ADVERTISEMENT

ಯಾರ ಮಡಲಿಗೆ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನ

ಶಿಡ್ಲಘಟ್ಟ ನಗರಸಭೆ: ಗರಿಗೆದರಿದ ರಾಜಕೀಯ ಚಟುವಟಿಕೆ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2024, 6:25 IST
Last Updated 9 ಆಗಸ್ಟ್ 2024, 6:25 IST
ಚಿತ್ರಾ ಮನೋಹರ್
ಚಿತ್ರಾ ಮನೋಹರ್   

ಶಿಡ್ಲಘಟ್ಟ: ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆ ಗರಿಗೆದರಿದೆ. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದೆ.

ಹಾಲಿ ಶಿಡ್ಲಘಟ್ಟ ನಗರಸಭೆ ಸದಸ್ಯರ ಸಂಖ್ಯೆ 31 ಇದೆ. ಅವರಲ್ಲಿ ಕಾಂಗ್ರೆಸ್ (13), ಜೆಡಿಎಸ್ (10), ಬಿಎಸ್‌ಪಿ (2), ಬಿಜೆಪಿ(2) ಮತ್ತು ಸ್ವತಂತ್ರ (4) ಇದ್ದಾರೆ.

ಕಳೆದ ಬಾರಿ ಮೀಸಲಾತಿ ಪ್ರಕಾರ ಅಧ್ಯಕ್ಷ ಸ್ಥಾನ ಎಸ್‌.ಸಿ ಮಹಿಳೆಗೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಿತ್ತು. ಹಾಗಾಗಿ ಸುಮಿತ್ರಾ ರಮೇಶ್ ಅಧ್ಯಕ್ಷೆಯಾಗಿದ್ದರೆ, ಅಪ್ಸರ್ ಪಾಷ ಉಪಾಧ್ಯಕ್ಷರಾಗಿದ್ದರು.

ADVERTISEMENT

ಕಳೆದ ಬಾರಿ ಜೆಡಿಎಸ್ (10), ಬಿಎಸ್‌ಪಿ (2), ಬಿಜೆಪಿ(2) ಮತ್ತು ಸ್ವತಂತ್ರ (4) ಮತ್ತು ಕಾಂಗ್ರೆಸ್‌ನ ಒಬ್ಬ ಸದಸ್ಯ ಜೆಡಿಎಸ್  ಬೆಂಬಲಿಸಿದ್ದರಿಂದಾಗಿ ಜೆಡಿಎಸ್‌ನ ಸುಮಿತ್ರಾ ರಮೇಶ್ ಅಧ್ಯಕ್ಷೆಯಾಗಿದ್ದರು.

ಕಳೆದ ಅವಧಿಯಲ್ಲಿ ಅಧಿಕಾರ ಪಡೆಯಲು ಅವಕಾಶವಿದ್ದರೂ ಕೈ ಚೆಲ್ಲಿದ ಕಾಂಗ್ರೆಸ್ ಪಾಳಯದಲ್ಲಿ ಈ ಬಾರಿ ಅಧಿಕಾರ ಹಿಡಿಯಲೇ ಬೇಕು ಎನ್ನುವ ಸಿದ್ಧತೆ ನಡೆದಿದೆ.

ಹೆಚ್ಚಿನ ಸಂಖ್ಯೆ ಸದಸ್ಯರನ್ನು ಹೊಂದಿದ್ದರೂ ಕಾಂಗ್ರೆಸ್ ಕಳೆದ ಬಾರಿ ಅಧಿಕಾರ ವಂಚಿತವಾಯಿತು. ಆದರೆ, ಈಗ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ  ನಗರಸಭೆಯಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯುವುದನ್ನು ಪ್ರತಿಷ್ಠೆ ಆಗಿ ಪರಿಗಣಿಸಿದ್ದಾರೆ. ಅವರಿಗೆ ಬೇರೆ ಪಕ್ಷಗಳ ಎದುರಾಳಿಗಳಿಗಿಂದ ತಮ್ಮ ಪಕ್ಷದಲ್ಲಿನ ಎದುರಾಳಿಯದೇ ಸಮಸ್ಯೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಮುನ್ನಡೆಸುವ ಮೂಲಕ ಮುಂಬರುವ ಚುನಾವಣೆಯಲ್ಲಿನ ತಮ್ಮ ಸ್ಥಾನ ಭದ್ರಪಡಿಸಿಕೊಳ್ಳುವ ಉದ್ದೇಶ ಅವರದ್ದಾಗಿದೆ.

ಈ ಬಾರಿ ಅಧ್ಯಕ್ಷ – ಸಾಮಾನ್ಯ ಆಗಿರುವುದರಿಂದ ಯಾರು ಬೇಕಾದರೂ ಆಗಬಹುದಾಗಿದೆ. ಆದರೂ, ಎರಡೂ ಪಕ್ಷಗಳಿಂದ ಆಕಾಂಕ್ಷಿಗಳಾಗಿರುವ ಕೆಲವರು ಇದ್ದೇ ಇದ್ದಾರೆ.

