ADVERTISEMENT

ಡಿಕೆಶಿ, ಎಚ್‌ಡಿಕೆ ಜೋಡೆತ್ತುಗಳಲ್ಲ; ಕಳ್ಳೆತ್ತುಗಳು: ಸಚಿವ ಆರ್. ಅಶೋಕ ವಾಗ್ದಾಳಿ

ಶಿಡ್ಲಘಟ್ಟದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ: ಜೆಡಿಎಸ್, ಕಾಂಗ್ರೆಸ್ ವಿರುದ್ಧ ಸಚಿವ ಆರ್. ಅಶೋಕ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2023, 4:16 IST
Last Updated 15 ಮಾರ್ಚ್ 2023, 4:16 IST
ಶಿಡ್ಲಘಟ್ಟದಲ್ಲಿ ನಡೆದ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿದರು
ಶಿಡ್ಲಘಟ್ಟದಲ್ಲಿ ನಡೆದ ಬಿಜೆಪಿ ಪಕ್ಷದ ವಿಜಯ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಕಂದಾಯ ಸಚಿವ ಆರ್.ಅಶೋಕ್ ಮಾತನಾಡಿದರು   

ಶಿಡ್ಲಘಟ್ಟ: ‘ಅಲ್ಲಿ ಜೋಡೆತ್ತು, ಇಲ್ಲಿ ಫೈಟಿಂಗು ಇಂತಹವರನ್ನು ನಂಬಬಾರದು. ಡಿ.ಕೆ.ಶಿವಕುಮಾರ್, ಎಚ್‌.ಡಿ.ಕುಮಾರಸ್ವಾಮಿ ಜೋಡೆತ್ತುಗಳಲ್ಲ ಬದಲಿಗೆ ಕಳ್ಳೆತ್ತುಗಳು’ ಎಂದು ಕಂದಾಯ ಸಚಿವ ಆರ್.ಅಶೋಕ ಟೀಕಿಸಿದರು.

ನಗರದ ಕೋಟೆ ವೃತ್ತದಲ್ಲಿ ಮಂಗಳವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದರು.

ಹದಿನಾಲ್ಕು ತಿಂಗಳು ಅಧಿಕಾರ ನಡೆಸಲು ಯೋಗ್ಯತೆಯಿಲ್ಲದೆ ಇದ್ದುದರಿಂದ ಕಾಂಗ್ರೆಸ್, ಜೆಡಿಎಸ್ ಬಿಟ್ಟು ನಮ್ಮ ಪಕ್ಷಕ್ಕೆ ಕೆಲವರು ಬಂದರು. ಅಭಿವೃದ್ದಿಯಾಗಬೇಕು ಎಂದರೆ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ. ಶಿಡ್ಲಘಟ್ಟದಲ್ಲಿ ಕಮಲ ಅರಳಿದರೆ ಅಭಿವೃದ್ಧಿ ಪ್ರಾರಂಭವಾಗುತ್ತದೆ ಎಂದರು.

ADVERTISEMENT

ಸಚಿವ ಡಾ.ಸುಧಾಕರ್ ಮಾತನಾಡಿ, ಬಿಜೆಪಿಗೆ ಮತ ಕೊಟ್ಟರೆ ಅಭಿವೃದ್ಧಿಗೆ ಮತ ಕೊಟ್ಟಂತೆ. ಶಿಡ್ಲಘಟ್ಟ ಕ್ಷೇತ್ರದ ಅಭಿವೃದ್ಧಿಯನ್ನು ನಾನು ಅವರೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಮಾಡುತ್ತೇನೆ ಎಂದು ಭರವಸೆ ನೀಡಿದರು.

ಶಿಡ್ಲಘಟ್ಟದಲ್ಲಿ ಮುಸ್ಲಿಮರು ಬಿಜೆಪಿಗೆ ಮತ ನೀಡುವುದಿಲ್ಲ ಎಂದು ಕೆಲವರು ಹೇಳುತ್ತಾರೆ. ಮೋದಿ ಅವರ ದೂರದರ್ಶಿತ್ವದ ಮುದ್ರಾ ಯೋಜನೆಯಡಿ ಎರಡೂವರೆ ಲಕ್ಷ ಕೋಟಿ ರೂ ಸಾಲ ನೀಡಲಾಗಿದೆ. ಅದರಲ್ಲಿ ಶೇ 68 ರಷ್ಟು ಸಾಲದ ಫಲಾನುಭವಿಗಳು ಅಲ್ಪಸಂಖ್ಯಾತರು ಎಂದರು.

