ADVERTISEMENT

ಮಣ್ಣಿನ ಮಡಿಕೆ; ತೊಲಗಿಸಿ ನೀರಡಿಕೆ

ಕಾಮಲಾಪುರ ಗ್ರಾಮದ ಜನತೆಯ ಬದುಕಿಗೆ ಕುಂಬಾರಿಕೆ ವೃತ್ತಿಯೇ ಜೀವಾಳ

ಎ.ಎಸ್.ಜಗನ್ನಾಥ್
Published 11 ಏಪ್ರಿಲ್ 2021, 5:41 IST
Last Updated 11 ಏಪ್ರಿಲ್ 2021, 5:41 IST
ಕಾಮಲಾಪುರದ ಬಳಿ ಮಾರಾಟಕ್ಕೆ ಸಿದ್ಧವಾಗಿರುವ ವಿಭಿನ್ನ ಶೈಲಿಯ ಮಡಿಕೆಗಳು
ಕಾಮಲಾಪುರದ ಬಳಿ ಮಾರಾಟಕ್ಕೆ ಸಿದ್ಧವಾಗಿರುವ ವಿಭಿನ್ನ ಶೈಲಿಯ ಮಡಿಕೆಗಳು   

ಗೌರಿಬಿದನೂರು: ಅನಾದಿಕಾಲ ದಿಂದಲೂ ಮಾನವನ ನಾಗರಿಕತೆ ಬೆಳೆಯುತ್ತಾ ಬಂದಿರುವುದೇ ಮಣ್ಣಿನ ಮಡಿಕೆಗಳಿಂದ ಎಂಬುದನ್ನು ಮರೆಯುವಂತಿಲ್ಲ. ಆಧುನಿಕತೆಯ ಜೀವನಶೈಲಿಯಲ್ಲಿ ತಾಮ್ರ, ಇಂಡಾಲಿಯಂ ಹಾಗೂ ಸ್ಟೀಲ್ ಪಾತ್ರೆಗಳ ಬಳಕೆಗೆ ಹೊಂದಿಕೊಂಡ ನಮಗೆ ಹಲವಾರು ದಶಕಗಳೇ ಕಳೆದಿದ್ದರೂ ಬೇಸಿಗೆಯಲ್ಲಿ ತಣ್ಣನೆಯ ನೀರು ಕುಡಿಯಲು ಫ್ರಿಡ್ಜ್‌ಗಿಂತ ಇಂದಿಗೂ ಮಣ್ಣಿನ ಮಡಿಕೆಗಳೇ ಆಸರೆಯಾಗಿವೆ.

ಬೇಸಿಗೆಯ ಬಿರು ಬಿಸಿಲಿನ ತಾಪದಿಂದ ಬಾಯಾರಿಕೆ ನೀಗಿಸಲು ಅನೇಕ ಸೇವಾ ಸಂಸ್ಥೆಗಳು ನಗರದ ವಿವಿಧ ವೃತ್ತಗಳಲ್ಲಿ ಸಾರ್ವಜನಿಕರಿಗೆ ಉಚಿತವಾಗಿ ಕುಡಿಯಲು ನೀರಿನ ಅರವಟಿಗೆ ಸ್ಥಾಪಿಸಿ ಅದರಲ್ಲಿ ಮಣ್ಣಿನ ಮಡಿಕೆಗಳನ್ನೇ ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಈಗಾಗಲೇ ಮೂಲೆ ಗುಂಪಾಗಿರುವ ಕುಂಬಾರಿಕೆ ತಾಲೂಕಿನಲ್ಲಿ ಅಳಿದುಳಿದಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಬೆಂಗಳೂರು ರಸ್ತೆಯಲ್ಲಿ ಬರುವ ತೊಂಡೇಬಾವಿ ಹೋಬಳಿಯಲ್ಲಿ ಕಾಮಲಾಪುರ ಎಂಬ ಪುಟ್ಟಗ್ರಾಮವಿದೆ. ಈ ಗ್ರಾಮದಲ್ಲಿ ಹಿಂದೆ ಸುಮಾರು 30 ಕುಟುಂಬಗಳಿದ್ದವು. ಪ್ರಸ್ತುತ ಇರುವ ಕೆಲವೇ ಕುಟುಂಬಗಳು ಮಡಿಕೆಗಳನ್ನು ತಯಾರಿಕೆ ಮಾಡಿ ಜೀವನ ಸಾಗಿಸುತ್ತಿವೆ. ವರ್ಷವಿಡೀ ಅವರ ವೃತ್ತಿ‌ ನಿರಂತರವಾಗಿ ನಡೆದರೂ ಬದುಕಿಗೆ ಆಸರೆಯಾಗುವಂತೆ ಬೇಸಿಗೆಯ 3-4 ತಿಂಗಳು ಮಡಿಕೆಗಳ ವ್ಯಾಪಾರ ಭರ್ಜರಿಯಾಗಿರುತ್ತದೆ.

