ADVERTISEMENT

ಗೌರಿಬಿದನೂರು: ಮುಚ್ಚಿದ್ದ ಸರ್ಕಾರಿ ಶಾಲೆ ಪುನರಾರಂಭ

ಪೋಷಕರ ಆಸಕ್ತಿಯಿಂದ ಖಾಸಗಿ ಶಾಲೆಗಳಿಂದ ಸರ್ಕಾರಿ ಶಾಲೆಗಳಿಗೆ 1,397 ಮಕ್ಕಳು

ಎ.ಎಸ್.ಜಗನ್ನಾಥ್
Published 5 ಫೆಬ್ರುವರಿ 2021, 3:03 IST
Last Updated 5 ಫೆಬ್ರುವರಿ 2021, 3:03 IST
ಗೌರಿಬಿದನೂರು ನಗರದಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ
ಗೌರಿಬಿದನೂರು ನಗರದಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ   

ಗೌರಿಬಿದನೂರು: ಈ ಶೈಕ್ಷಣಿಕ ವರ್ಷದಲ್ಲಿ ಖಾಸಗಿ ಶಾಲೆಗಳಿಂದ 1,397 ಮಕ್ಕಳು ವಿವಿಧ ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮೂಲಕ ಹೊಸ ದಾಖಲೆ ನಿರ್ಮಾಣವಾಗಿದೆ. ಅಲ್ಲದೆ, ನಾಲ್ಕು ವರ್ಷಗಳಿಂದ ಮುಚ್ಚಿದ್ದ ಬಂಡಮೀದತಾಂಡ ಗ್ರಾಮದ ಶಾಲೆ ಪೋಷಕರ ಒತ್ತಾಯದ ಮೇರೆಗೆ ಪುನರಾರಂಭಗೊಂಡಿದೆ.

ಗಡಿ ಭಾಗದಲ್ಲಿರುವ ತಾಲ್ಲೂಕಿನ ಸರ್ಕಾರಿ ಶಾಲೆಗಳಿಗೆ ಒಂದೆಡೆ ಖಾಸಗಿ ಶಾಲೆಗಳ ಪ್ರಭಾವ ಹೆಚ್ಚಾದರೆ ಮತ್ತೊಂದೆಡೆ ನೆರೆಯ ಆಂಧ್ರ ಪ್ರದೇಶದ ತೆಲುಗು ಭಾಷೆಯ ಪ್ರಭಾವದಿಂದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಮಸ್ಯೆಯಾಗುತ್ತಿತ್ತು. ಆದರೆ ಈ ಬಾರಿ ಅದಕ್ಕೆ ವ್ಯತಿರಿಕ್ತವಾಗಿ ಸರ್ಕಾರಿ ಶಾಲೆಗಳ ಮೇಲೆ ಆಸಕ್ತಿ ಹೆಚ್ಚಾಗಿದೆ.

ಸರ್ಕಾರಿ ಶಾಲೆಗಳಲ್ಲಿನ ಗುಣಮಟ್ಟ ಶಿಕ್ಷಣ, ಮೂಲಸೌಕರ್ಯಗಳ ವ್ಯವಸ್ಥೆ ಹಾಗೂ ಬಿಸಿಯೂಟ, ಪಠ್ಯಪುಸ್ತಕ
ಗಳು, ಸಮವಸ್ತ್ರ, ಶೂ ಸೇರಿದಂತೆ ಇನ್ನಿತರೆ ಸೌಲಭ್ಯಗಳಿವೆ. ಆದರೂ ಸರ್ಕಾರಿ ಶಾಲೆಗಳೆಂದರೆ ಪೋಷಕರು ಮೂಗು ಮುರಿಯುತ್ತಾರೆ. ಇದೀಗ ಈ ಬಾರಿಯ ಕೋವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಪೋಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯ ಮೆಟ್ಟಿಲೇರುವಂತೆ ಮಾಡಿರುವುದು ಗಡಿ ಭಾಗದಲ್ಲಿ ಉತ್ತಮ ಬೆಳವಣಿಗೆಯಾಗಿದೆ.

