ಎಂ.ರಾಮಕೃಷ್ಣಪ್ಪ
ಚಿಂತಾಮಣಿ: ನಗರದ ಹೊರವಲಯದ ಕಾಗತಿಯಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಗೋದಾಮಿನಲ್ಲಿ ಸರ್ಕಾರ ರೈತರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ (ಎಂಎಸ್‌ಪಿ) ರಾಗಿ ಖರೀದಿ ಕೇಂದ್ರ ತೆರೆಯಲಾಗಿದೆ.
ಖರೀದಿ ಕೇಂದ್ರದಲ್ಲಿ ರೈತರ ನೋಂದಣಿ ಪ್ರಕ್ರಿಯೆ ಡಿಸೆಂಬರ್ 15ರಂದು ಮುಕ್ತಾಯವಾಗಿದೆ. ತಾಲ್ಲೂಕಿನಲ್ಲಿ 1094 ಜನ ರೈತರು ಮಾರಾಟಕ್ಕಾಗಿ ನೋಂದಣಿ ಮಾಡಿಸಿಕೊಂಡಿದ್ದಾರೆ. ಜನವರಿ 1ರಿಂದ ಖರೀದಿ ಪ್ರಕ್ರಿಯೆ ಆರಂಭಿಸುವುದಾಗಿ ಆರಂಭದಲ್ಲಿ ಜಿಲ್ಲಾಧಿಕಾರಿ ಘೋಷಣೆ ಮಾಡಿದ್ದರು.
ಜನವರಿ 15 ಕಳೆದರೂ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ನೋಂದಣಿ ಮಾಡಿಸಿದ್ದ ರೈತರು ಮಾರಾಟಕ್ಕಾಗಿ ಜಾತಕ ಪಕ್ಷಿಗಳಂತೆ ಕಾಯುತ್ತಿದ್ದು, ಪ್ರತಿನಿತ್ಯ ಖರೀದಿ ಕೇಂದ್ರಕ್ಕೆ ಅಲೆದಾಡುತ್ತಿದ್ದಾರೆ.
ಕೇಂದ್ರ ಸರ್ಕಾರ 2025-26ನೇ ಸಾಲಿಗೆ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಲ್ ರಾಗಿಗೆ ₹4886 ನಿಗದಿಪಡಿಸಿದೆ. ಒಬ್ಬ ರೈತನಿಂದ ಎಕರೆಗೆ 10 ಕ್ವಿಂಟಲ್ ನಂತೆ ಗರಿಷ್ಠ 5 ಎಕರೆವರೆಗೆ 50 ಕ್ವಿಂಟಲ್ ಖರೀದಿಸಬಹುದು. ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ತೀರ್ಮಾನದಂತೆ ಡಿಸೆಂಬರ್ 15ರವರೆಗೂ ರೈತರ ನೋಂದಣಿ. 2026 ಜನವರಿ 1ರಿಂದ ಖರೀದಿ ಪ್ರಕ್ರಿಯೆ ಆರಂಭಿಸುವುದಾಗಿ ಕರಪತ್ರಗಳಲ್ಲಿ ಪ್ರಕಟಿಸಲಾಗಿತ್ತು ಎನ್ನುತ್ತಾರೆ ರೈತರು.
ರಾಜ್ಯ ಸರ್ಕಾರ ಜಿಲ್ಲೆಗೆ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯನ್ನಾಗಿ ನೇಮಕ ಮಾಡಿದೆ. ಸೂಕ್ತ ಕಾಲಾವಧಿಯಲ್ಲಿ ಖರೀದಿ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ. ಇಲ್ಲದಿದ್ದರೆ ರೈತರ ಹೆಸರಿನಲ್ಲಿ ಮಧ್ಯವರ್ತಿಗಳಿಗೆ ಅನುಕೂಲ ಪಡೆಯುತ್ತಾರೆ ಎಂದು ರೈತರ ಆರೋಪಿಸುತ್ತಾರೆ.
ತಾಲ್ಲೂಕಿನಲ್ಲಿ ರಾಗಿ ಪ್ರಮುಖವಾದ ಬೆಳೆಯಾಗಿದೆ. ರಾಗಿ ಕಣಜ ಎಂದೇ ಗುರುತಿಸಿಕೊಂಡಿದೆ. ತಾಲ್ಲೂಕಿನಲ್ಲಿ 2025-26ನೇ ಸಾಲಿನಲ್ಲಿ 15090 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಗುರಿ ಮೀರಿ 17477 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಿತ್ತು. ಉತ್ತಮ ವರ್ಷಾಧಾರೆಯಾದ ಕಾರಣ ರಾಗಿ ಬಂಪರ್ ಬೆಳೆಯಾಗಿದ್ದು ಉತ್ತಮ ಇಳುವರಿಯೂ ಬಂದಿದೆ ಎಂದು ಕೃಷಿ ಇಲಾಖೆ ಮೂಲಗಳು ತಿಳಿಸಿವೆ.
