ADVERTISEMENT

ವಿಜ್ಞಾನಕ್ಕೆ ಆದ್ಯತೆ ಇಂದಿನ ಅಗತ್ಯ: ಕ್ಷೇತ್ರ ಸಮನ್ವಯಾಧಿಕಾರಿ ಮುನಿರಾಜು

ನಾಯನಹಳ್ಳಿ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 13:26 IST
Last Updated 10 ಡಿಸೆಂಬರ್ 2019, 13:26 IST
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಮುನಿರಾಜು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕ್ಷೇತ್ರ ಸಮನ್ವಯಾಧಿಕಾರಿ ಮುನಿರಾಜು ಮಾತನಾಡಿದರು.   

ಚಿಕ್ಕಬಳ್ಳಾಪುರ: ‘ವಿಜ್ಞಾನ ಇಲ್ಲದೆ ಜೀವನವಿಲ್ಲ. ದೈನಂದಿನ ಪ್ರತಿ ಕೆಲಸದಲ್ಲೂ ಗೊತ್ತಿದ್ದೋ, ಗೊತ್ತಿಲ್ಲದೆಯೋ ವಿಜ್ಞಾನ ಹಾಸುಹೊಕ್ಕಾಗಿರುತ್ತದೆ. ಆದ್ದರಿಂದ, ಹತ್ತು ಹಲವು ಹಬ್ಬಗಳಂತೆ ವಿಜ್ಞಾನ ಹಬ್ಬ ಮಕ್ಕಳಿಗೆ ಮಹತ್ವದ ಹಬ್ಬವಾಗಬೇಕು’ ಎಂದು ಕ್ಷೇತ್ರ ಸಮನ್ವಯಾಧಿಕಾರಿ ಮುನಿರಾಜು ತಿಳಿಸಿದರು.

ತಾಲ್ಲೂಕಿನ ನಾಯನಹಳ್ಳಿಯಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಭಾರತ ಜ್ಞಾನ ವಿಜ್ಞಾನ ಸಮಿತಿ ಸಹಯೋಗದಲ್ಲಿ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಮಕ್ಕಳ ವಿಜ್ಞಾನ ಹಬ್ಬದಲ್ಲಿ ಅವರು ಮಾತನಾಡಿದರು.

‘ಇಂದು ಕಾಲ ಬದಲಾಗಿದೆ. ಹೊಸ ಹೊಸ ಆವಿಷ್ಕಾರಗಳತ್ತ ಕುತೂಹಲ ತಾಳುವ ಮೂಲಕ ವಿದ್ಯಾರ್ಥಿಗಳು ವೈಜ್ಞಾನಿಕ ನೆಲೆಯ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಗ್ರಾಮೀಣ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವಲ್ಲಿ ಶಿಕ್ಷಣ ಇಲಾಖೆ ಈ ಕಾರ್ಯಕ್ರಮ ಆಯೋಜಿಸಿದೆ. ಭಾಷೆ, ವಿಜ್ಞಾನ, ಗಣಿತ, ಮನರಂಜನೆ, ನಾಟಕ, ನೃತ್ಯ ಒಳಗೊಂಡುವ ಕಲಿಯುವ ಕ್ರಮ ಅನ್ವೇಷಿಸುವ ಪ್ರಕ್ರಿಯೆ ಇದಾಗಿದೆ’ ಎಂದರು.

ADVERTISEMENT

‘ವಿದ್ಯಾರ್ಥಿಗಳು ಮುಂದೆ ಸೃಜಶೀಲ ವ್ಯಕ್ತಿಗಳಾಗಿ ರೂಪುಗೊಳ್ಳಲು, ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬೆಳೆಸಲು ಇಂತಹ ವಿಜ್ಞಾನ ಹಬ್ಬ ಸಹಕಾರಿ. ಇಂದಿನ ಮಕ್ಕಳು ಭವಿಷ್ಯದಲ್ಲಿ ಉತ್ತಮ ವಿಜ್ಞಾನಿಗಳಾಗಿ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಅವಕಾಶಗಳಿವೆ. ಅವುಗಳನ್ನು ಪಡೆಯುವ ನಿಟ್ಟಿನಲ್ಲಿ ಮಕ್ಕಳು ವಿಜ್ಞಾನದತ್ತ ಒಲುವು ಬೆಳೆಸಿಕೊಳ್ಳುವ ಕೆಲಸ ಮಾಡಬೇಕು’ ಎಂದು ಹೇಳಿದರು.

ಐದು ಶಾಲೆಗಳಿಂದ ಸುಮಾರು 150 ವಿದ್ಯಾರ್ಥಿಗಳು ವಿಜ್ಞಾನ ಹಬ್ಬದಲ್ಲಿ ಭಾಗವಹಿಸಿದ್ದರು. ಅಜ್ಜವಾರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಿಜಯಮ್ಮ ಕೇಶವರೆಡ್ಡಿ, ಉಪಾಧ್ಯಕ್ಷ ಮುನಿನಾರಾಯಣಪ್ಪ, ಎಸ್ .ಡಿ.ಎಂ.ಸಿ ಅಧ್ಯಕ್ಷೆ ಪುಷ್ಪಮ್ಮ, ಸದಸ್ಯರಾದ ನಾರಾಯಣಸ್ವಾಮಿ, ರಾಜಣ್ಣ, ಬಿ.ಎನ್ ಮುನಿಕೃಷ್ಣಪ್ಪ, ಶಾಲೆಯ ಮುಖ್ಯ ಶಿಕ್ಷಕ ಜಗನ್ನಾಥ ಚಾರಿ, ಶಿಕ್ಷಕರಾದ ಶ್ರೀನಿವಾಸ್, ಬಿ.ಸಿ ನಾರಾಯಣಸ್ವಾಮಿ, ಮಂಜುನಾಥ, ಚಂದ್ರಶೇಖರ್, ಲಕ್ಷ್ಮೀನಾರಾಯಣ, ಸುಧಾ, ಸೈಯದ್ ಆಲಿ, ರಶ್ಮಿ, ಗಿರಿಜ, ಅಂಬರೀಶ್, ಹೀನಾ ಕೌಸರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.