
ಬಾಗೇಪಲ್ಲಿ: ಕಂದಾಯ ಇಲಾಖೆ, ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಯಲ್ಲಂಪಲ್ಲಿ ಗ್ರಾಮ ಪಂಚಾಯಿತಿ ಸಂಯುಕ್ತ ಆಶ್ರಯದಲ್ಲಿ ತಾಲ್ಲೂಕಿನ ಆಚೇಪಲ್ಲಿ ಗ್ರಾಮದಲ್ಲಿ ಮಂಗಳವಾರ ಸಾರ್ವಜನಿಕ ಕುಂದುಕೊರತೆಗಳ ಜನಸ್ಪಂದನಾ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ 4,000 ಫಲಾನುಭವಿಗಳಿಗೆ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಸರ್ಕಾರದ ಯೋಜನೆಗಳನ್ನು ವಿತರಿಸಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಬ್ಯಾಗು, ಪುಸ್ತಕ, ಪೆನ್ ಲೇಖನಿ ಸಾಮಗ್ರಿಗಳು, ಟಾರ್ಪಲ್ ವಿತರಿಸಲಾಯಿತು. ಕೈಗಾರಿಕಾ ಇಲಾಖೆಯಿಂದ ಸೀವಿಂಗ್ ಸುಧಾರಿತ ಯಂತ್ರೋಪಕರಣಗಳು, ತೋಟಗಾರಿಕೆ ಇಲಾಖೆಯಿಂದ ಸೋಲಾರ್ ಪಂಪ್‍ಸೆಟ್, ಈರುಳ್ಳಿ ಶೇಖರಣೆ ಘಟಕ, ಕೃಷಿಹೊಂಡ, ಬ್ಲೋವರ್, ಮಾವು ಪುನಃಶ್ಚೇತನ, ಮಾವು ಹೊಸ ಪ್ರದೇಶ ವಿಸ್ತರಣೆ, ಪಾಲಿಹೌಸ್, ಪಶು ಇಲಾಖೆಯಿಂದ ಔಷಧಗಳಿಗೆ ಆದೇಶ ಪತ್ರ ಹಾಗೂ ಆರೋಗ್ಯ ಇಲಾಖೆಯಿಂದ ಜಂತುನಾಶಕ ಔಷಧಗಳು ಮತ್ತು 100 ಮಂದಿಗೆ ಸ್ಟೆಕ್ಟರ್ ಆರೋಗ್ಯ ಚೀಟಿಗಳನ್ನು ನೀಡಲಾಯಿತು.
ಸರ್ವೆ ಇಲಾಖೆಯಿಂದ 250 ಮಂದಿಗೆ ಪೋಡಿ ಮುಕ್ತ ಪ್ರಕರಣಗಳು, 1600 ಮಂದಿಗೆ ಪಿಂಚಿಣಿ, ಸಾಗುವಳಿ ಚೀಟಿಯ ಖಾತೆ, ದುರಸ್ತಿ ಪೋಡಿ, ಹಕ್ಕುಪತ್ರಗಳು, ಗೂಳೂರು, ಶಂಖಂವಾರಿಪಲ್ಲಿ, ಲಗುಮದ್ದೇಪಲ್ಲಿ, ಬಿಳ್ಳೂರು ಗ್ರಾಮಗಳಲ್ಲಿ ಸ್ಮಶಾನಕ್ಕೆ ಭೂಮಿ ಮಂಜೂರಾತಿ, ಕುಂಬಾರ ಸಮುದಾಯದ ಭವನಕ್ಕೆ ಜಮೀನು ಮಂಜೂರಾತಿ, ನೀರಗಂಟಿಪಲ್ಲಿ, ಕಾನಗಮಾಕಲಪಲ್ಲಿ, ನಾರಾಯಣಸ್ವಾಮಿ ಕೋಟೆ, ಸಜ್ಜುಪಲ್ಲಿ, ಯಲ್ಲಂಪಲ್ಲಿ ನಲ್ಲಪರೆಡ್ಡಿಪಲ್ಲಿ, ಪರಗೋಡು ಆಶ್ರಯ ಭೂಮಿ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.
ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಮಾತನಾಡಿ, ಪಂಚಾಯಿತಿವಾರು ಜನಸ್ಪಂದನಾ ಕಾರ್ಯಕ್ರಮಗಳಲ್ಲಿ ಸರ್ಕಾರಗಳ ಯೋಜನೆಗಳನ್ನು ನೇರವಾಗಿ ಅರ್ಹ ಫಲಾನುಭವಿಗಳಿಗೆ ತಲುಪಿಸಲಾಗಿದೆ. ಸರ್ಕಾರದ ಯಾವುದೇ ಯೋಜನೆಗಳ ಫಲಾನುಭವಿಯಾಗಲು ಮಧ್ಯವರ್ತಿಗಳ ಮೊರೆ ಹೋಗಬಾರದು ಎಂದು ಸಲಹೆ ನೀಡಿದರು.
ಸರ್ಕಾರಿ ಯೋಜನೆಗಳನ್ನು ಪಡೆಯಲು ನೇರವಾಗಿ ಸರ್ಕಾರಿ ಕಚೇರಿಗಳ ಅಧಿಕಾರಿಗಳು ಅಥವಾ ಬುಧವಾರ ತಮ್ಮ ಮನೆಯಲ್ಲಿನ ಜನತಾ ದರ್ಶನಕ್ಕೆ ಬರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮನೀಷಾ ಎಸ್. ಪತ್ರಿ, ಇಒ ಜಿ.ವಿ.ರಮೇಶ್, ಸರ್ಕಲ್ ಇನ್‌ಸ್ಪೆಕ್ಟರ್ ಪ್ರಶಾಂತ್ ವರ್ಣಿ, ಎನ್.ವೆಂಕಟೇಶಪ್ಪ, ಡಾ.ಟಿ.ಎನ್.ಸತ್ಯನಾರಾಯಣರೆಡ್ಡಿ, ಸರಸ್ವತಮ್ಮ, ಪಿಡಿಒ ನಾರಾಯಣಸ್ವಾಮಿ, ಮಂಜುನಾಥರೆಡ್ಡಿ, ಲಕ್ಷ್ಮಿನರಸಿಂಹಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.