ADVERTISEMENT

ರೋಹಿತ್ ಚಕ್ರತೀರ್ಥ ಕ್ಷಮೆ ಕೇಳದಿದ್ದರೆ ಪ್ರತಿಭಟನೆ

ಚಿಕ್ಕಬಳ್ಳಾಪುರ ತಾಲ್ಲೂಕು ಸಮಾನ ಮನಸ್ಕರ ವೇದಿಕೆ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ಮೇ 2022, 16:28 IST
Last Updated 28 ಮೇ 2022, 16:28 IST

ಚಿಕ್ಕಬಳ್ಳಾಪುರ: ನಾಡಗೀತೆಯನ್ನು ವಿಕೃತಗೊಳಿಸಿ ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಿರುವ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಮೇ 31ರ ಒಳಗೆ ಕ್ಷಮೆ ಕೋರಬೇಕು. ಇಲ್ಲದಿದ್ದರೆ ಜಿಲ್ಲಾ ಕೇಂದ್ರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಚಿಕ್ಕಬಳ್ಳಾಪುರ ತಾಲ್ಲೂಕು ಸಮಾನ ಮನಸ್ಕರ ವೇದಿಕೆ ಮುಖಂಡರು ತಿಳಿಸಿದರು.

ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷ ಯಲುವಳ್ಳಿ ರಮೇಶ್, ‘ಮನೆಗೆ ಅಡಿಪಾಯ ಹಾಕಿದ ರೀತಿಯಲ್ಲಿ ಮಕ್ಕಳ ಶಿಕ್ಷಣಕ್ಕೆ ಉತ್ತಮ ಬುನಾದಿ ಅಗತ್ಯ. ವಿಜ್ಞಾನಿಗಳು, ಸಾಹಿತಿಗಳು, ಮಹನೀಯರ ವಿಚಾರಗಳನ್ನು ಪ್ರಾಥಮಿಕ ಶಿಕ್ಷಣದಲ್ಲಿ ಪಠ್ಯವಾಗಿ ನೀಡುವ ವ್ಯವಸ್ಥೆ ಇದೆ. ಆದರೆ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ರೋಹಿತ್ ಚಕ್ರತೀರ್ಥ ಅವರಂತಹ ಹುಚ್ಚನನ್ನು ರಾಜ್ಯ ಸರ್ಕಾರ ಅಧ್ಯಕ್ಷನನ್ನಾಗಿಸಿದೆ. ಈ ಸಮಿತಿ ಮಹನೀಯರ ವಿಚಾರಗಳನ್ನೇ ಪಠ್ಯದಿಂದ ತೆಗೆದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾಡಗೀತೆಯನ್ನು ತಿರುಚಿ ಕುವೆಂಪು ಅವರಿಗೆ ಅವಮಾನ ಮಾಡಿದ್ದಾರೆ. ಇಂತಹವರು ರೂಪಿಸುವ ಪಠ್ಯಪುಸ್ತಕ ಮಕ್ಕಳ ಮನದಲ್ಲಿ ವಿಷ ಬಿತ್ತುತ್ತದೆ. ಪಠ್ಯಪುಸ್ತಕವನ್ನು ಕೇಸರೀಕರಣ ಮಡಲು ಬಿಜೆಪಿ ಹೊರಟಿದೆ ಎಂದು ದೂರಿದರು.

ADVERTISEMENT

ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಿಂದ ರೋಹಿತ್ ಚಕ್ರತೀರ್ಥ ಅವರನ್ನು ಕೈಬಿಡಬೇಕು. ನಾಡಗೀತೆ ವಿಕೃತಗೊಳಿಸಿದ ವಿಚಾರವಾಗಿ ಮೇ 31ರ ಒಳಗೆ ಅವರು ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಜಿಲ್ಲಾ ಕೇಂದ್ರದಲ್ಲಿ ಜಾತ್ಯತೀತ ಮತ್ತು ಪಕ್ಷಾತೀತವಾಗಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು.

