ಚಿಕ್ಕಬಳ್ಳಾಪುರ: ಲಂಚ ಕೇಳಿದ ಆರೋಪ ಎದುರಿಸುತ್ತಿದ್ದ ಬಾಗೇಪಲ್ಲಿ ತಾಲ್ಲೂಕು ಪಾತಪಾಳ್ಯ ಪೊಲೀಸ್ ಠಾಣೆ ಪಿಎಸ್‌ಐ ರತ್ನಯ್ಯ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಕೆಲಸದಿಂದ ಅಮಾನತುಗೊಳಿಸಿದ್ದಾರೆ.
ಲಕ್ಷ ಲಕ್ಷ ದುಡಿಯುತ್ತೀರಿ. ಅದರಲ್ಲಿ ಸ್ವಲ್ಪ ನಮಗೆ ಕೊಡುವುದಕ್ಕೆ ಏನು? ಹಣ ಕೊಟ್ಟರೆ ಕೆಲಸ. ಇಲ್ಲದಿದ್ದರೆ ಕೇಸ್ ಹಾಕುತ್ತೇವೆ ಎಂದು ರತ್ನಯ್ಯ ಮಾತನಾಡಿರುವ ಆಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ನಾಲ್ಕೈದು ಮಂದಿಗೆ ರತ್ನಯ್ಯ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅವರು ಈ ಆಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾರೆ ಎನ್ನಲಾಗುತ್ತಿದೆ.
ವ್ಯಕ್ತಿಯೊಬ್ಬರು ವಿದೇಶಕ್ಕೆ ತೆರಳಲು ಪಾಸ್‌ಪೋರ್ಟ್ ಮಾಡಿಸಬೇಕಾಗಿತ್ತು. ಇವುಗಳ ದಾಖಲೆ ಪರಿಶೀಲನೆ ವೇಳೆ ಈ ರತ್ನಯ್ಯ ಈ ಮಾತು ಹೇಳಿದ್ದಾರೆ. ಠಾಣೆಯ ಜೀಪ್ ದುರಸ್ತಿಗೆ ಜನರಿಂದ ಹಣ ಕೇಳಿದ್ದು, ಮುಟ್ಟುಗೋಲು ಹಾಕಿಕೊಂಡ ಬೈಕ್‌ಗಳನ್ನು ಮಾಲೀಕರಿಗೆ ಹಿಂದಿರುಗಿಸುವ ಸಂಧರ್ಭದಲ್ಲಿ ಹಣ ಕೇಳಿದ್ದ ಆಡಿಯೊಗಳು ಸಹ ವೈರಲ್ ಆಗಿದ್ದವು. ಲಂಚಕ್ಕೆ ಬೇಡಿಕೆ ಇಡುತ್ತಾರೆ ಎಂದು ಆ.30ರಂದು ರತ್ನಯ್ಯ ವಿರುದ್ಧ ಸಾರ್ವಜನಿಕರು ಠಾಣೆಯ ಮುಂದೆ ಪ್ರತಿಭಟಿಸಿದ್ದರು.
ಈಗ ಮತ್ತೊಂದು ಆಡಿಯೊ ವೈರಲ್ ಆಗಿತ್ತು. ಈ ಎಲ್ಲ ವಿಷಯವನ್ನು ಸಾರ್ವಜನಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗಮನಕ್ಕೆ ತಂದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.