ADVERTISEMENT

‘ರಾಜ್ಯದ ಗಡಿ ಭಾಗದಲ್ಲಿನ ಈ ತಾಲ್ಲೂಕಿನಲ್ಲಿ ಪ್ರತಿ ಶೈಕ್ಷಣಿಕ ವರ್ಷವೂ ಕೂಡ ಒಂದಲ್ಲ ಒಂದು ಸರ್ಕಾರಿ ಶಾಲೆಯನ್ನು ಮಕ್ಕಳ ದಾಖಲಾತಿ ಕೊರತೆಯಿಂದ ಪರ್ಯಾಯ ಮಾರ್ಗವಿಲ್ಲದೆ ಮುಚ್ಚಲಾಗುತ್ತಿತ್ತು. ಅಲ್ಲಿನ ಶಿಕ್ಷಕರನ್ನು ಸಮೀಪದ ಶಾಲೆಗಳಿಗೆ ನಿಯೋಜನೆಗೊಳಿಸುವ ಪರಿಸ್ಥಿತಿ ಎದುರಾಗುತ್ತಿತ್ತು. ಆದರೆ ಈ ಬಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸುವ ಜತೆಗೆ ಯಾವುದೇ ಶಾಲೆಯನ್ನು ಮುಚ್ಚದೆ, ಸುಮಾರು ನಾಲ್ಕೈದು ವರ್ಷಗಳಿಂದ ಮುಚ್ಚಿದ್ದ ಗಡಿ ಭಾಗದ ಶಾಲೆಯನ್ನು ಪೋಷಕರ ಒತ್ತಾಯದ ಮೇಲೆ ಪುನಃ ಆರಂಭಿಸಲಾಗಿದ್ದು, ಮಕ್ಕಳ ದಾಖಲಾತಿಯನ್ನು ಮಾಡಿಕೊಳ್ಳಲಾಗುತ್ತಿದೆ’ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

‘ಅವಿರತ’ ಸೌಕರ್ಯ: ’ಬಂಡಮೀದತಾಂಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಉತ್ತಮ ಶಾಲಾ ಕಟ್ಟಡ ಮತ್ತು ಶಿಕ್ಷಕರನ್ನು ಒಳಗೊಂಡಿತ್ತು, ಆದರೆ ಈ ಗ್ರಾಮದಲ್ಲಿನ ಪೋಷಕರು ಕೂಲಿಯನ್ನು ಅರಸಿ ಊರಿಂದ ಊರಿಗೆ ವಲಸೆ ಹೋಗುತ್ತಿದ್ದ ಪರಿಣಾಮವಾಗಿ ತಮ್ಮ ಮಕ್ಕಳನ್ನು ಈ ಶಾಲೆಗೆ ದಾಖಲಿಸಲು ಸಾಧ್ಯವಾಗುತ್ತಿಲಿಲ್ಲ. ಶಾಲೆ ಮುಚ್ಚಿತ್ತು. ಕೋವಿಡ್ ಪರಿಣಾಮವಾಗಿ ಊರಿಂದ ಹೊರಗಡೆ ಹೋಗಲು ಕಷ್ಟವಾಯಿತು. ಹೀಗಾಗಿ, ಮಕ್ಕಳನ್ನು ಪುನಃ ಸರ್ಕಾರಿ ಶಾಲೆಗೆ ದಾಖಲಿಸುತ್ತೇವೆ. ತೆರೆಯುವಂತೆ ಪೋಷಕರೇ ಒತ್ತಾಯ ಮಾಡಿದ್ದರು. ಈ ಮಾಹಿತಿಯನ್ನು ಕೆಲವು ಶಿಕ್ಷಕರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು. ಇದಕ್ಕೆ ಬೆಂಗಳೂರಿನ ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸ ಮಾಡುವ ಸ್ನೇಹಿತರು ನಿರ್ಮಾಣ ಮಾಡಿಕೊಂಡಿರುವ 'ಅವಿರತ' ಟ್ರಸ್ಟ್‌ನವರು ಸ್ಪಂದಿಸಿ ಸೌಕರ್ಯ ಕಲ್ಪಿಸಿದರು’ ಎನ್ನುತ್ತಾರೆ ಈ ಶಾಲೆಯ ಶಿಕ್ಷಕರಾದ ಲಕ್ಷ್ಮಿನಾರಾಯಣ.

