ADVERTISEMENT

ಕೆಸರು ಗದ್ದೆಯಂತಾದ ಕ್ರೀಡಾಂಗಣ

ಕ್ರೀಡಾಕೂಟಕ್ಕೆ ಅಡಚಣೆ: ಕ್ರೀಡಾಪಟುಗಳ ಅಭ್ಯಾಸಕ್ಕೂ ತೊಂದರೆ

ಪಿ.ಎಸ್.ರಾಜೇಶ್
Published 4 ಆಗಸ್ಟ್ 2022, 4:42 IST
Last Updated 4 ಆಗಸ್ಟ್ 2022, 4:42 IST
ಬಾಗೇಪಲ್ಲಿ ಪಟ್ಟಣದ ಕ್ರೀಡಾಂಗಣದಲ್ಲಿ ಬಿದ್ದ ಮಳೆಯ ನೀರು ಸಂಗ್ರಹವಾಗಿರುವುದು
ಬಾಗೇಪಲ್ಲಿ ಪಟ್ಟಣದ ಕ್ರೀಡಾಂಗಣದಲ್ಲಿ ಬಿದ್ದ ಮಳೆಯ ನೀರು ಸಂಗ್ರಹವಾಗಿರುವುದು   

ಬಾಗೇಪಲ್ಲಿ: ಕೆಸರು ಗದ್ದೆಯಂತಾಗಿರುವ ಕ್ರೀಡಾಂಗಣ ಕುರಿ, ಮೇಕೆ, ಹಂದಿಗಳ ಅವಾಸಸ್ಥಾನವಾಗಿದೆ. ಕ್ರೀಡಾ ಪರಿಕರಗಳೂ ಇಲ್ಲ. ಕ್ರೀಡಾಪಟುಗಳ ಅಭ್ಯಾಸಕ್ಕೆ ಬೇಕಾದ ಯಾವ ಸೌಲಭ್ಯವು ಇಲ್ಲದೆ ಪುಂಡರ ತಾಣವಾಗಿದೆ.

ಇದು ತಾಲ್ಲೂಕು ಕೇಂದ್ರಸ್ಥಾನದಲ್ಲಿನ ಕ್ರೀಡಾಂಗಣದ ದುಸ್ಥಿತಿ.

ಪಟ್ಟಣದ ಹೊರವಲಯದರುವ ಕ್ರೀಡಾಂಗಣವನ್ನು ತಗ್ಗಿನ ಪ್ರದೇಶದಲ್ಲಿ ನಿರ್ಮಿಸಿರುವುದರಿಂದಮಳೆಬಂದರೆ ಮೈದಾನದಲ್ಲಿ ಚರಂಡಿ ನೀರು ಜಲಾವೃತ್ತಗೊಳ್ಳುತ್ತದೆ. ನೀರು ಹೋಗಲು ವ್ಯವಸ್ಥೆ ಇಲ್ಲದ ಕಾರಣ ಅಂಕಣಗಳು ಮತ್ತು ಓಟದ ಟ್ರಾಕ್‌ಗಳಲ್ಲಿ ಮಳೆಯ ನೀರು ತುಂಬಿಕೊಳ್ಳುತ್ತದೆ. ಇಂಥ ಸ್ಥಿತಿ ಈ ಮಳೆಗಾಲದಲ್ಲೂ ಉಂಟಾಗಿದೆ. ಇದರಿಂದ ಇಲ್ಲಿ ನಡೆಯಬೇಕಿದ್ದ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಬೇರೆಡೆ ನಡೆಸಲಾಗಿದೆ. ಕ್ರೀಡಾಪಟುಗಳು ಅಭ್ಯಾಸ ಮಾಡಲಾಗಿದೆ ಸಂಕಷ್ಟಕ್ಕೆ ಸಿಲುಕಿದ್ದಾರೆ.

ADVERTISEMENT

ಕ್ರೀಡೆಗೆ ಅಗತ್ಯ ನೆಟ್, ಚೆಂಡು, ಬ್ಯಾಟ್‌, ಶಾಟ್‌ಪುಟ್, ಜಾವಿಲಿನ್ ಥ್ರೋ ಸೇರಿದಂತೆ ಯಾವ ಕ್ರೀಡಾ ಪರಿಕರಗಳೂ ಇಲ್ಲ. ಆಟದ ಮೈದಾನ ಕೂಡ ಸಮತಟ್ಟಾಗಿಲ್ಲ. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮಳೆ ಕನ್ನಡಿ ಹಿಡಿದಿದೆ. ಸರಿಯಾದ ನಿರ್ವಹಣೆ ಮಾಡದೇ ಹೆಸರಿಗೆ ಮಾತ್ರ ಕ್ರೀಡಾಂಗಣದಂತಿರುವ ಮೈದಾನ ಮಳೆಗೆ ಕೆಸರಿನ ಗದ್ದೆಯಾಗಿದೆ. ಕ್ರೀಡಾಂಗಣದ ಪಕ್ಕದಲ್ಲಿನ ಚರಂಡಿಗಳು ತುಂಬಿ ಕ್ರೀಡಾಂಗಣಕ್ಕೆ ಕೊಳಚೆ ನೀರು ನುಗ್ಗಿದೆ. ಇದರಿಂದ ಮಕ್ಕಳ ಆಟ, ಕ್ರೀಡಾಪಟುಗಳ ಅಭ್ಯಾಸ ಮತ್ತು ವಾಯು ವಿಹಾರಕ್ಕೆ ಅಡ್ಡಿಯಾಗಿದೆ.

