ADVERTISEMENT

ಕಾರ್ಮಿಕ ಕಚೇರಿ ಮುಂದೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2021, 4:14 IST
Last Updated 1 ಜುಲೈ 2021, 4:14 IST
ಬಾಗೇಪಲ್ಲಿ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಚೇರಿ ಮುಂದೆ ಕಟ್ಟಡ ಕಾರ್ಮಿಕರ ಸಂಘದ ಮುಖಂಡರು, ಕಾರ್ಮಿಕರು ಪ್ರತಿಭಟನೆ ಮಾಡಿದರು
ಬಾಗೇಪಲ್ಲಿ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಚೇರಿ ಮುಂದೆ ಕಟ್ಟಡ ಕಾರ್ಮಿಕರ ಸಂಘದ ಮುಖಂಡರು, ಕಾರ್ಮಿಕರು ಪ್ರತಿಭಟನೆ ಮಾಡಿದರು   

ಬಾಗೇಪಲ್ಲಿ: ಕಾರ್ಮಿಕ ಇಲಾಖೆಯಲ್ಲಿ ನೊಂದಾಯಿತ ಕಾರ್ಮಿಕರಿಗೆ ಗುರುತಿನ ಚೀಟಿ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು ಕಟ್ಟಡ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ (ಸಿಐಟಿಯು ನಿಯೋಜಿತ)ದ ಕಾರ್ಯಕರ್ತರು ಮಂಗಳವಾರ ತಾಲ್ಲೂಕು ಕಾರ್ಮಿಕ ನಿರೀಕ್ಷಕರ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಕಟ್ಟಡ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಆಂಜನೇಯರೆಡ್ಡಿ ಮಾತನಾಡಿ, ಲಾಕ್‌ಡೌನ್ ಅವಧಿಯಲ್ಲಿ ಕೂಲಿಕಾರ್ಮಿಕರಿಗೆ ಕೂಲಿ ಸಿಗದೇ ಊಟಕ್ಕೆ ಪರದಾಡಿದ್ದಾರೆ. ಸರ್ಕಾರ ಕಾರ್ಮಿಕ ಇಲಾಖೆಯ ಮೂಲಕ ಆಹಾರ ಕಿಟ್ ವಿತರಣೆ ಮಾಡಿದರೂ, ತಾಲ್ಲೂಕಿನ ಕಾರ್ಮಿಕರಿಗೆ ಕಿಟ್ ವಿತರಿಸಿಲ್ಲ. ತಾಲ್ಲೂಕಿನಲ್ಲಿ 6 ಸಾವಿರ ಮಂದಿ ಕಟ್ಟಡ ಕಾರ್ಮಿಕರು ತಮ್ಮ ಹೆಸರು ನೊಂದಾಯಿಸಿದ್ದಾರೆ. ಈ ಕೂಡಲೇ ಎಲ್ಲ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಣೆ ಮಾಡಬೇಕು. ಆಹಾರದ ಕಿಟ್ ವಿತರಿಸಬೇಕು
ಎಂದರು.

ಅಸಂಘಟಿತ 11 ವರ್ಗದ ಕಾರ್ಮಿಕರಿಗೆ ಘೋಷಣೆ ಮಾಡಿರುವ ಸೌಲಭ್ಯ ದೊರೆತಿಲ್ಲ. ಕುಂಬಾರರು, ಭಜಂತ್ರಿ, ಅಕ್ಕಸಾಲಿಗರು, ಟೈಲರಿಂಗ್, ಮೆಕಾನಿಕ್ ಹಾಗೂ ಆಟೊ ಚಾಲಕರಿಗೆ ಪರಿಹಾರ ನೀಡಿಲ್ಲ. ಕೂಡಲೇ ಅಸಂಘಟಿತ ಕಾರ್ಮಿಕರಿಗೆ ಪರಿಹಾರ ನೀಡಬೇಕು. ನೊಂದಾಯಿತಿ ಕಟ್ಟಡ ಕಾರ್ಮಿಕರಿಗೆ ವಿದ್ಯಾರ್ಥಿ ವೇತನ, ಮರಣ, ಹೆರಿಗೆ ಪರಿಹಾರದ ಹಣ ಸೇರಿದಂತೆ ಕಾರ್ಮಿಕ ಇಲಾಖೆಯ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು.

ADVERTISEMENT

ಪ್ರತಿಭಟನಾ ಸ್ಥಳಕ್ಕೆ ತಾಲ್ಲೂಕು ಕಾರ್ಮಿಕ ನಿರೀಕ್ಷಕಿ ಕಲಾವಾಣಿ ಆಗಮಿಸಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದರು.

ಸಿಐಟಿಯು ತಾಲ್ಲೂಕು ಕಾರ್ಯದರ್ಶಿ ಜಿ.ಮುಸ್ತಾಫ, ಮುಖಂಡರಾದ ಎಚ್.ಎ.ರಾಮಲಿಂಗಪ್ಪ, ಮುನಿಯಪ್ಪ, ಬಿ.ಎನ್.ಗಂಗಾಧರ, ಬಿ.ಟಿ.ಭಾಸ್ಕರ ರೆಡ್ಡಿ, ಅನಿಲ್ ಕುಮಾರ್, ಶಿವಪ್ಪ, ವೆಂಕಟವಣಪ್ಪ, ಗಂಗಾಧರ, ಮಂಜುನಾಥ್, ಮುನಿಯಪ್ಪ, ನಾರಾಯಣನಾಯಕ್, ನರಸಿಂಹಪ್ಪ, ನಾರಾಯಣಮ್ಮ, ಸಂಧ್ಯಾರಾಣಿ, ಮದೀನಾತಾಜ್, ಗೌರಮ್ಮ, ಶಿವಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.