ADVERTISEMENT

ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿ

ಭ್ರಷ್ಟಾಚಾರ ನಿಗ್ರಹ ದಳ ಠಾಣೆ ವತಿಯಿಂದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2019, 14:22 IST
Last Updated 12 ಸೆಪ್ಟೆಂಬರ್ 2019, 14:22 IST
ಸಭೆಯಲ್ಲಿ ಎಸಿಬಿ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್ ಎಂ.ಲಕ್ಷ್ಮೀದೇವಮ್ಮ ವೃದ್ಧೆಯೊಬ್ಬರ ಅಹವಾಲು ಆಲಿಸಿದರು.
ಸಭೆಯಲ್ಲಿ ಎಸಿಬಿ ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್ ಎಂ.ಲಕ್ಷ್ಮೀದೇವಮ್ಮ ವೃದ್ಧೆಯೊಬ್ಬರ ಅಹವಾಲು ಆಲಿಸಿದರು.   

ಚಿಕ್ಕಬಳ್ಳಾಪುರ: ‘ಸಾರ್ವಜನಿಕರು ಮೊದಲು ಭ್ರಷ್ಟಾಚಾರ ವಿರುದ್ಧ ಧ್ವನಿ ಎತ್ತಬೇಕು. ತಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ, ಅಧಿಕಾರಿಗಳು ಕಚೇರಿಗೆ ಅಲೆದಾಡಿಸಿದರೆ ಎಸಿಬಿ ಕಚೇರಿಗೆ ದೂರು ನೀಡುವ ಮೂಲಕ ಭ್ರಷ್ಟಾಚಾರ ನಿರ್ಮೂಲನೆಗೆ ಕೈಜೋಡಿಸಬೇಕು’ ಎಂದು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಠಾಣೆ ಪೊಲೀಸ್‌ ಇನ್‌ಸ್ಪೆಕ್ಟರ್ ಎಂ.ಲಕ್ಷ್ಮೀದೇವಮ್ಮ ತಿಳಿಸಿದರು.


ತಾಲ್ಲೂಕು ಕಚೇರಿಯಲ್ಲಿ ಎಸಿಬಿ ವತಿಯಿಂದ ಗುರುವಾರ ಆಯೋಜಿಸಿದ್ದ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು.


‘ಪ್ರತಿಯೊಂದು ಕಚೇರಿಯಲ್ಲಿ ಅಧಿಕಾರಿಗಳು ಪ್ರಾಮಾಣಿಕವಾಗಿ ಸಕಾಲಕ್ಕೆ ಜನರ ಕೆಲಸ ಮಾಡಿಕೊಡಬೇಕು. ಅನಗತ್ಯವಾಗಿ ಕಚೇರಿಗೆ ಅಲೆದಾಡಿಸುವ ಕೆಲಸ ಮಾಡಬಾರದು. ತ್ವರಿತಗತಿಯಲ್ಲಿ ಬಡ ಜನರು ಕೆಲಸಗಳನ್ನು ಮುಗಿಸಿ ಕೊಡಬೇಕು. ಕೆಲಸದಲ್ಲಿ ಅಲಕ್ಷ್ಯ ಧೋರಣೆ ತೋರುವುದು ಕೂಡ ಭ್ರಷ್ಟಾಚಾರಕ್ಕೆ ಸಮನಾದ ಕೆಲಸವಾಗಿದೆ’ ಎಂದು ಹೇಳಿದರು.

ADVERTISEMENT


‘ಇದೀಗ ತಾಲ್ಲೂಕು ಮಟ್ಟದಲ್ಲೂ ಸಾರ್ವಜನಿಕರ ಅಹವಾಲು ಸ್ವೀಕಾರ ಸಭೆ ನಡೆಸಲಾಗುತ್ತಿದೆ. ಆದರೆ ಪ್ರಚಾರದ ಕೊರತೆಯಿಂದ ನಿರೀಕ್ಷಿತ ಮಟ್ಟದಲ್ಲಿ ಸಾರ್ವಜನಿಕರಿಂದ ಅಹವಾಲುಗಳು ಬರುತ್ತಿಲ್ಲ. ಮುಂದಿನ ಸಭೆಗಳಲ್ಲಿ ರೈತ ಸಂಘಟನೆಗಳು, ಲಾರಿ, ಖಾಸಗಿ ಬಸ್ ಮಾಲೀಕರ ಸಂಘ, ಆಟೋ ಚಾಲಕರ ಸಂಘ, ಎನ್‌ಜಿಒಗಳು ಸೇರಿದಂತೆ ಹಲವು ಸಂಘ -ಸಂಸ್ಥೆಗಳ ಸಹಯೋಗದಲ್ಲಿ ಈ ಸಭೆಯ ಉದ್ದೇಶದ ಬಗ್ಗೆ ಜಾಗೃತಿ ಮೂಡಿಸಲಾಗುತ್ತದೆ’ ಎಂದು ತಿಳಿಸಿದರು.


ಸಭೆಯಲ್ಲಿ ದೊಡ್ಡತಮ್ಮನಹಳ್ಳಿಯ ವೃದ್ಧೆ ತಿರುಮಳಮ್ಮ ಅವರು, ‘ಖಾತೆ ವಿಚಾರವಾಗಿ ತಾಲ್ಲೂಕು ಕಚೇರಿಗೆ ಐದು ವರ್ಷಗಳಿಂದ ಅಲೆದಾಡುತ್ತಿದ್ದರೂ ಕೆಲಸವಾಗಿಲ್ಲ. ನ್ಯಾಯ ಕೊಡಿಸಿ’ ಎಂದು ಅಳಲು ತೋಡಿಕೊಂಡರು.


ಈ ವೇಳೆ ಎಂ.ಲಕ್ಷ್ಮೀದೇವಮ್ಮ, ‘ಜನರು ಸಲ್ಲಿಸುವ ಅರ್ಜಿಗಳು ಸರಿಯಾಗಿದ್ದರೆ ಕೂಡಲೇ ವಿಲೇವಾರಿಗೆ ಕ್ರಮಕೈಗೊಳ್ಳಬೇಕು. ಏನಾದರೂ ಸಮಸ್ಯೆಗಳಿದ್ದರೆ ಕೂಡಲೇ ಅರ್ಜಿದಾರರಿಗೆ ಹಿಂಬರಹದ ಮೂಲಕ ತಿಳಿಸಬೇಕು. ಇಲ್ಲದ ಸಬೂಬುಗಳನ್ನು ಹೇಳಿ ಕಾಲಹರಣ ಮಾಡುವ ಕೆಲಸ ಮಾಡಬಾರದು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಜತೆಗೆ ಮಾತನಾಡಿ ಸಮಸ್ಯೆ ಬಗೆಹರಿಸುವೆ’ ಎಂದರು.


ಗ್ರೇಡ್-2 ತಹಶೀಲ್ದಾರ್ ತುಳಸಿ, ರಾಜಸ್ವ ನಿರೀಕ್ಷಕ ಹನುಮೇಗೌಡ ಹಾಜರಿದ್ದರು. ಸಭೆಯಲ್ಲಿ ಕೆಲವೇ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು. ಬೆರಳೆಣಿಕೆ ಅಹವಾಲುಗಳು ಮಾತ್ರ ಸಲ್ಲಿಕೆಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.