ಆಗಸ್ಟ್‌ನಿಂದ ಪಟ್ಟಣ, ಹೋಬಳಿ, ತಾಲ್ಲೂಕು ಮಟ್ಟದ ಕ್ರೀಡಾಕೂಟಗಳು ಆರಂಭವಾಗಿದೆ. ಮಳೆ ಹೆಚ್ಚಾಗಿರುವುದರಿಂದ ಕೆಸರುಗದ್ದೆಯಂತಿರುವ ಕ್ರೀಡಾಂಗಣದಲ್ಲಿ ಕ್ರೀಡೆಗಳನ್ನು ನಡೆಸಲು ಆಗುತ್ತಿಲ್ಲ. ಇದರಿಂದ ಕ್ರೀಡಾಕೂಟಗಳನ್ನು ಸರ್ಕಾರಿ ಬಾಲಕಿಯರ, ಬಾಲಕರ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳ ಆಟದ ಮೈದಾನಗಳಲ್ಲಿ ನಡೆಸಲಾಗುತ್ತಿದೆ.

ಮಾಜಿ ಶಾಸಕ ಎನ್.ಸಂಪಂಗಿ ಅವರು ರಾಜ್ಯ ಕ್ರೀಡಾ ಪರಿಷತ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಕ್ರೀಡಾಂಗಣ ನಿರ್ಮಿಸಲಾಯಿತು. ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಅವರು ಪುರುಷ ಮತ್ತು ಮಹಿಳೆಯರ ಶೌಚಾಲಯಗಳನ್ನು ಕಟ್ಟಿಸಿ ಕೊಟ್ಟರು. ಸೂಕ್ತ ನಿರ್ವಹಣೆ ಇಲ್ಲದೇ ಅದು ಕೂಡ ದುರ್ನಾತ ಬೀರುತ್ತಿದೆ.

ಕ್ರೀಡಾಂಗಣದ ಮುಖ್ಯದ್ವಾರದ ಬಾಗಿಲು(ಗೇಟ್)ಮುರಿದು ಅನೇಕ ವರ್ಷಗಳು ಕಳೆಯುತ್ತಿವೆ. ಕ್ರೀಡಾ ಇಲಾಖೆಯ ಅಧಿಕಾರಿಗಳು ಗೇಟ್‍ಅನ್ನು ದುರಸ್ತಿಗೊಳಿಸಿಲ್ಲ. ಇದರಿಂದ ರಾತ್ರಿ ವೇಳೆ ರೀಡಾಂಗಣ ಪುಂಡರ ಅಡ್ಡೆಯಾಗುತ್ತದೆ.

ಒಳಾಂಗಣ ಕ್ರೀಡಾಂಗಣ ನಿರ್ಮಿಸಿ

ಬಾಗೇಪಲ್ಲಿ ತಾಲ್ಲೂಕಿನಲ್ಲಿ ಒಂದೂ ಒಳಾಂಗಣ ಕ್ರೀಡಾಂಗಣ ಇಲ್ಲ. ಇದರಿಂದ ಷಟಲ್, ಬಾಲ್ ಬ್ಯಾಡ್ಮಿಂಟನ್ ಕ್ರೀಡಾಪಟುಗಳ ಅಭ್ಯಾಸಕ್ಕೆ ತೊಂದರೆ ಆಗಿದೆ. ಈ ಆಟಗಳನ್ನು ಹೊರಗೆ ಆಡಲು ಆಗುವುದಿಲ್ಲ. ಆದರೆ ಒಳಾಂಗಣ ಕ್ರೀಡಾಂಗಣ ಇಲ್ಲದೇ ಕೆಲವರು ಅಭ್ಯಾಸ ಬಿಟ್ಟಿದ್ದಾರೆ. ಶೀಘ್ರವೇ ಒಳಾಂಗಣ ಕ್ರೀಡಾಂಗಣ ನಿರ್ಮಿಸಬೇಕು ಎಂದು ಷಟಲ್ ಬ್ಯಾಡ್ಮಿಂಟನ್ ಕ್ರೀಡಾಪಟು ನವೀನ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.