ADVERTISEMENT

ಮತದಾನದ ಬಗ್ಗೆ ಜಾಗೃತಿ ಮೂಡಿಸಿ

ನಗರದಲ್ಲಿ ಮತದಾನದ ಅರಿವು ಹಾಗೂ ಪೋಷಣ ಅಭಿಯಾನದ ಬೈಕ್ ರ್‍ಯಾಲಿ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2019, 13:03 IST
Last Updated 24 ಸೆಪ್ಟೆಂಬರ್ 2019, 13:03 IST
ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಬೈಕ್ ರ್‍ಯಾಲಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಚಾಲನೆ ನೀಡಿದರು.
ನಗರದ ಜೂನಿಯರ್ ಕಾಲೇಜು ಆವರಣದಲ್ಲಿ ಬೈಕ್ ರ್‍ಯಾಲಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಚಾಲನೆ ನೀಡಿದರು.   

ಚಿಕ್ಕಬಳ್ಳಾಪುರ: ‘ತಾಲ್ಲೂಕಿನಲ್ಲಿ ಅಕ್ಟೋಬರ್ 21ರಂದು ನಡೆಯುವ ವಿಧಾನಸಭಾ ಉಪ ಚುಣಾವಣೆಯಲ್ಲಿ ಶೇ 100ರಷ್ಟು ಮತದಾನ ಮಾಡಿಸುವ ದಿಸೆಯಲ್ಲಿ ಅಧಿಕಾರಿಗಳು ಮತದಾನದ ಬಗ್ಗೆ ಜಾಗೃತಿ ಮೂಡಿಸಬೇಕು’ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಂಗಳವಾರ ನಗರದಲ್ಲಿ ಹಮ್ಮಿಕೊಂಡಿದ್ದ ಮತದಾನದ ಅರಿವು ಹಾಗೂ ಪೋಷಣ ಅಭಿಯಾನದ ಕುರಿತ ಬೈಕ್ ರ್‍ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಮತದಾರರ ಪಟ್ಟಿಯಿಂದ ಯಾವೊಬ್ಬ ಮತದಾರನು ಹೊರಗುಳಿಯಬಾರದು ಉದ್ದೇಶದಿಂದ ಸಮಗ್ರ ಮತದಾನ ಪಟ್ಟಿಯ ವಿಶೇಷ ಪರಿಷ್ಕರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 18 ವರ್ಷ ದಾಟಿದವರ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡುವುದು, ಮರಣ ಹೊಂದಿದವರ ಹೆಸರು ಕೈಬಿಡುವುದು, ವಿವಿಧ ಮಾಹಿತಿಗಳ ತಿದ್ದುಪಡಿ ಮಾಡುವ ಮೂಲಕ ಪಟ್ಟಿ ಪರಿಷ್ಕರಿಸಲಾಗುತ್ತದೆ. ಈ ಬಗ್ಗೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಬೇಕು’ ಎಂದು ಹೇಳಿದರು.

ADVERTISEMENT

‘ಕೇಂದ್ರ ಸರ್ಕಾರದ ಪೋಷಣ ಅಭಿಯಾನ ಯೋಜನೆಯನ್ನು ರಾಜ್ಯದಲ್ಲಿಯೂ ಅನುಷ್ಠಾನಗೊಳಿಸಲಾಗಿದೆ. ಅಪೌಷ್ಟಿಕತೆಯನ್ನು ತಡೆಗಟ್ಟುವಂತಹ ಮಹತ್ವದ ಈ ಯೋಜನೆಯ ಉದ್ದೇಶ ಕುರಿತು ಸಾರ್ವಜನಿಕರು ಮತ್ತು ಸಮುದಾಯದಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕು. ತಾಯಿ ಮತ್ತು ಶಿಶು ಮರಣ ತಗ್ಗಿಸಿ, ಆರೋಗ್ಯಕರ ಸಮಾಜ ನಿರ್ಮಿಸುವುದು ನಮ್ಮೆಲ್ಲರ ಜವಾಬ್ದಾರಿ’ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಿ ಲಕ್ಷ್ಮೀದೇವಮ್ಮ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗೇಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.