ಶಾಸಕ ವಿ.ಮುನಿಯಪ್ಪ ನಿವೃತ್ತರಾಗುತ್ತ ಮಗನನ್ನು ಚುನಾವಣೆಗೆ ನಿಲ್ಲಿಸಬಹುದು ಅಂದುಕೊಂಡಿದ್ದೆ. ಆದರೆ ಅವರು ಗುಳುಂ ಗೋವಿಂದಗೌಡನ ಹೆಸರನ್ನು ಸೂಚಿಸಿದ್ದಾರೆ. ಅವರಿಗೂ ಶಿಡ್ಲಘಟ್ಟಕ್ಕೂ ಸಂಬಂಧವೇ ಇಲ್ಲ. ಶಿಡ್ಲಘಟ್ಟದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ನಮ್ಮ ಸ್ಪರ್ಧೆ ಏನಿದ್ದರೂ ಜೆಡಿಎಸ್ ನೊಂದಿಗೆ ಎಂದರು.

ಶಿಡ್ಲಘಟ್ಟದಲ್ಲಿ ಜೆಡಿಎಸ್ ನಮಗಿಂತ ಮುಂದಿದೆ ಎಂಬ ಸಂಗತಿ ನಮಗೆ ಗೊತ್ತು. ಜೆಡಿಎಸ್ ಗೆದ್ದರೂ ರಾಜ್ಯದಲ್ಲಿ ಸರ್ಕಾರ ಬರುವುದಿಲ್ಲ. ಅವರು ಕಾಯುತ್ತಿರುವುದು ಸಮ್ಮಿಶ್ರ ಸರ್ಕಾರ ಮಾಡಲೆಂದು. ಶಿಡ್ಲಘಟ್ಟಕ್ಕೆ ₹ 75 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಗೆ ಅನುಮೋದನೆ, ₹ 200 ಕೋಟಿ ವೆಚ್ಚದಲ್ಲಿ ಉತ್ತರ ವಿಶ್ವವಿದ್ಯಾನಿಲಯ ಸ್ಥಾಪನೆ, ಜಂಗಮಕೋಟೆಯಲ್ಲಿ ಮಾಡ್ಯುಲಾರ್ ಆಸ್ಪತ್ರೆ ಸ್ಥಾಪನೆ, ಸಾದಲಿಯಲ್ಲಿ ಸಮುದಾಯ ಚಿಕಿತ್ಸಾ ಕೇಂದ್ರ ಮಾಡಿರುವುದು ಬಿಜೆಪಿ ಸರ್ಕಾರ ಎಂದು ಮರೆಯದಿರಿ ಎಂದರು.

ಸಂಸದ ಎಸ್.ಮುನಿಸ್ವಾಮಿ ಮಾತನಾಡಿ, ಡಿಸಿಸಿ ಬ್ಯಾಂಕ್ ನುಂಗಿ ನೀರು ಕುಡಿದ ಗೋವಿಂದೇಗೌಡನನ್ನು ಶಾಸಕ ವಿ.ಮುನಿಯಪ್ಪ ಕಾಂಗ್ರೆಸ್ ಅಭ್ಯರ್ಥಿ ಎಂದು ಸೂಚಿಸಿದ್ದಾರೆ. ಅತ್ತ ಡಿ.ಕೆ.ಶಿವಕುಮಾರ್, ರಾಜೀವ್ ಗೌಡನನ್ನು ಶಿಡ್ಲಘಟ್ಟಕ್ಕೆ ಕಳಿಸಿದ್ದಾರೆ. ಈ ಗೊಂದಲದಿಂದ ಕಾಂಗ್ರೆಸ್ ಮುಳುಗಿದ್ದರೆ, ಜೆಡಿಎಸ್ ಪಕ್ಷ ದೊಡ್ಡ ಗೌಡ ಮತ್ತು ಚಿಕ್ಕ ಗೌಡರಿಗೆ ಹಣ ಕೊಟ್ಟವರಿಗೆ ಟಿಕೆಟ್ ಕೊಡುತ್ತಾರೆ. ಅಭಿವೃದ್ಧಿ ಮಂತ್ರ ಪಠಿಸುವುದು ಬಿಜೆಪಿ ಮಾತ್ರ ಎಂದು ಹೇಳಿದರು.

