ADVERTISEMENT

ಪಲ್ಸ್ ಪೋಲಿಯೊ: ಶೇ 94ರಷ್ಟು ಗುರಿ ಸಾಧನೆ

ಜಿಲ್ಲೆಯ 1.23 ಲಕ್ಷ ಮಕ್ಕಳ ಪೈಕಿ 1.16 ಲಕ್ಷ ಮಕ್ಕಳಿಗೆ ಪೋಲಿಯೊ ಹನಿ ಹಾಕಿದ ಆರೋಗ್ಯ ಇಲಾಖೆ ಸಿಬ್ಬಂದಿ

​ಪ್ರಜಾವಾಣಿ ವಾರ್ತೆ
Published 19 ಜನವರಿ 2020, 14:36 IST
Last Updated 19 ಜನವರಿ 2020, 14:36 IST
ನಗರದಲ್ಲಿ ತೆರೆದ ಬೂತ್‌ವೊಂದರಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮಗುವಿಗೆ ಪೋಲಿಯೊ ಹನಿ ಹಾಕಿದರು.
ನಗರದಲ್ಲಿ ತೆರೆದ ಬೂತ್‌ವೊಂದರಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಮಗುವಿಗೆ ಪೋಲಿಯೊ ಹನಿ ಹಾಕಿದರು.   

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಭಾನುವಾರ ನಡೆದ ಪ್ರಸಕ್ತ ಸಾಲಿನ ಮೊದಲ ಸುತ್ತಿನ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಶೇ 94 ರಷ್ಟು ಗುರಿ ಸಾಧನೆಯಾಗಿದೆ.

‘ಜಿಲ್ಲೆಯಲ್ಲಿ 5 ವರ್ಷದೊಳಗಿನ 1,23,286 ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕುವ ಗುರಿ ಹೊಂದಲಾಗಿತ್ತು. ಆ ಪೈಕಿ ಭಾನುವಾರ 1,16,280 ಮಕ್ಕಳಿಗೆ ಹನಿ ಹಾಕಲಾಗಿದೆ. ಜ.22ರ ವರೆಗೆ ಹನಿ ಹಾಕಲಾಗುತ್ತದೆ. ಹೀಗಾಗಿ ಈ ಬಾರಿ ಶೇ100 ರಷ್ಟು ಪ್ರಗತಿ ಸಾಧಿಸುವ ವಿಶ್ವಾಸವಿದೆ’ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ಯೋಗೇಶ್‌ಗೌಡ ತಿಳಿಸಿದರು.

‘ಪೋಲಿಯೊ ಕಾರ್ಯಕ್ರಮಕ್ಕಾಗಿ ಜಿಲ್ಲೆಯಲ್ಲಿ 643 ಬೂತ್‌ಗಳನ್ನು ತೆರೆಯಲಾಗಿತ್ತು. 62 ಸಂಚಾರಿ ಬೂತ್‌ಗಳು ಕಾರ್ಯ ನಿರ್ವಹಿಸಿದವು. 35 ತಂಡಗಳನ್ನು ಕೂಡ ನಿಯೋಜಿಸಲಾಗಿತ್ತು. 2,572 ಲಸಿಕೆ ಹಾಕುವ ಸಿಬ್ಬಂದಿ, 131 ಮೇಲ್ವಿಚಾರಕರನ್ನು ನಿಯೋಜಿಸಲಾಗಿತ್ತು. ಅಸಂಘಟಿತ ವಲಯಗಳಾದ ಗುಳೆ ಕೆಲಸಗಾರರು, ಕ್ರಷರ್ ಕಾರ್ಮಿಕರು, ಕೂಲಿಗಾಗಿ ವಲಸೆ ಬಂದ ಕುಟುಂಬದ ಮಕ್ಕಳು ಪೋಲಿಯೊ ಲಸಿಕೆಯಿಂದ ವಂಚಿತರಾಗದಂತೆ ಸಂಚಾರಿ ತಂಡಗಳಿಗೆ ತಿಳಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಗ್ರಾಮೀಣ ಪ್ರದೇಶದಲ್ಲಿ ಮೂರು ಮತ್ತು ನಗರ ಪ್ರದೇಶದಲ್ಲಿ ನಾಲ್ಕು ದಿನ ಹನಿ ಹಾಕುವ ಕಾರ್ಯಕ್ರಮ ನಡೆಯಲಿದೆ. ಮೊದಲನೇ ದಿನ ಜಿಲ್ಲಾ ಲಸಿಕಾ ಕೇಂದ್ರಗಳಲ್ಲಿ ಹನಿ ಹಾಕಲಾಗುವುದು ಹಾಗೂ ಉಳಿದ ಮೂರು ದಿನಗಳು ಕಾರ್ಯಕರ್ತೆಯರು ಮನೆ ಮನೆಗಳಿಗೆ ಭೇಟಿ ನೀಡಿ ಲಸಿಕಾ ಕೇಂದ್ರಗಳಲ್ಲಿ ಹನಿ ಹಾಕಿಸಿಕೊಳ್ಳದಿರುವಂತಹ ಮಕ್ಕಳಿಗೆ ಹನಿ ಹಾಕಲಿದ್ದಾರೆ’ ಎಂದರು.

ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಭಾನುವಾರ ಜಿಲ್ಲಾಧಿಕಾರಿ ಆರ್.ಲತಾ ಅವರು ಮಕ್ಕಳಿಗೆ ಪಲ್ಸ್ ಪೋಲಿಯೊ ಹನಿ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ‘ಪೋಲಿಯೊ ರೋಗವನ್ನು ಸಂಪೂರ್ಣವಾಗಿ ತಡೆಗಟ್ಟುವ ನಿಟ್ಟಿನಲ್ಲಿ 5 ವರ್ಷದೊಳಗಿನ ಮಕ್ಕಳಿಗೆ ಪೋಷಕರು ತಪ್ಪದೆ ಪೋಲಿಯೊ ಹನಿ ಹಾಕಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಬಿ.ಎಂ.ಯೋಗೇಶ್ ಗೌಡ, ಜಿಲ್ಲಾ ಶಸ್ತ್ರಚಿಕಿತ್ಸಕ ಅನೀಲ್ ಕುಮಾರ್, ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ.ಚನ್ನಕೇಶವರೆಡ್ಡಿ, ನಿವಾಸಿ ವ್ಶೆದ್ಯಾಧಿಕಾರಿ ರಮೇಶ್ ಈ ಸಂದರ್ಭದಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.