ಇಡೀ ಜಿಲ್ಲೆಯಲ್ಲಿ ಕಳೆದ ಐದಾರು ದಶಕಗಳಿಂದಲೂ ಮೌಲ್ಯಾಧಾರಿತ ಶಿಕ್ಷಣಕ್ಕೆ ಉತ್ತಮ ಆಯಾಮಗಳನ್ನು ಒಳಗೊಂಡಿರುವ ಗೌರಿಬಿದನೂರು ತಾಲ್ಲೂಕು ಶಿಕ್ಷಕ ತಜ್ಞ ಡಾ.ಎಚ್.ನರಸಿಂಹಯ್ಯ ರವರಂತಹ ಮಹಾನ್ ವ್ಯಕ್ತಿ ಈ ಭಾಗದಲ್ಲಿ ಹುಟ್ಟಿ ಗ್ರಾಮೀಣ ಭಾಗದಲ್ಲಿನ ಮಕ್ಕಳಿಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ಉದ್ದೇಶದಿಂದ ಸಾಕಷ್ಟು ಶಾಲೆ ಮತ್ತು ಕಾಲೇಜುಗಳ ಆರಂಭಕ್ಕೆ ಸಾಕ್ಷಿಯಾಗಿದ್ದಾರೆ.

21 ಸಾವಿರ ವಿದ್ಯಾರ್ಥಿಗಳು

ಗೌರಿಬಿದನೂರು ತಾಲ್ಲೂಕಿನಲ್ಲಿ 163 ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, 96 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 22 ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, 1 ಕೆಜಿಬಿವಿ ಶಾಲೆ ಹಾಗೂ 23 ಸರ್ಕಾರಿ ಪ್ರೌಢಶಾಲೆಗಳು ಸೇರಿದಂತೆ ಒಟ್ಟು 305 ಸರ್ಕಾರಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 10,343 ಗಂಡು ಮತ್ತು 11,356 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 21,699 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ.

ಇದಲ್ಲದೆ ಅನುದಾನಿತ 1 ಕಿರಿಯ ಪ್ರಾಥಮಿಕ ಶಾಲೆ, 6 ಹಿರಿಯ ಪ್ರಾಥಮಿಕ ಶಾಲೆ, 13 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 20 ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳಲ್ಲಿ 1731 ಗಂಡು ಮತ್ತು 1388 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 3119 ಮಕ್ಕಳು ಓದುತ್ತಿದ್ದಾರೆ‌.

ಖಾಸಗೀ ಶಾಲೆಗಳು ಅಥವಾ ಅನುದಾನ ರಹಿತ (ರಾಜ್ಯ ಪಠ್ಯಕ್ರಮ) 6 ಕಿರಿಯ ಪ್ರಾಥಮಿಕ ಶಾಲೆಗಳು, 22 ಹಿರಿಯ ಪ್ರಾಥಮಿಕ ಶಾಲೆಗಳು ಹಾಗೂ 5 ಪ್ರೌಢಶಾಲೆಗಳು ಸೇರಿದಂತೆ ಒಟ್ಟು 33 ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಕೇಂದ್ರ ಪಠ್ಯಕ್ರಮದಡಿಯಲ್ಲಿ 4 ಸಿಬಿಎಸ್ಇ ಮತ್ತು 3 ಐಸಿಎಸ್ಇ ಸೇರಿದಂತೆ ಒಟ್ಟು 7 ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ 8,008 ಗಂಡು ಮತ್ತು 7,481 ಹೆಣ್ಣು ಸೇರಿದಂತೆ ಒಟ್ಟು 15,489 ಮಕ್ಕಳು ಓದುತ್ತಿದ್ದಾರೆ‌.

ಇದಲ್ಲದೆ ಒಂದು ಕೇಂದ್ರೀಯ ವಿದ್ಯಾಲಯ, ಸಮಾಜ ಕಲ್ಯಾಣ ಇಲಾಖೆಯ ಒಂದು ಕಿರಿಯ ಪ್ರಾಥಮಿಕ ಶಾಲೆ, 5 ಹಿರಿಯ ಪ್ರಾಥಮಿಕ ಶಾಲೆ (ಕಿತ್ತೂರು ರಾಣಿ ಚನ್ನಮ್ಮ) ಹಾಗೂ ಒಂದು ಅಲ್ಪ ಸಂಖ್ಯಾತರ ಶಾಲೆ (ಮೌಲಾನಾ ಅಬ್ದುಲ್ ಕಲಾಂ ಶಾಲೆ) ಗಳು ಕಾರ್ಯನಿರ್ವಹಿಸುತ್ತಿವೆ.