ಈ ಸಮಿತಿಯು ರಚಿಸಿರುವ ಪಠ್ಯಪುಸ್ತಕಗಳನ್ನು ಮಕ್ಕಳಿಗೆ ನೀಡಬಾರದು. ಹಳೇ ಪಠ್ಯಪುಸ್ತಕಗಳನ್ನೇ ನೀಡಬೇಕು. ಸಮಿತಿಯನ್ನು ರದ್ದುಗೊಳಿಸದಿದ್ದರೆ ಬೀದಿಗಿಳಿದು ಪ್ರತಿಭಟಿಸುತ್ತೇವೆ ಎಂದರು.

ಮಾಜಿ ಶಾಸಕ ಎಸ್‌.ಎಂ. ಮುನಿಯಪ್ಪ ಮಾತನಾಡಿ,ಆರ್‌ಎಸ್‌ಎಸ್ ಈಗ ಪಠ್ಯದ ವಿಚಾರಕ್ಕೂ ಕೈ ಹಾಕಿದೆ. ಇದು ದೇಶಕ್ಕೆ ಗಂಡಾಂತರ ಕಾದಿದೆ ಎನ್ನುವುದರ ಸೂಚನೆ. ಕುವೆಂಪು ಅವರು ವಿಶ್ವಮಾನವ ತತ್ವವನ್ನು ಪ್ರತಿಪಾದಿಸಿದರು ಎಂದು ಹೇಳಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರ ಬಡವರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿ ಚಿಂತಿಸುತ್ತಿಲ್ಲ. ಇವರಿಗೆ ಧರ್ಮ ಮತ್ತು ಧಾರ್ಮಿಕ ವಿಚಾರಗಳೇ ಮುಖ್ಯವಾಗಿವೆ ಎಂದರು.

ಮುಖಂಡಕೆ.ಆರ್. ರೆಡ್ಡಿ ಮಾತನಾಡಿ, ದೇಶ ಮತ್ತು ರಾಜ್ಯದಲ್ಲಿ ಜಾತ್ಯತೀತ ತತ್ವಗಳನ್ನು ಬೆಳೆಸಬೇಕು. ಆದರೆ, ಬಿಜೆಪಿ ಸರ್ಕಾರ ಕೇಸರಿಕರಣ ಮಾಡಲು ಹೊರಟಿದೆ. ಕುವೆಂಪು ಅವರನ್ನು ಜಾತ್ಯತೀತವಾಗಿ ಜನರು ಗೌರವಿಸುವರು. ನಾಡಗೀತೆಗೆ ಅಪಮಾನ ಮಾಡುವುದು ರಾಜ್ಯಕ್ಕೆ ದ್ರೋಹ ಬಗೆದಂತೆ ಎಂದರು.

ಹನುಮಂತಪ್ಪ ಮಾತನಾಡಿ, ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯಲ್ಲಿ 9 ಜನರು ಆರ್‌ಎಸ್‌ಎಸ್ ಬ್ರಾಹ್ಮಣರು ಇದ್ದಾರೆ. ನಾವು ಬ್ರಾಹ್ಮಣ ಸಮುದಾಯದ ವಿರೋಧಿಗಳಲ್ಲ. ಅವರಲ್ಲಿಯೂ ಜಾತ್ಯತೀತರು ಇದ್ದಾರೆ. ಆದರೆ, ಆರ್‌ಎಸ್‌ಎಸ್ ಬ್ರಾಹ್ಮಣರು ಅಪಾಯ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಸವತತ್ವದ ಹಿನ್ನೆಲೆಯವರು. ಇಂತಹವರು ಆರ್‌ಎಸ್‌ಎಸ್ ಸಮರ್ಥಿಸುವುದು ಒಳ್ಳೆಯದಲ್ಲ. ಮುಖ್ಯಮಂತ್ರಿ ಬಸವತತ್ವವನ್ನು ಮರೆತಿದ್ದಾರೆ ಎಂದು ಹನುಮಂತಪ್ಪ ಹೇಳಿದರು.

ವೇದಿಕೆ ಮುಖಂಡರಾದ ಲಕ್ಷ್ಮಯ್ಯ, ಮಂಚನಬಲೆ ಶ್ರೀನಿವಾಸ್, ಶ್ರೀಧರ್, ಆನಂದಪ್ಪ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.