ರಾಗಿ ಖರೀದಿ ತಡ ಮಾಡುತ್ತಿರುವುದು ರೈತರಿಗೆ ತೊಂದರೆಯಾಗಿದೆ. ಸಾಮಾನ್ಯವಾಗಿ ರಾಗಿ ಕೊಯ್ಲು ಅಕ್ಟೋಬರ್‌ನಲ್ಲಿ ಆರಂಭವಾಗುತ್ತದೆ. ಬೆಂಬಲ ಬೆಲೆಗಾಗಿ 3 ತಿಂಗಳು ರೈತರು ಕಾಯುವುದಿಲ್ಲ. ಸಾಲ ಸೋಲ ಮಾಡಿರುತ್ತಾರೆ. ಜತೆಗೆ ಸಂಗ್ರಹ ಮಾಡಲು ಸೂಕ್ತ ಅನುಕೂಲವೂ ಇರುವುದಿಲ್ಲ. ಹೀಗಾಗಿ ಕೊಯ್ಲಿನ ಕೂಡಲೇ ಮುಕ್ತ ಮಾರುಕಟ್ಟೆಯಲ್ಲಿ ಬಂದಷ್ಟು ಬೆಲೆಗೆ ಮಾರಾಟ ಮಾಡುತ್ತಾರೆ. ಮಧ್ಯವರ್ತಿಗಳು ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ ದಾಸ್ತಾನು ಮಾಡಿಕೊಂಡಿರುತ್ತಾರೆ. ಖರೀದಿ ಕೇಂದ್ರ ತೆರೆದ ನಂತರ ರೈತರ ಹೆಸರಿನಲ್ಲಿ ಬೆಂಬಲ ಬೆಲೆಗೆ ಮಾರಾಟ ಮಾಡಿ ಸಾಕಷ್ಟು ಲಾಭ ಮಾಡಿಕೊಳ್ಳುತ್ತಾರೆ. ರೈತರಿಗಾಗಿ ರೂಪಿಸಿರುವ ಯೋಜನೆ ಸದುಪಯೋಗ ಆಗುವುದಿಲ್ಲ ಎಂದು ರೈತ ಮುಖಂಡರು ದೂರುತ್ತಾರೆ.
ಕೇಂದ್ರದಲ್ಲಿ ನೋಂದಣಿ ಮಾಡಿಸಿದ್ದ ಕೆಲ ರೈತರು ಕಾಯಲಾರದೆ ಹಣದ ಅವಶ್ಯಕತೆಯಿಂದ ಕಡಿಮೆ ಬೆಲೆಯಲ್ಲಿ ಮುಕ್ತ ಮಾರುಕಟ್ಟೆಯಲ್ಲಿ ವ್ಯಾಪಾರಿಗಳಿಗೆ ಮಾರಾಟ ಮಾಡಿರುತ್ತಾರೆ. ಚಿಂತಾಮಣಿ ಜಿಲ್ಲೆಯಲ್ಲಿ ಮುಖ್ಯ ಮಾರುಕಟ್ಟೆ ಕೇಂದ್ರವಾಗಿದೆ. ಸಂತೆಗೆ ಸುಮಾರು 600 ರಿಂದ 800 ಕ್ವಿಂಟಲ್ ರಾಗಿ ಆವಕವಾಗುತ್ತಿದೆ. ವ್ಯಾಪಾರಿಗಳು ಮತ್ತು ದಳ್ಳಾಳಿಗಳು ಕೇಳಿದ ಬೆಲೆಗೆ ಮಾರಾಟ ಮಾಡಬೇಕಾದ ಸಂಕಷ್ಟಕ್ಕೆ ರೈತರು ಸಿಲುಕಿದ್ದಾರೆ. ರೈತರಿಗೆ ಅನುಕೂಲವಾಗುವಂತೆ ಕೂಡಲೇ ಖರೀದಿ ಆರಂಭಿಸಬೇಕು ಎಂಬುದು ರೈತರ ಒಕ್ಕೂರಲಿನ ಬೇಡಿಕೆಯಾಗಿದೆ.
ಸರ್ಕಾರ ಖರೀದಿ ಆರಂಭಿಸಿದ ನಂತರ ಅದೇ ರಾಗಿಯನ್ನು ಗೋಲ್ ಮಾಲ್ ಮಾಡಿ ರೈತರ ಹೆಸರಿನಲ್ಲಿ ಬೆಂಬಲ ಬೆಲೆಗೆ ಮಾರಾಟ ಮಾಡುತ್ತಾರೆ. ಸರ್ಕಾರ ಬೆಂಬಲ ಬೆಲೆ ನೀಡುವುದು ರೈತರಿಗೋ ಅಥವಾ ವ್ಯಾಪಾರಿಗಳು ಮತ್ತು ದಳ್ಳಾಳಿಗಳಿಗೋ ಎಂದು ರೈತ ಸಂಘದ ಅಧ್ಯಕ್ಷ ಸೀಕಲ್ ರಮಣಾರೆಡ್ಡಿ ಪ್ರಶ್ನಿಸುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.