ADVERTISEMENT

ಚಿಕ್ಕಬಳ್ಳಾಪುರ | ಪಾರದರ್ಶಕ ಚುನಾವಣೆಗೆ ಸಿದ್ಧತೆ: ಜಿ. ಸಂತೋಷ್ ಕುಮಾರ್

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ 2,07,905 ಮತದಾರರು

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 5:59 IST
Last Updated 1 ಏಪ್ರಿಲ್ 2023, 5:59 IST
ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣಾಧಿಕಾರಿ ಜಿ.ಸಂತೋಷ್ ಕುಮಾರ್ ಮಾತನಾಡಿದರು. ತಹಶೀಲ್ದಾರ್ ಗಣಪತಿ ಶಾಸ್ತ್ರಿ ಇದ್ದಾರೆ
ಚಿಕ್ಕಬಳ್ಳಾಪುರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಚುನಾವಣಾಧಿಕಾರಿ ಜಿ.ಸಂತೋಷ್ ಕುಮಾರ್ ಮಾತನಾಡಿದರು. ತಹಶೀಲ್ದಾರ್ ಗಣಪತಿ ಶಾಸ್ತ್ರಿ ಇದ್ದಾರೆ   

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮುಕ್ತ, ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿಯೂ ಆದ ಚುನಾವಣಾಧಿಕಾರಿ ಜಿ. ಸಂತೋಷ್ ಕುಮಾರ್ ತಿಳಿಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈವರೆಗೆ ಒಟ್ಟು 2,07,905 ಮತದಾರರಿದ್ದಾರೆ. ಈ ಪೈಕಿ 1,02,512 ಪುರುಷರು, 1, 05,373 ಮಹಿಳೆಯರು, 20 ತೃತೀಯ ಲಿಂಗಿಗಳು ಇದ್ದಾರೆ. ಇದರಲ್ಲಿ 2,786 ಅಂಗವಿಕಲರು, 80 ವರ್ಷದ ಮೇಲ್ಪಟ್ಟ 5,061 ಮತದಾರರು, 126 ವಿಐಪಿ ಮತದಾರರು ಇದ್ದಾರೆ. ಈ ಬಾರಿ ಕ್ಷೇತ್ರದಲ್ಲಿ 5,616 ಯುವ ಮತದಾರರು ಮತದಾನ ಮಾಡಲಿದ್ದಾರೆ. ಹೊಸದಾಗಿ ನೋಂದಣಿಯಾಗಿರುವ ಯುವ ಮತದಾರರಿಗೆ ಮತದಾರರ ಚೀಟಿಯನ್ನು ಶೀಘ್ರ ಅಂಚೆ ಮೂಲಕ ಕಳುಹಿಸಲು ಕ್ರಮ
ವಹಿಸಲಾಗಿದೆ’ ಎಂದು ಹೇಳಿದರು.

ಸಾರ್ವಜನಿಕ ಸ್ಥಳಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಅಳವಡಿಸಿರುವ ಸರ್ಕಾರಿ, ಖಾಸಗಿ ಮತ್ತು ರಾಜಕೀಯ ವ್ಯಕ್ತಿಗಳ ಬ್ಯಾನರ್, ಪೋಸ್ಟರ್‌ಗಳನ್ನು ತೆರವುಗೊಳಿಸುವ ಕಾರ್ಯವನ್ನು ಈಗಾಗಲೇ ಕೈಗೊಳ್ಳಲಾಗಿದೆ. ಮತ್ತೆ ಯಾರಾದರೂ ಅಕ್ರಮವಾಗಿ ಬ್ಯಾನರ್, ಪೋಸ್ಟರ್‌ಗಳನ್ನು ಅಂಟಿಸಿದರೆ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮವಹಿಸಲಾಗುವುದು ಎಂದರು.

ADVERTISEMENT

ಆಟೊಗಳಲ್ಲಿ ಯಾವುದೇ ಪಕ್ಷ ಅಥವಾ ವ್ಯಕ್ತಿಗೆ ಸಂಬಂಧಿಸಿದ ಚುನಾವಣಾ ಪ್ರಚಾರದ ಬರಹಗಳನ್ನು ಈಗಾಗಲೇ ತೆರವುಗೊಳಿಸಲಾಗುತ್ತಿದೆ. ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸುವವರ ವಿರುದ್ಧ ಕ್ರಮವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಒಟ್ಟು 252 ಮತಗಟ್ಟೆಗಳ ಪೈಕಿ 52 ನಗರ, 200 ಗ್ರಾಮೀಣ ಪ್ರದೇಶದ ಮತಗಟ್ಟೆಗಳಾಗಿವೆ. ಪ್ರತಿ ಮತಗಟ್ಟೆಗೆ ಕನಿಷ್ಠ 208 ಮತದಾರರಿದ್ದು, ಗರಿಷ್ಠ 1,496 ಮತದಾರರು ಇದ್ದಾರೆ. ಚುನಾವಣೆ ಘೋಷಣೆಯಾದ ದಿನಾಂಕದಿಂದ ಎಲ್ಲ ತರಹದ ಧ್ವನಿ ವರ್ಧಕಗಳನ್ನು ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೂ ನಿಷೇಧಿಸಲಾಗಿದೆ ಎಂದರು.

ಚುನಾವಣಾ ವೆಚ್ಚ ನಿರ್ವಹಣೆ ಸಲುವಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಇನ್ನು ಕ್ಷೇತ್ರದ ಚದಲಪುರ, ನಂದಿಕ್ರಾಸ್ ಹಾಗೂ ಸುಲ್ತಾನ್ ಪೇಟೆ ಪ್ರದೇಶಗಳಲ್ಲಿ ಈಗಾಗಲೇ ಚೆಕ್‌ಪೋಸ್ಟ್ ಗಳನ್ನು ನಿರ್ಮಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಟೋಲ್ ಫ್ರೀ ದೂರವಾಣಿ ಸಂಖ್ಯೆ 1950 ರಂತೆ ಹಾಗೂ ವಿಧಾನಸಭಾ ಕ್ಷೇತ್ರದಲ್ಲಿ 24/7 ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ. ದೂರವಾಣಿ ಸಂಖ್ಯೆ 08156-272564 ಗೆ ಕರೆ ಮಾಡಿ ಚುನಾವಣೆಗೆ ಸಂಬಂಧಿಸಿದ ಯಾವುದೇ ಮಾಹಿತಿ ನೀಡಬಹುದು ಎಂದರು.

ಹಣ, ಮದ್ಯ ಇತರೆ ವಸ್ತುಗಳನ್ನು ವಿತರಿಸುವುದು ಕಂಡು ಬಂದಲ್ಲಿ ಕೂಡಲೇ Cvigil App ಮೂಲಕ ದೂರು ಸಲ್ಲಿಸಬಹುದು. ದೂರು ಸಲ್ಲಿಸಿದ 100 ನಿಮಿಷಗಳೊಳಗಾಗಿ ಅಗತ್ಯ ಕ್ರಮವಹಿಸಲಾಗುವುದು. ವಿಧಾನಸಭಾ ಕ್ಷೇತ್ರ ಮಟ್ಟದ ಸಭೆ, ಸಮಾರಂಭ ಮತ್ತು ವಾಹನಗಳಿಗೆ ಅನುಮತಿ ನೀಡಲು ಏಕಗವಾಕ್ಷಿ ತಂಡ ರಚಿಸಲಾಗಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ತಹಶೀಲ್ದಾರ್ ಹಾಗೂ ಸಹಾಯಕ ಚುನಾವಣಾಧಿಕಾರಿ ಗಣಪತಿ ಶಾಸ್ತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.