ADVERTISEMENT

ಕುಡಿಯುವ ನೀರಿಗಾಗಿ ಗ್ರಾಮಸ್ಥರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 4:47 IST
Last Updated 11 ಅಕ್ಟೋಬರ್ 2020, 4:47 IST
ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಗ್ರಾಮ ಪಂಚಾಯಿತಿ ಮುಂದೆ ಗುಟ್ಟಮೀದಪಲ್ಲಿ ಗ್ರಾಮಸ್ಥರು ಪ್ರತಿಭಟಿಸಿದರು
ಬಾಗೇಪಲ್ಲಿ ತಾಲ್ಲೂಕಿನ ಪಾತಪಾಳ್ಯ ಗ್ರಾಮ ಪಂಚಾಯಿತಿ ಮುಂದೆ ಗುಟ್ಟಮೀದಪಲ್ಲಿ ಗ್ರಾಮಸ್ಥರು ಪ್ರತಿಭಟಿಸಿದರು   

ಬಾಗೇಪಲ್ಲಿ: ತಾಲ್ಲೂಕಿನ ಗುಟ್ಟಮೀದಪಲ್ಲಿ ಗ್ರಾಮದಲ್ಲಿ 10 ದಿನಗಳಿಂದ ಕುಡಿಯುವ ನೀರು ಸರಬರಾಜು ಆಗುತ್ತಿಲ್ಲ ಎಂದು ಆರೋಪಿಸಿ, ಗ್ರಾಮಸ್ಥರು ಶನಿವಾರ ಖಾಲಿ ಕೊಡಗಳನ್ನು ಹಿಡಿದು ಪಾತಪಾಳ್ಯ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟಿಸಿದರು.

‘ಗುಟ್ಟಮೀದಪಲ್ಲಿ ಗ್ರಾಮದಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿರವರು ಕೊಳವೆಬಾವಿ ಕೊರೆಯಿಸಿದ್ದಾರೆ. ಆದರೆ ಗ್ರಾಮ ಪಂಚಾಯಿತಿಯವರು ಕೊಳವೆಬಾವಿಗೆ ಹಳೇ ಪಂಪ್, ಮೋಟರ್ ಹಾಕಿದ್ದಾರೆ. ಮೋಟರ್, ಪಂಪ್ ಕೆಟ್ಟು 10 ದಿನಗಳು ಕಳೆದಿದೆ. ಗ್ರಾಮದಲ್ಲಿ ಕುಡಿಯುವ ನೀರಿಗೆ ತೊಂದರೆ ಆಗಿದೆ. ಪಕ್ಕದ ಗ್ರಾಮಗಳಿಂದ ದ್ವಿಚಕ್ರ, ಸೈಕಲ್‌ಗಳನ್ನು ನೀರನ್ನು ಹೊತ್ತು ತರಬೇಕಾಗಿದೆ. ಪಂಚಾಯಿತಿಯವರು ಪಂಪ್, ಮೋಟಾರ್ ಹಾಕಿಸಿಕೊಡಿ ಎಂದು ಮನವಿ ಮಾಡಿದರೂ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ’ ಎಂದು ಗ್ರಾಮಸ್ಥ ಜಿ.ಕೆ.ನಾಗರಾಜ್ ಆರೋಪಿಸಿದರು.

‘ಗ್ರಾಮದಲ್ಲಿ ಕೊಳವೆಬಾವಿ ಇದ್ದರೂ, ಪಂಚಾಯಿತಿ ಅಧಿಕಾರಿಗಳು ಪಂಪ್ ಮೋಟರ್ ಹಾಕಿಸಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾರಾಯಣ, ಇದೀಗ ನರೇಗಾ ತಾಲ್ಲೂಕು ಪ್ರಭಾರಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಂಚಾಯಿತಿಯಲ್ಲಿನ ಸಮಸ್ಯೆಗಳನ್ನು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಕುಡಿಯುವ ನೀರು ಕಲ್ಪಿಸಿಕೊಡಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದರೂ, ಅಧಿಕಾರಿಗಳು ಗಮನಹರಿಸಿಲ್ಲ. ಗ್ರಾಮದಲ್ಲಿ ಶುದ್ಧ ನೀರಿನ ಘಟಕವು ಇದೆ. ಆದರೆ ನೀರು ಸರಬರಾಜು ಆಗದಿರುವುದರಿಂದ, ಗ್ರಾಮಸ್ಥರು ಫ್ಲೋರೈಡ್‌ ನೀರು ಕುಡಿಯಬೇಕಾಗಿದೆ’ ಎಂದು ಜಿ.ಬಿ.ಶ್ರೀನಿವಾಸರೆಡ್ಡಿ ದೂರಿದರು.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ಪಾತಪಾಳ್ಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ ರತ್ನಯ್ಯ ಬಂದು, ಪ್ರತಿಭಟನಾಕಾರರೊಂದಿಗೆ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುವುದು ಎಂದು ಅಭಿವೃದ್ಧಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ನಂತರ, ಗ್ರಾಮಸ್ಥರು ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ತಿಪ್ಪಾರೆಡ್ಡಿ, ಬೈರೆಡ್ಡಿ, ಕಿಟ್ಟಪ್ಪ, ಹರೀಶ್, ಮಾರಪರೆಡ್ಡಿ, ಮುನಿರಾಜ, ಕೆ.ಎಂ.ವೆಂಕಟರಾಮರೆಡ್ಡಿ, ಕೃಷ್ಣಾರೆಡ್ಡಿ, ವೆಂಕಟೇಶ್, ಮೂತರ್ಿ, ಶಿವಪ್ಪ, ಆದಿಲಕ್ಷ್ಮಮ್ಮ, ಗೌರಮ್ಮ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.