ADVERTISEMENT

ಸಂಭಾವನೆ, ಭತ್ಯೆ ಬಿಡುಗಡೆಗೆ ಆಗ್ರಹ

ಅರ್ಥಶಾಸ್ತ್ರದ ವಿಷಯಾಧಾರಿತ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ ಉಪನ್ಯಾಸಕರಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 11:58 IST
Last Updated 31 ಡಿಸೆಂಬರ್ 2019, 11:58 IST
ನಗರದ ಸೆಂಟ್ ಜೋಸೆಫ್ ಕಾಲೇಜು ಎದುರು ಉಪನ್ಯಾಸಕರು ಪ್ರತಿಭಟನೆ ನಡೆಸಿದರು.
ನಗರದ ಸೆಂಟ್ ಜೋಸೆಫ್ ಕಾಲೇಜು ಎದುರು ಉಪನ್ಯಾಸಕರು ಪ್ರತಿಭಟನೆ ನಡೆಸಿದರು.   

ಚಿಕ್ಕಬಳ್ಳಾಪುರ: ಜಿಲ್ಲಾ ಮಟ್ಟದ ಅರ್ಥಶಾಸ್ತ್ರದ ವಿಷಯಾಧಾರಿತ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿದ ಸಂಪನ್ಮೂಲ ಉಪನ್ಯಾಸಕರಿಗೆ ಸಂಭಾವನೆ, ಪ್ರಯಾಣ ಭತ್ಯೆ ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ನಗರದ ಸೆಂಟ್ ಜೋಸೆಫ್ ಕಾಲೇಜು ಎದುರು ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮುನಿರೆಡ್ಡಿ, ‘ಪದವಿ ಪೂರ್ವ ಶಿಕ್ಷಣ ಇಲಾಖೆಯು 2018- 19ನೇ ಸಾಲಿನಲ್ಲಿ ಅರ್ಥಶಾಸ್ತ್ರ ವಿಷಯಾಧಾರಿತ ಏಳು ದಿನಗಳ ತರಬೇತಿ ಕಾರ್ಯಗಾರ ನಡೆಸಿತ್ತು. ಇದರಲ್ಲಿ 30 ಉಪನ್ಯಾಸಕರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ಆದರೆ, ಈವರೆಗೆ ಇಲಾಖೆಯಿಂದ ಉಪನ್ಯಾಸಕರಿಗೆ ಸಂಭಾವನೆ, ಪ್ರಯಾಣ ಭತ್ಯೆ ನೀಡಿಲ್ಲ’ ಎಂದು ಆರೋಪಿಸಿದರು.

‘ತರಬೇತಿ ಕಾರ್ಯಗಾರದಲ್ಲಿ 28 ಅಧಿವೇಶನಗಳನ್ನು ನಡೆಸಲಾಗಿತ್ತು. ಇಲಾಖೆ ನಿಗದಿಪಡಿಸಿರುವಂತೆ ಒಂದು ಅಧಿವೇಶನಕ್ಕೆ ಸಂಪನ್ಮೂಲ ಉಪನ್ಯಾಸಕರಿಗೆ ₹2,100 ಸಂಭಾವನೆ, ₹500 ಪ್ರಯಾಣ ಭತ್ಯೆ ನೀಡಬೇಕು. ಅದಕ್ಕಾಗಿ ಇಲಾಖೆ ಮೊದಲ ಕಂತಿನಲ್ಲಿ ₹10,780, ಎರಡನೇ ಕಂತಿನಲ್ಲಿ ₹16,720 ಬಿಡುಗಡೆ ಮಾಡಿದೆ. ಆದರೆ, ಅಧಿಕಾರಿಗಳು ಈವರೆಗೆ ಆ ಹಣವನ್ನು ಉಪನ್ಯಾಸಕರಿಗೆ ಬಿಡುಗಡೆ ಮಾಡಿಲ್ಲ’ ಎಂದು ದೂರಿದರು.

ADVERTISEMENT

‘ಕಾರ್ಯಗಾರದಲ್ಲಿ ಭಾಗವಹಿಸಿದ ಉಪನ್ಯಾಸಕರಿಗೆ ಹಣ ಬಿಡುಗಡೆಗೊಳಿಸುವಂತೆ ಅನೇಕ ಬಾರಿ ಇಲಾಖೆಯ ಉಪನಿರ್ದೇಶಕರಿಗೆ ಲಿಖಿತ ದೂರು ನೀಡಿ ಗಮನ ಸೆಳೆದರೂ ಪ್ರಯೋಜವಾಗಿಲ್ಲ. ಕೂಡಲೇ ಇಲಾಖೆ ತರಬೇತಿಯಲ್ಲಿ ಭಾಗವಹಿಸಿದ ಎಲ್ಲ ಸಂಪನ್ಮೂಲ ವ್ಯಕ್ತಿಗಳಿಗೆ ಸಂಭಾವನೆ, ಪ್ರಯಾಣ ಭತ್ಯೆ ವಿತರಿಸಬೇಕು. ಇಲ್ಲವಾದರೆ ಇಲಾಖೆಯಿಂದ ಮುಂದಿನ ದಿನಗಳಲ್ಲಿ ನಡೆಯುವ ಯಾವುದೇ ಕಾರ್ಯಗಾರದಲ್ಲಿ ಉಪನ್ಯಾಸಕರು ಭಾಗವಹಿಸುವುದಿಲ್ಲ’ ಎಂದು ತಿಳಿಸಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮಾತನಾಡಿ, ‘ಕಾರ್ಯಗಾರದಲ್ಲಿ 30 ಉಪನ್ಯಾಸಕರು ಭಾಗವಹಿಸಿದ್ದರು. ಇದರಲ್ಲಿ 11 ಜನರಿಗೆ ಇಲಾಖೆ ಹಣ ಬಿಡುಗಡೆಗೊಳಿಸಿದೆ. ಇನ್ನೂ 19 ಉಪನ್ಯಾಸಕರಿಗೆ ₹53,276 ಬಾಕಿ ನೀಡಬೇಕಿದೆ. ಕೂಡಲೇ ಆ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಉಪನ್ಯಾಸಕರ ಸಂಘದ ಕಾರ್ಯದರ್ಶಿ ರವಿಚಂದ್ರ, ಖಜಾಂಚಿ ನಂಜಿರೆಡ್ಡಿ, ಉಪನ್ಯಾಸಕರಾದ ಚಂದ್ರಶೇಖರ್, ಸುರೇಶ್, ನರಸಿಂಹರೆಡ್ಡಿ, ಶಂಕರಪ್ಪ, ರೆಡ್ಡಪ್ಪ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.