ADVERTISEMENT

‘ಮೇರೆ ಮೀರಿದ ಬಿಜೆಪಿ ದ್ವೇಷದ ರಾಜಕಾರಣ’

ಸೋನಿಯಾ ಗಾಂಧಿ ಇ.ಡಿ ವಿಚಾರಣೆ ವಿರೋಧಿಸಿ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 7:59 IST
Last Updated 23 ಜುಲೈ 2022, 7:59 IST
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನುಇ.ಡಿ ವಿಚಾರಣೆಗೆ ಒಳಪಡಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು
ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನುಇ.ಡಿ ವಿಚಾರಣೆಗೆ ಒಳಪಡಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು   

ಚಿಕ್ಕಬಳ್ಳಾಪುರ:ನ್ಯಾಷನಲ್‌ ಹೆರಾಲ್ಡ್‌ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು (ಇ.ಡಿ) ವಿಚಾರಣೆಗೆ ಒಳಪಡಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್‌ ನಾಯಕರು ಮತ್ತು ಕಾರ್ಯಕರ್ತರು ಶುಕ್ರವಾರ ನಗರದ ಶಿಡ್ಲಘಟ್ಟ ವೃತ್ತದಲ್ಲಿ ಧರಣಿ ನಡೆಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ಹೊರಟ ಕಾರ್ಯಕರ್ತರು ‘ಬ್ರಿಟಿಷರ ಕ್ಷಮೆ ಕೇಳಿದ ಸಂತತಿಯಲ್ಲ, ಬ್ರಿಟಿಷರನ್ನು ದೇಶದಿಂದ ಓಡಿಸಿದ ಸಂತತಿ’, ‘ಕಾಂಗ್ರೆಸ್‌ ನಾಯಕರ ತೇಜೋವಧೆಗೆ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಿಜೆಪಿಗೆ ಧಿಕ್ಕಾರ’ ಎನ್ನುವ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆಗಳನ್ನು ಕೂಗಿದರು.ಬಿಜೆಪಿಯ ದ್ವೇಷದ ರಾಜಕಾರಣ ಮೇರೆ ಮೀರಿದೆ. ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಿಡ್ಲಘಟ್ಟ ವೃತ್ತದಲ್ಲಿ ಸಮಾವೇಶಗೊಂಡರು. ಈ ವೇಳೆಜಿಲ್ಲಾ ಕಾಂಗ್ರೆಸ್ ಉಸ್ತುವಾರಿ ವಿ.ಎಸ್.ಉಗ್ರಪ್ಪ ಮಾತನಾಡಿ,ವಿರೋಧ ಪಕ್ಷಗಳ ನಾಯಕರನ್ನು ಗುರಿಯಾಗಿಸಿಕೊಂಡು ಬಿಜೆಪಿ ಸೇಡಿನ ರಾಜಕಾರಣ ಮಾಡುತ್ತಿದೆ. ಅದರಲ್ಲಿಯೂ ಪ್ರಮುಖವಾಗಿ ಕಾಂಗ್ರೆಸ್ ನಾಯಕರನ್ನು ಗುರಿ ಮಾಡಲಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದರು.

ADVERTISEMENT

ಪ್ರಧಾನಿ ಮೋದಿ ತಾವು ನೀಡಿದ್ದ ಯಾವುದೇ ಆಶ್ವಾಸನೆಯನ್ನು ಈಡೇರಿಸಿಲ್ಲ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ, ಅಡುಗೆ ಎಣ್ಣೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಹೆಚ್ಚಿದೆ. ಆದರೆ ಈ ಬಗ್ಗೆ ಮಾತನಾಡುವ ಧೈರ್ಯ ಬಿಜೆಪಿ ನಾಯಕರಿಗೆ ಇಲ್ಲ ಎಂದು ಟೀಕಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಮನೆಯಲ್ಲಿ ಇದ್ದಿದ್ದರೆ ಗ್ಯಾಸ್ ಬೆಲೆ ಹೆಚ್ಚಾಯಿತು. ಜೀವನ ನಡೆಸುವುದು ಕಷ್ಟ ಎಂದು ಕಿವಿ ಹಿಂಡುತ್ತಿದ್ದರು. ರಾಮ ತನ್ನ ಪತ್ನಿಗಾಗಿ ಯುದ್ಧವನ್ನೇ ಮಾಡಿದ. ಆದರೆ ರಾಮಭಕ್ತರು ಎನ್ನುವ ಬಿಜೆಪಿಯವರಿಗೆ ತಮ್ಮ ಶ್ರೀಮತಿಯವರನ್ನೇ ರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಕುಟುಕಿದರು.

ಬಿಜೆಪಿಜನರ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ. ದಿನದಿಂದ ದಿನಕ್ಕೆ ಪ್ರಸಿದ್ಧಿ ಕಳೆದುಕೊಳ್ಳುತ್ತಿದೆ. ಮುಂದಿನ ಚುನಾವಣೆಗಳಲ್ಲಿ ನರೇಂದ್ರ ಮೋದಿ ನಾಯಕತ್ವಕ್ಕೆ ಬೆಂಬಲ‌ ನೀಡುವುದಿಲ್ಲ ಎನ್ನುವುದು ಖಾತ್ರಿ ಆಗಿದೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳನ್ನು ಕುಗ್ಗಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.ನ್ಯಾಷನಲ್‌ ಹೆರಾಲ್ಡ್‌ ವಿಚಾರವಾಗಿಹಣ ದುರ್ಬಳಕೆ ಆಗಿದೆ ಎಂದು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ದುರುದ್ದೇಶಪೂರಿತವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ದೂರಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಮಾತನಾಡಿ, ಹಿಂದೂ ಮಹಾಸಭಾ, ಆರ್‌ಎಸ್‌ಎಸ್‌ನವರು ಈ ಹಿಂದೆ ಮುಸ್ಲಿಂ ಲೀಗ್ ಜತೆ ಸೇರಿ ಸರ್ಕಾರ ರಚಿಸಿದ್ದಾರೆ. ಹೆಡಗೇವಾರ್ ಬ್ರಿಟಿಷ್ ಸೇನೆ ಸೇರಿಸಿಕೊಳ್ಳಿ ಎಂದಿದ್ದರು. ಸಾವರ್ಕರ್ ಬ್ರಿಟಿಷರಿಗೆ ಕ್ಷಮಾಪಣೆ ಬರೆದುಕೊಟ್ಟಿದ್ದರು. ಇಂತಹವರು ಬಿಜೆಪಿಯವರ ಪೂರ್ವಜರು ಎಂದು ಟೀಕಿಸಿದರು.

ಶಾಸಕ ಸುಬ್ಬಾರೆಡ್ಡಿ ಮಾತನಾಡಿದರು. ಶಾಸಕ ವಿ.ಮುನಿಯಪ್ಪ, ಮಾಜಿ ಶಾಸಕ‌ ಎಸ್‌.ಎಂ.ಮುನಿಯಪ್ಪ, ಅನಸೂಯಮ್ಮ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೇಶವರೆಡ್ಡಿ, ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಉದಯ್ ಕುಮಾರ್, ಮುಖಂಡ ಯಲುವಳ್ಳಿ ರಮೇಶ್, ನಂದಿ ಆಂಜನಪ್ಪ, ಮಮತಾ ಮೂರ್ತಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.