ಅದ್ದೂರಿ ಮೆರವಣಿಗೆ: ಯಾತ್ರೆಯನ್ನು ಆಂಜನೇಯಸ್ವಾಮಿ ದೇವಾಲಯದ ಬಳಿ ಸ್ವಾಗತಿಸಲಾಯಿತು. ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ಅವರು ಮಯೂರ ವೃತ್ತದಲ್ಲಿ ಬಿಜೆಪಿಯಿಂದ ಸೇವಾಕಾರ್ಯಗಳನ್ನು ನಡೆಸಲು ನಿರ್ಮಿಸಿರುವ ‘ಸೇವಾ ಸೌಧ’ವನ್ನು ಸಚಿವರು ಉದ್ಘಾಟಿಸಿದರು.

ವಿಧಾನಪರಿಷತ್ ಸದಸ್ಯರಾದ ಛಲವಾದಿ ನಾರಾಯಣಸ್ವಾಮಿ, ಆರ್.ದೇವೇಗೌಡ, ಬ್ರಾಹ್ಮಣ ನಿಗಮ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಮಾಜಿ ಶಾಸಕ ಎಂ.ರಾಜಣ್ಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಿ.ಸಿ.ನಂದೀಶ್, ಗ್ರಾಮಾಂತರ ಅಧ್ಯಕ್ಷ ಸುರೇಂದ್ರಗೌಡ, ನಗರ ಘಟಕದ ಅಧ್ಯಕ್ಷ ರಾಘವೇಂದ್ರ, ಸೀಕಲ್ ರಾಮಚಂದ್ರಗೌಡ, ದೇವರಾಜ್, ಮಂಜುನಾಥರೆಡ್ಡಿ, ಪಿಳ್ಳಮುನಿಸ್ವಾಮಪ್ಪ ಹಾಜರಿದ್ದರು.

ಸೇವಾಸೌಧದಲ್ಲಿ ಆರೋಗ್ಯ ಸೇವೆ

ಶಿಡ್ಲಘಟ್ಟ ಕ್ಷೇತ್ರದಲ್ಲಿ ಕಳೆದ 40-50 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಉದ್ಯೋಗ ಸೃಷ್ಟಿಯಾಗಿಲ್ಲ. ಕೂಲಿ ಕಾರ್ಮಿಕರಿಗೆ ಜೀವನ ಭದ್ರತೆಯಿಲ್ಲ. ಅಭಿವೃದ್ಧಿಗಾಗಿ ಬಿಜೆಪಿ ಬೆಂಬಲಿಸಿ. ಬಿಜೆಪಿ ಗೆಲ್ಲಿಸಿದ್ದೇ ಆದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಂತೆ ಕೆಲಸ ಮಾಡುವ ಮೂಲಕ ಕ್ಷೇತ್ರವನ್ನು ಮಾದರಿಯ ನ್ನಾಗಿಸಲಾಗುವುದು. ಈ ದಿನ ‘ಸೇವಾ ಸೌಧ’ವನ್ನು ಮಯೂರ ವೃತ್ತದಲ್ಲಿ ಉದ್ಘಾಟಿಸಿದ್ದು, ಅದರಲ್ಲಿ ವಿವಿಧ ಸೇವಾ ಕಾರ್ಯಕ್ರಮಗಳ ಜೊತೆಯಲ್ಲಿ ಆರೋಗ್ಯ ಸೇವೆಯನ್ನು ನೀಡಲಾಗುವುದು ಎಂದು ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.