಿದೆ.

ಬೆಳಿಗ್ಗೆ 10.30ಕ್ಕೆ ಚುನಾವಣೆ ನಿಗದಿಯಾಗಿತ್ತು. ಭಾಸ್ಕರ್‌ ರೆಡ್ಡಿ ಚುನಾವಣಾಧಿಕಾರಿಯಾಗಿದ್ದರು. ಒಟ್ಟು ಸಂಘದಲ್ಲಿ 13 ಸ್ಥಾನಗಳಿದ್ದು 10 ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಚುನಾವಣೆಗೆ ಸ್ಪರ್ಧಿಸಲು ಬಿಜೆಪಿ ಬೆಂಬಲಿತರು ತಮ್ಮದೇ ಆದ ಬಣ ಮಾಡಿಕೊಂಡಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತರು ಒಗ್ಗೂಡಿ ತಮ್ಮದೇ ಸಿಂಡಿಕೇಟ್ ರಚಿಸಿಕೊಂಡಿದ್ದರು.

ಚುನಾವಣೆ ಇನ್ನೇನು ಆರಂಭವಾಗಬೇಕು ಎನ್ನುವಷ್ಟರಲ್ಲಿ ಬಹಳಷ್ಟು ಅಕ್ರಮ ನಡೆದಿವೆ. 50 ಅನರ್ಹರ ಹೆಸರು ಮತದಾರರ ಪಟ್ಟಿಯಲ್ಲಿದೆ ಎಂದು ಆರೋಪಿಸಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಮುರುಳಿ ನೇತೃತ್ವದಲ್ಲಿ ಕೆಲವರು ಪ್ರತಿಭಟಿಸಿದರು.

ADVERTISEMENT

‘ಅರ್ಹ 64 ಮಂದಿ ಮತದಾರರು ಇದ್ದಾರೆ. ಈ ನಡುವೆ ಹೈಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿ 50 ಮಂದಿ ಅನರ್ಹರನ್ನೂ ಮತದಾರರ ಪಟ್ಟಿಗೆ ಸೇರಿಸಿದ್ದಾರೆ. ನೋಟಿಸ್ ಬೋರ್ಡ್‌ಗೆ ಮತದಾರರ ಪಟ್ಟಿಯನ್ನು ಅಂಟಿಸಿಲ್ಲ. ಹಾಲು ಉತ್ಪಾದಕರ ಸಹಕಾರ ಸಂಘದ ಸದಸ್ಯರಿಗೂ ಈ ವಿಚಾರ ಗೊತ್ತಿಲ್ಲ. ಸಂಘದ ಕಾರ್ಯದರ್ಶಿ ಈ ಅಕ್ರಮಗಳನ್ನು ನಡೆಸಿದ್ದಾರೆ’ ಎಂದು ಮುರುಳಿ ದೂರಿದರು.

‘ಈ ಬಗ್ಗೆ ನಾವು ಜಿಲ್ಲಾ ಸಹಕಾರ ಸಂಘಗಳ ನಿಬಂಧಕರಿಗೆ ದೂರು ನೀಡುತ್ತಿದ್ದೇವೆ. ಈ ಬಗ್ಗೆ ಸಮಗ್ರವಾಗಿ ತನಿಖೆ ಆಗಬೇಕು’ ಎಂದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಅಂತಿಮವಾಗಿ ಚುನಾವಣಾಧಿಕಾರಿ ಚುನಾವಣೆಯನ್ನು ಅನಿರ್ದಿಷ್ಟಾವಧಿವರೆಗೆ ಮುಂದೂಡಿರುವುದಾಗಿ ಪ್ರಕಟಿಸಿದರು.

‘ನಾವು ಗೆಲ್ಲುವುದು ಖಚಿತವಾಗಿತ್ತು. ಆದರೆ, ಸಚಿವ ಸುಧಾಕರ್ ಅವರಿಂದ ಒತ್ತಡವನ್ನು ತಂದು ಚುನಾವಣೆ ಮುಂದೂಡಲಾಗಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಕೆ.ವಿ. ಚಂದ್ರಪ್ಪ ದೂರಿದರು.

‘ಚುನಾವಣೆ ನಡೆಸಲು ಪೊಲೀಸಿನವರೇ ಬೆದರಿಸಿದ್ದಾರೆ. ಚುನಾವಣೆ ಆರಂಭವಾಗಿದ್ದರೆ ಅರ್ಧ ತಾಸಿನಲ್ಲಿ ಮುಗಿಯುತ್ತಿತ್ತು. ಗಲಾಟೆ ಆಗುವ ಅನುಮಾನ ಇದೆ ಎಂದು ಪೊಲೀಸರು ಹೇಳುತ್ತಾರೆ. ಆದರೆ, ಆ ಲಕ್ಷಣಗಳು ಇರಲಿಲ್ಲ. ಹೆಚ್ಚಿನ ಪೊಲೀಸರನ್ನು ನಿಯೋಜಿಸಿದ್ದರು. ಅಷ್ಟು ಪೊಲೀಸರನ್ನು ನೋಡಿದರೆ ಜನರೇ ಹೆದರಬೇಕು. ನಾವು ಗೆಲ್ಲುತ್ತೇವೆ ಎನ್ನುವುದು ತಿಳಿದು ಉದ್ದೇಶ ಪೂರ್ವಕವಾಗಿ ಚುನಾವಣೆಯನ್ನು ನಿಲ್ಲಿಸಿದ್ದಾರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.