ADVERTISEMENT

ಮಡಿಕೆ ತಯಾರಿಸುವ ವಿಧಾನ:ಪ್ರತಿವರ್ಷ ಜನವರಿಯಲ್ಲಿ ಸ್ಥಳೀಯ ಪೋತೇನಹಳ್ಳಿ ಕೆರೆಯಿಂದ ಜೇಡಿಮಣ್ಣನ್ನು ತಂದು ಸಂಗ್ರಹಿಸಿ ಅದನ್ನು ಹದ ಮಾಡಿಕೊಂಡು ಮಡಿಕೆ ತಯಾರಿಸುತ್ತಾರೆ. ತಯಾರಿಸಿದ ಮಡಿಕೆಗಳನ್ನು ಜನವರಿಯಿಂದ ಜೂನ್‌ವರೆಗೆ ತಯಾರಿಸಿ ಮಾರಾಟ ಮಾಡುತ್ತಾರೆ.

ಮಡಿಕೆಗಳನ್ನು ವಿವಿಧ ಶೈಲಿಗಳಲ್ಲಿ ತಯಾರಿಸಲು ಸಾಕಷ್ಟು ನೈಪುಣ್ಯ ಹಾಗೂ ಕೌಶಲ ಬೇಕಾಗಿದ್ದು, ಹಳಬರು ಇಂದಿಗೂ ಇಂತಹ ಕೌಶಲದಿಂದ ಮಡಿಕೆ ತಯಾರು ಮಾಡುತ್ತಿದ್ದಾರೆ. ಹಿಂದೆ ಧಾನ್ಯ ಸಂಗ್ರಹಿಸಲು ಮಣ್ಣಿನಿಂದ ತಯಾರಾದ ವಾಡೆಗಳನ್ನು ಬಳಸುತ್ತಿದ್ದರು. ಇದೀಗ ತಣ್ಣನೆಯ ನೀರನ್ನು ಕುಡಿಯಲು ಮಣ್ಣಿನ ಮಡಿಕೆಗಳನ್ನು ಬಳಸುವುದು ವಿಶೇಷ.

‘ಕಾಲಕ್ರಮೇಣ ನೇಪಥ್ಯಕ್ಕೆ ಸರಿದ ಮೇಲೆ ಇದೇ ವಾಡೆಗಳನ್ನು ಈಗ ನಗರ ಪ್ರದೇಶದಲ್ಲಿನ ಹೋಟೆಲ್ ಮತ್ತು ಡಾಬಾಗಳಲ್ಲಿ ತಂದೂರಿ ರೋಟಿ ಮತ್ತು ಕುಲ್ಚಾಗಳನ್ನು ತಯಾರಿಸಲು ಬಳಸುತ್ತಿದ್ದು, ನಗರ ಪ್ರದೇಶದಲ್ಲಿ ಹೆಚ್ಚು ವಾಡೆಗಳು ಡಾಬಾಗಳಿಗೆ ಮಾರಾಟವಾಗುತ್ತಿವೆ’ ಎಂದು ಕುಂಬಾರಿಕೆ ಮಾಡುತ್ತಿರುವ ನರಸಿಂಹಪ್ಪ ಹೇಳುತ್ತಾರೆ.

ಸಕಾಲಕ್ಕೆ ಮಳೆ ಬಾರದೆ ವ್ಯವಸಾಯವು ಸಾಕಷ್ಟು ನಷ್ಟವಾಗುತ್ತಿರುವ ಇಂದಿನ ದಿನಗಳಲ್ಲಿ ಕುಂಬಾರಿಕೆ ಮೇಲೂ ಹೆಚ್ಚು ಪರಿಣಾಮ ಬೀರುತ್ತದೆ ಎನ್ನುತ್ತಾರಾದರೂ ಮಡಿಕೆಗಳನ್ನು ತಯಾರು ಮಾಡಲು ಹಸಿ ಮಣ್ಣಿನ ಮಡಿಕೆಗಳನ್ನು ಸುಡಬೇಕಾದರೆ ನೀಲಗಿರಿ ಸೊಪ್ಪು ಸಿಗುವುದು ಕಷ್ಟಕರವಾಗಿದೆ. ಅದನ್ನು ಖರೀದಿಸಲು ಸಹ ದುಬಾರಿಯಾಗಿದೆ. ಇದರಿಂದ ಮಡಿಕೆ ತಯಾರಿಸುವ ವೆಚ್ಚವೂ ಹೆಚ್ಚಾಗುತ್ತಿದೆ ಎನ್ನುತ್ತಾರೆ ಅವರು.

ಪ್ರತಿ ವ್ಯಕ್ತಿ ಒಂದು ದಿನಕ್ಕೆ ಗರಿಷ್ಠ 20 ಮಡಿಕೆಗಳನ್ನು ತಯಾರಿಸಬಹುದು. ಈ ಗುಡಿ ಕೈಗಾರಿಕೆಯಲ್ಲಿ ಮಹಿಳೆಯರೂ ಸಹಾಯ ಮಾಡುವುದರಿಂದ ಮಾರಾಟ ಮಾಡಲು, ತಯಾರಿಸಲು ಹಾಗೂ ಮಣ್ಣನ್ನು ಹದಮಾಡಲು ಪುರುಷರಿಗೆ ಸಹಾಯ ಮಡುವುದು ಹೆಚ್ಚು ಉಪಕಾರಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.