ADVERTISEMENT

ಚಿಂತಾಮಣಿ: ಬಟ್ಟೆ ಅಂಗಡಿಗೆ ಅವಕಾಶ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 2:36 IST
Last Updated 12 ಜೂನ್ 2021, 2:36 IST
ಚಿಂತಾಮಣಿಯಲ್ಲಿ ಬಟ್ಟೆ ಮಾರಾಟಗಾರರ ಸಂಘದ ಪದಾಧಿಕಾರಿಗಳು ಶುಕ್ರವಾರ ತಹಶೀಲ್ದಾರ್ ಹನುಮಂತರಾಯಪ್ಪ ಅವರಿಗೆ ಮನವಿ ಸಲ್ಲಿಸಿದರು
ಚಿಂತಾಮಣಿಯಲ್ಲಿ ಬಟ್ಟೆ ಮಾರಾಟಗಾರರ ಸಂಘದ ಪದಾಧಿಕಾರಿಗಳು ಶುಕ್ರವಾರ ತಹಶೀಲ್ದಾರ್ ಹನುಮಂತರಾಯಪ್ಪ ಅವರಿಗೆ ಮನವಿ ಸಲ್ಲಿಸಿದರು   

ಚಿಂತಾಮಣಿ: ‘ಸರ್ಕಾರ ಜೂನ್ 14ರಿಂದ ಸಡಿಲಗೊಳಿಸಿರುವ ಲಾಕ್‌ಡೌನ್ ನಿಯಮಗಳನ್ನು ತಮಗೂ ಅನ್ವಯಿಸಬೇಕು’ ಎಂದು ನಗರದ ಬಟ್ಟೆ ಮಾರಾಟಗಾರರ ಸಂಘವು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

‘ಬಟ್ಟೆ ಮಾರಾಟಗಾರರು ಕಳೆದ ವರ್ಷದ ಲಾಕ್‌ಡೌನ್‌ನಿಂದ ತೀವ್ರ ನಷ್ಟಕ್ಕೆ ಒಳಗಾಗಿದ್ದರು. ಇತ್ತೀಚೆಗೆ ಸ್ವಲ್ಪಮಟ್ಟಿಗೆ ಚೇತರಿಸಿ ಕೊಳ್ಳುತ್ತಿರುವಾಗಲೇ ಎರಡನೇ ಅಲೆ ಅಪ್ಪಳಿಸಿದೆ. ಏಪ್ರಿಲ್ 22ರಿಂದ ಇದುವರೆಗೂ ಅಂಗಡಿಗಳನ್ನು ತೆರೆಯದೆ ಸರ್ಕಾರದ ನಿಯಮಗಳನ್ನು ಪಾಲಿಸಿದ್ದೇವೆ. ವಿದ್ಯುತ್ ಬಿಲ್ ಮತ್ತು ಬಾಡಿಗೆಗಳನ್ನು ಕಟ್ಟಲಾಗದೆ ಸಂಕಷ್ಟಕ್ಕೆ ಒಳಗಾಗಿದ್ದೇವೆ’ ಎಂದು ಸಂಘದ ನಿಯೋಗವು ಶುಕ್ರವಾರ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದೆ.

‘ಸರ್ಕಾರದ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸಿದ್ದೇವೆ. ಅಂಗಡಿಗಳ ನೌಕರರನ್ನು ಯಾವುದೇ ಪ್ಯಾಕೇಜ್‌ನಲ್ಲಿ ಸೇರ್ಪಡೆ ಮಾಡಿಲ್ಲ. ಅಂಗಡಿಗಳಲ್ಲಿ ಕೆಲಸ ಮಾಡುವ ನೂರಾರು ಜನರ ಕುಟುಂಬಗಳು ಜೀವನ ನಿರ್ವಹಣೆಗೆ ಪರದಾಡುತ್ತಿವೆ. ಸಂಗ್ರಹಿಸಿಕೊಂಡಿದ್ದ ಅಲ್ಪ-ಸ್ವಲ್ಪ ಹಣ, ಆಭರಣಗಳನ್ನು ಕಳೆದ ವರ್ಷ ಕೋವಿಡ್ ಅವಧಿಯಲ್ಲಿ ಖರ್ಚು ಮಾಡಿಕೊಂಡಿದ್ದಾರೆ’ ಎಂದಿದ್ದಾರೆ.

ADVERTISEMENT

‘ಸರ್ಕಾರಿ ನಿಯಮಗಳನ್ನು ಪಾಲಿಸಿಕೊಂಡು ವ್ಯಾಪಾರ ವಹಿವಾಟು ನಡೆಸುತ್ತೇವೆ. ಸಂಕಷ್ಟಕ್ಕೆ ಒಳಗಾಗಿರುವ ಮಾಲೀಕರು ಮತ್ತು ನೌಕರರ ಕುಟುಂಬಗಳಿಗೂ ಸಹಾಯವಾಗುತ್ತದೆ’ ಎಂದು ಮನವಿ ಮಾಡಿದ್ದಾರೆ.

ತಹಶೀಲ್ದಾರ್ ಹನುಮಂತರಾಯಪ್ಪ ಮನವಿಯನ್ನು ಸ್ವೀಕರಿಸಿ ಹಿರಿಯ ಅಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುವುದು. ಸರ್ಕಾರಿ ಆದೇಶದಂತೆ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಸಂಘದ ಅಧ್ಯಕ್ಷ ಕೆ.ಎಲ್.ಪ್ರಸಾದ್, ಕಾರ್ಯದರ್ಶಿ ಕೆ.ಆರ್.ಶರತ್, ಖಜಾಂಚಿ ಡಿ.ಲೋಕೇಶಬಾಬು ಹಾಗೂ ಪದಾಧಿಕಾರಿಗಳು ನಿಯೋಗದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.