ADVERTISEMENT

ಸುರಿಯದ ಮಳೆ; ಬಿದ್ದಿದೆ ಬರ

ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆ ಕೊರತೆ

ಡಿ.ಎಂ.ಕುರ್ಕೆ ಪ್ರಶಾಂತ
Published 25 ಆಗಸ್ಟ್ 2023, 5:58 IST
Last Updated 25 ಆಗಸ್ಟ್ 2023, 5:58 IST
ಚಿಕ್ಕಬಳ್ಳಾಪುರ ಹೊರವಲಯದ ಜಡಲತಿಮ್ಮನಹಳ್ಳಿ ಬಳಿ ಒಣಗುತ್ತಿರುವ ರಾಗಿ
ಚಿಕ್ಕಬಳ್ಳಾಪುರ ಹೊರವಲಯದ ಜಡಲತಿಮ್ಮನಹಳ್ಳಿ ಬಳಿ ಒಣಗುತ್ತಿರುವ ರಾಗಿ   

ಚಿಕ್ಕಬಳ್ಳಾಪುರ: ಕಳೆದ ಎರಡು ವರ್ಷಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ದಾಖಲೆಯ ಪ್ರಮಾಣದಲ್ಲಿ ಮಳೆ ಸುರಿದಿತ್ತು. ಆದರೆ ಈ ಬಾರಿ ದಾಖಲೆಯ ಪ್ರಮಾಣವಿರಲಿ ವಾಡಿಕೆ ಮಳೆಯೇ ಸುರಿದಿಲ್ಲ. ಮಳೆ ಬೀಳದೆ ಬಿಸಲು ಧಗೆ ತೀವ್ರವಾಗಿಯೇ ಹೆಚ್ಚಿದೆ. 

ಆ.20ರ ಒಳಗೆ ಮಳೆ ಸುರಿದರೆ ಕೃಷಿ ಚಟುವಟಿಕೆಗಳು ಒಂದಿಷ್ಟು ಗರಿಗೆದರುತ್ತವೆ ಎನ್ನುವ ನಿರೀಕ್ಷೆಯು ಕೃಷಿ ಇಲಾಖೆಯದ್ದಾಗಿತ್ತು. ಆದರೆ ಆಗಸ್ಟ್ ಕೊನೆಯ ವಾರವಾದರೂ ಜಿಲ್ಲೆಯಲ್ಲಿ ಮಳೆಯ ಕೊರತೆ ತೀವ್ರವಾಗಿ ಕಾಡುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಅದರ ಅರ್ಧದಷ್ಟು ಸಹ ಮಳೆ ಸುರಿದಿಲ್ಲ. 

ಪ್ರತಿ ಮುಂಗಾರಿನ ಜೂನ್‌ನಿಂದ ಆಗಸ್ಟ್‌ವರೆಗೆ ಉತ್ತಮ ಮಳೆ ನಿರೀಕ್ಷಿಸಲಾಗುತ್ತದೆ. ಈ ಸಮಯದಲ್ಲಿ ಮಳೆ ಸುರಿದರೆ ಬೆಳೆಯೂ ಸಮೃದ್ಧವಾಗುತ್ತದೆ. ಆದರೆ ಜಿಲ್ಲೆಯಲ್ಲಿ ಈ ಮೂರು ತಿಂಗಳ ಅವಧಿಯಲ್ಲಿಯೇ ಮಳೆ ಕೊರತೆ ಎದ್ದು ಕಾಣುತ್ತಿದೆ. 

ADVERTISEMENT

ಜೂನ್‌ನಲ್ಲಿ ಜಿಲ್ಲೆಯಲ್ಲಿ ವಾಡಿಕೆಯ ಮಳೆ 64.1 ಮಿ.ಮೀ ಇದೆ. 2022ನೇ ಸಾಲಿನಲ್ಲಿ 149.3 ಮಿ.ಮೀ ಮಳೆ ಸುರಿದಿತ್ತು. ಆದರೆ ಈ ಬಾರಿ 53.4 ಮಿ.ಮೀ ಮಳೆ ಆಗಿದೆ. ಜುಲೈನಲ್ಲಿ ವಾಡಿಕೆಯ ಮಳೆ 85.5 ಮಿ.ಮೀ ಇದೆ. 2022ನೇ ಸಾಲಿನಲ್ಲಿ 136.1 ಮಿ.ಮೀ ಮಳೆ ಸುರಿದಿತ್ತು. ಆದರೆ ಈ ಬಾರಿ 68.8 ಮಿ.ಮೀ ಮಳೆ ಆಗಿದೆ. ಆಗಸ್ಟ್‌ ಅಂತ್ಯಕ್ಕೆ ವಾಡಿಕೆಯ ಮಳೆ 73.7 ಮಿ.ಮೀ ಇದೆ. 2022ನೇ ಸಾಲಿನಲ್ಲಿ 423.7 ಮಿ.ಮೀ ಮಳೆ ಸುರಿದಿತ್ತು. ಆದರೆ ಈ ಬಾರಿ 13.7 ಮಿ.ಮೀ ಮಳೆ ಆಗಿದೆ. ಆಗಸ್ಟ್‌ ತಿಂಗಳಲ್ಲಿ ಉತ್ತಮ ಮಳೆ ಆಗಿದ್ದರೆ ಬೆಳೆಯೂ ಉತ್ತಮವಾಗಿ ಬರುತ್ತಿತ್ತು. ಆದರೆ ಇಲ್ಲಿಯವರೆಗೆ 13.8 ಮಿ.ಮೀ ಮಳೆ ಮಾತ್ರ ಸುರಿದಿದೆ. ಸದ್ಯ ಮಳೆಯ ಲಕ್ಷಣಗಳೂ ಇಲ್ಲ. 