ಉನ್ನತ ಮೂಲಗಳ ಪ್ರಕಾರ ಕಾಂಗ್ರೆಸ್‌ನ  3ನೇ ವಾರ್ಡ್‌ನ ಚಿತ್ರಾ ಮನೋಹರ್, 10ನೇ ವಾರ್ಡ್‌ನ ಎಸ್.ಎಂ.ಮಂಜುನಾಥ್, ಜೆಡಿಎಸ್‌ನ ಪದ್ಮಿನಿ ಕಿಶನ್ ಸದ್ಯ ಪರಿಸ್ಥಿತಿಯಲ್ಲಿ ಬಹಿರಂಗವಾಗಿ ಆಕಾಂಕ್ಷಿಗಳಾಗಿದ್ದಾರೆ. ಹೇಳಿಕೊಳ್ಳದೆ ಇರುವವರೂ ಕೆಲವರಿದ್ದಾರೆ. ಈಗಿನ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರೇ ಮುಂದುವರಿಯುವ ಸಾಧ್ಯತೆಯೂ ಅಲ್ಲಗಳೆಯುವಂತಿಲ್ಲ.

ಶಾಸಕರ ನಿರಾಸಕ್ತಿ

ನಗರವನ್ನು ಸ್ವಚ್ಛ ಹಾಗೂ ಸುಂದರವಾಗಿರಿಸಬೇಕು ಎಂಬ ಉದ್ದೇಶದಿಂದ ಶಾಸಕ ಬಿ.ಎನ್.ರವಿಕುಮಾರ್ ಅವರು ತಾವು ಶಾಸಕರಾಗುತ್ತಿದ್ದಂತೆಯೇ ಲಕ್ಷಾಂತರ ರೂಪಾಯಿ ಸ್ವಂತ ಹಣ ವ್ಯಯಿಸಿ ನಗರದ ತ್ಯಾಜ್ಯವನ್ನೆಲ್ಲ ತೆಗೆಸಿದ್ದರು. ಮುಚ್ಚಿ ಹೋಗಿದ್ದ ಚರಂಡಿ ಸರಿಪಡಿಸಿದ್ದರು. ಕೆಲವು ವಾರ್ಡ್‌ಗಳಲ್ಲಿ ಸದಸ್ಯರು ಈ ಸ್ವಚ್ಛತಾ ಕಾರ್ಯಕ್ಕೆ ಸ್ಪಂದಿಸಿರಲಿಲ್ಲ. ನಗರಸಭೆ ಯುಜಿಡಿಗಾಗಿ ಕೋಟಿಗಟ್ಟಲೇ ಹಣ ಸಹ ಮಂಜೂರು ಮಾಡಿಸಿದ್ದಾರೆ. ಜನರಿಂದ ಆಯ್ಕೆಯಾದವರಿಗೆ ಜನಸೇವೆ ಮಾಡುವ ಮನಸ್ಸಿರದಿದ್ದರೆ ಅಂತಹ ನಗರಸಭೆ ದೇವರಿಂದಲೂ ಸರಿಪಡಿಸಲಾಗದು ಎಂದು ಶಾಸಕರು ನಿರ್ಲಿಪ್ತರಾಗಿದ್ದಾರೆ ಎನ್ನುತ್ತಾರೆ ಅವರ ಆಪ್ತರು.

ಕುದುರೆ ಜೂಜಿನ ವಾಸನೆ

ನಗರಸಭೆ ಒಬ್ಬ ಸದಸ್ಯ ‘ಒಬ್ಬೊಬ್ಬರಿಗೂ ಹತ್ತು ಲಕ್ಷ ಕೊಡುತ್ತೇನೆ ನನ್ನನ್ನು ಅಧ್ಯಕ್ಷ ಆಗಲು ಬೆಂಬಲಿಸಿ‘ ಎಂದು ಬೆಲೆ ನಿಗದಿಪಡಿಸಿರುವ ಮಾತು ಹರಡಿದ್ದು ಜನರು ಹುಬ್ಬೇರಿಸಿದ್ದಾರೆ. ಚರ್ಚೆಗೆ ಗ್ರಾಸ ಸದ್ಯ ಪರಿಸ್ಥಿತಿಯನ್ನು ಇತ್ತ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಮತ್ತು ಅತ್ತ ಶಾಸಕ ಬಿ.ಎನ್.ರವಿಕುಮಾರ್ ಹೇಗೆ ನಿಭಾಯಿಸುತ್ತಾರೆ ಮತ್ತು ತಮ್ಮ ತಮ್ಮ ಪಕ್ಷದವರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೇರಲು ಹೇಗೆಲ್ಲ ನೆರವಾಗುತ್ತಾರೆ ಎಂಬುದು ಕೂಡ ಚರ್ಚೆಗೆ ಗ್ರಾಸವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.