ಇವೆಲ್ಲದರ ನಡುವೆಯೂ ಈ ಬಾರಿ ತಾಲ್ಲೂಕು ವಿವಿಧ ಖಾಸಗಿ ಶಾಲೆಗಳಿಂದ 755 ಗಂಡು ಮತ್ತು 642 ಹೆಣ್ಣು ಸೇರಿದಂತೆ ಒಟ್ಟು 1397 ಮಕ್ಕಳು ಸಮೀಪದ ಸರ್ಕಾರಿ ಶಾಲೆಗಳಿಗೆ ದಾಖಲಾಗುವ ಮೂಲಕ ಸರ್ಕಾರಿ ಶಾಲೆಗಳ ಪ್ರಗತಿಗೆ ಕೈ ಜೋಡಿಸಿದ್ದಾರೆ.

ಎಲ್ಲ ಶಾಲೆಗಳಲ್ಲಿ ದಾಖಲಾತಿ ಹೆಚ್ಚಳ

ಗೌರಿಬಿದನೂರು ತಾಲ್ಲೂಕಿನಲ್ಲಿ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಈ ಬಾರಿ ಮಕ್ಕಳ‌ ದಾಖಲಾತಿಯಲ್ಲಿ ಏರಿಕೆಯಾಗಿರುವುದು ಸಂತಸದ ವಿಚಾರವಾಗಿದೆ. ಇದರಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಇಲಾಖೆಯು ಬೆನ್ನೆಲುಬಾಗಿ ನಿಲ್ಲುತ್ತದೆ. ಜತೆಗೆ ಈ ಬಾರಿ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಮಕ್ಕಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದು, ನಾಲ್ಕೈದು ವರ್ಷಗಳಿಂದ ಮುಚ್ಚಿದ ಶಾಲೆ ಪುನಃ ಆರಂಭವಾಗಿರುವುದು ಶೈಕ್ಷಣಿಕ ಪ್ರಗತಿಗೆ ಮತ್ತೊಂದು ಗರಿ ಸೇರಿದಂತಿದೆ. ಸರ್ಕಾರಿ ಶಾಲೆಗಳ ಉಳಿವು, ಬೆಳವಣಿಗೆಗಾಗಿ ಶ್ರಮಿಸಲು ಇಲಾಖೆ ಸದಾ ಬದ್ಧವಾಗಿದೆ.

- ಕೆ.ವಿ.ಶ್ರೀನಿವಾಸಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ, ಗೌರಿಬಿದನೂರು

ಶಿಕ್ಷಣ ಸಚಿವರ ಭೇಟಿ ಇಂದು

ರಾಜ್ಯದಲ್ಲಿ ದೆಹಲಿ ಮಾದರಿಯಲ್ಲಿ ಸರ್ಕಾರಿ ಶಾಲೆಗಳನ್ನು ನಿರ್ಮಾಣ ಮಾಡುವ ಉದ್ದೇಶದಿಂದ ಪ್ರಾಯೋಗಿಕ ಹಂತವಾಗಿ ರಾಜ್ಯದಲ್ಲಿ ಒಂದೆರಡು ಸರ್ಕಾರಿ ಶಾಲೆಗಳನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಿರುವ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಅವರು ಗೌರಿಬಿದನೂರು ತಾಲ್ಲೂಕಿಗೆ ಶುಕ್ರವಾರ ಭೇಟಿ ನೀಡಲಿದ್ದಾರೆ. ಈ ವೇಳೆ ತಾಲ್ಲೂಕಿನ ಗಡಿ ಭಾಗದ ಗ್ರಾಮವಾದ ನಂಜಯ್ಯಗಾರಹಳ್ಳಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿನ ಮಕ್ಕಳೊಂದಿಗೆ ಸಂವಾದ ನಡೆಸಲಿದ್ದಾರೆ. ಬಳಿಕ ನಗರದ ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆಯನ್ನು ಪರಿಶೀಲಿಸಲಿದ್ದಾರೆ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.