ಜಿಲ್ಲೆಯ ಎಲ್ಲ ತಾಲ್ಲೂಕುಗಳಲ್ಲಿಯೂ 2022 ಮತ್ತು 2021ನೇ ಸಾಲಿನದಲ್ಲಿ ಮಳೆ ಅಬ್ಬರಿಸಿತ್ತು. ಕೆರೆ, ಕಟ್ಟೆಗಳು ತುಂಬಿ ಕೋಡಿ ಹರಿದಿದ್ದವು. ಗೌರಿಬಿದನೂರು ತಾಲ್ಲೂಕಿನ ಕೆಂಕರೆ ಸೇರಿದಂತೆ ಕೆಲವು ಕೆರೆಗಳು ಒಡೆದಿದ್ದವು. ಆದರೆ ಪ್ರಸಕ್ತ ವರ್ಷ ಮಳೆಯ ಅಭಾವದಿಂದ ಕೆರೆಗಳಿಗೆ ಕನಿಷ್ಠ ಮಟ್ಟದಲ್ಲಿಯೂ ನೀರಿ ಹರಿದಿಲ್ಲ. 

ಮಳೆ ಅಭಾವ ಒಂದೆಡೆ ಇದ್ದರೆ ಬಿಸಿಲ ಧಗೆ ಹೆಚ್ಚಿದೆ. ಈಗಾಗಲೇ ಬಿತ್ತನೆ ಮಾಡಿದ್ದ ರಾಗಿ ಪೈರುಗಳು ಸಹ ಒಣಗುತ್ತಿವೆ. ಕೃಷಿ ಇಲಾಖೆಯ ಮೂಲಗಳ ಪ್ರಕಾರ ಜಿಲ್ಲೆಯ ಆರು ತಾಲ್ಲೂಕುಗಳು ಸಹ ಬರದ ದವಡೆಯಲ್ಲಿವೆ.  

‘ಈ ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ಮಳೆ ಕೊರತೆ ತೀವ್ರವಾಗಿ ಕಾಡುತ್ತಿದೆ. ರಸಗೊಬ್ಬರ, ಬಿತ್ತನೆ ಬೀಜ ಸಾಕಾಗುವಷ್ಟು ದಾಸ್ತಾನಿದೆ. ಮಳೆ ಇಲ್ಲದ ಕಾರಣ ರೈತರು ಖರೀದಿಗೆ ಮುಂದಾಗುತ್ತಿಲ್ಲ. ಈಗ ಬಿತ್ತಿರುವ ಬೆಳೆಗಳು ಸಹ ನಾಶವಾಗುವ ಹಂತದಲ್ಲಿವೆ’ ಎನ್ನುತ್ತಾರೆ ಕೃಷಿ ಇಲಾಖೆ ಅಧಿಕಾರಿಗಳು. 

Cut-off box - ಒಣಗುತ್ತಿದೆ ಬಿತ್ತನೆಯಾಗಿರುವ ಬೆಳೆ ಜಿಲ್ಲಾ ಕೃಷಿ ಇಲಾಖೆಯು ಪ್ರಸಕ್ತ ವರ್ಷ 148592 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿತ್ತು. ಆದರೆ ಇಲ್ಲಿಯವರೆಗೆ 78818 ಹೆಕ್ಟೇರ್‌ನಲ್ಲಿ ಬಿತ್ತನೆ ಆಗಿದೆ. ಈಗ ಬಿತ್ತನೆ ಆಗಿರುವ ಪ್ರದೇಶದಲ್ಲಿಯೂ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿವೆ.  ಚಿಂತಾಮಣಿ ಮತ್ತು ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಮಳೆಯ ಕೊರತೆ ತೀವ್ರವಾಗಿ ಬಾಧಿಸುತ್ತಿದ್ದು ಬಿತ್ತನೆ ಅಲ್ಪ ಪ್ರಮಾಣದಲ್ಲಿ ಆಗಿದೆ.  48 ಸಾವಿರ ಹೆಕ್ಟೇರ್‌ನಲ್ಲಿ ರಾಗಿ ಬಿತ್ತನೆ ಗುರಿ ಹೊಂದಲಾಗಿದೆ. ಇದರಲ್ಲಿ 22291 ಹೆಕ್ಟೇರ್ ಈಗಾಗಲೇ ಬಿತ್ತನೆ ಆಗಿದೆ. ಬಿತ್ತನೆಯಾಗಿರುವ ಬಹಳಷ್ಟು ಪ್ರದೇಶದಲ್ಲಿ ಮಳೆ ಇಲ್ಲದೆ ರಾಗಿಯ ಪೈರು ಮೇಲೇಳುತ್ತಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.